"ಅತ್ತಿಗೆ ನನಗೆ 30 ಲಕ್ಷ ರುಪಾಯಿ ಸಾಕು.": ಧೋನಿ ಬಗ್ಗೆ ನೀವೆಲ್ಲೂ ಕೇಳಿರದ ಆ ದಿನಗಳ ಕಥೆ ಮೆಲುಕು ಹಾಕಿದ ಮಾಜಿ ಕ್ರಿಕೆಟಿಗ..!

By Naveen Kodase  |  First Published Jul 8, 2023, 11:22 AM IST

ರಾಂಚಿಯಿಂದ ಬಂದ ಧೋನಿ, ಇದೀಗ ಭಾರತದ ದಿಗ್ಗಜ ಕ್ರಿಕೆಟಿಗ
ಆರಂಭದಲ್ಲಿ ಕ್ರಿಕೆಟ್‌ನಲ್ಲಿ ಬದುಕು ಕಟ್ಟಿಕೊಳ್ಳಲು ಪರದಾಡಿದ್ದ ಮಹಿ
ಮಹಿಯ ಆ ದಿನಗಳನ್ನು ಮೆಲುಕು ಹಾಕಿದ ವಾಸೀಂ ಜಾಫರ್


ಮುಂಬೈ(ಜು.08): ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೈದಾನದೊಳಗೆ ಹಾಗೂ ಮೈದಾನದಾಚಿಗಿನ ಸಿಂಪಲ್ ನಡೆಯಿಂದಾಗಿ ಜಗತ್ತಿನಾದ್ಯಂತ ಅಭಿಮಾನಿಗಳಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಎಂ ಎಸ್ ಧೋನಿ ಓರ್ವ ಚಾಣಾಕ್ಷ ನಾಯಕ ಮಾತ್ರವಲ್ಲ, ಮುತ್ತಿನಂಥ ಮನುಷ್ಯ ಕೂಡಾ ಹೌದು. ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಟೀಂ ಇಂಡಿಯಾ ಸಹ ಆಟಗಾರನಾಗಿದ್ದ ವಾಸೀಂ ಜಾಫರ್‌, ನೀವೆಂದೂ ಕೇಳಿರದ ಧೋನಿ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟರ್‌ ವಾಸೀಂ ಜಾಫರ್‌, ಕ್ಯಾಪ್ಟನ್ ಕೂಲ್ ಧೋನಿಯ ಆರಂಭಿಕ ದಿನಗಳ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ. ರೈಲ್ವೇ ಇಲಾಖೆಯಲ್ಲಿ ಸಿಕ್ಕ ಕೆಲವನ್ನು ಬಿಟ್ಟು, ಪೂರ್ಣ ಪ್ರಮಾಣದ ಕ್ರಿಕೆಟಿಗನಾಗುವ ಉದ್ದೇಶದಿಂದ ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸಿದ್ದರು. ಭಾರತ ತಂಡದಲ್ಲಿ ಸ್ಥಾನ ಪಡೆದರೂ ಕೂಡಾ ಅಲ್ಲಿ ಆರಂಭದ ದಿನಗಳಲ್ಲಿ ನೆಲೆ ಕಂಡುಕೊಳ್ಳಲು ಧೋನಿ ಸಾಕಷ್ಟು ಪರದಾಟ ನಡೆಸುತ್ತಿದ್ದರು. 

Latest Videos

undefined

ಆ ದಿನಗಳಲ್ಲಿ ವಾಸೀಂ ಜಾಫರ್ ಹಾಗೂ ಅವರ ಪತ್ನಿ ಮತ್ತು ದಿನೇಶ್ ಕಾರ್ತಿಕ್ ಹಾಗೂ ಅವರ ಪತ್ನಿ ಜತೆಗೆ ಎಂ ಎಸ್ ಧೋನಿ ಕೊನೆಯ ಸಾಲಿನಲ್ಲಿ ಕುಳಿತು ಮಾತನಾಡುತ್ತಿದ್ದರು. ಧೋನಿ, ವಾಸೀಂ ಜಾಫರ್ ಪತ್ನಿಯ ಜತೆಗೆ ಹೆಚ್ಚಾಗಿ ಕುಳಿತುಕೊಳ್ಳುತ್ತಿದ್ದರಿಂದ ಅವರಿಬ್ಬರು ಹೆಚ್ಚು ಹೆಚ್ಚು ಮಾತಾನಾಡುತ್ತಿದ್ದರು. ಆಗ ಅವರು ಕ್ರಿಕೆಟ್‌ನಿಂದ ನಿರೀಕ್ಷೆ ಏನಿತ್ತು ಹಾಗೂ ಅವರ ವಿನಮ್ರ ಮಹತ್ವಾಕಾಂಕ್ಷೆ ಏನಿತ್ತು ಎನ್ನುವ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಧೋನಿ ತಮ್ಮ ಕ್ರಿಕೆಟ್ ಬದುಕಿನ ಆರಂಭದ ದಿನಗಳಲ್ಲಿ 30 ಲಕ್ಷ ರುಪಾಯಿ ಹಣವನ್ನು ಗಳಿಸಬೇಕು ಹಾಗೂ ತನ್ನ ತವರು ರಾಂಚಿಯಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಇದೀಗ ವಾಸೀಂ ಜಾಫರ್ ಬಿಚ್ಚಿಟ್ಟಿದ್ದಾರೆ.

MS Dhoni ಕೂಲ್ ಕ್ಯಾಪ್ಟನ್ ಅಲ್ವೇ ಅಲ್ಲ..! ಧೋನಿಯ ಇನ್ನೊಂದು ಮುಖ ಅನಾವರಣ ಮಾಡಿದ ಟೀಂ ಇಂಡಿಯಾ ಸ್ಟಾರ್ ಆಟಗಾರ

"ನನ್ನ ಪತ್ನಿಯ ಬಳಿ ಧೋನಿ ಹೇಳಿದ ಮಾತುಗಳು ನನಗೆ ಇನ್ನೂ ನೆನಪಿವೆ. "ಅತ್ತಿಗೆ ನಾನು 30 ಲಕ್ಷ ರುಪಾಯಿ ಸಂಪಾದಿಸಬೇಕು. ಒಂದು ವೇಳೆ ನಾನು 30 ಲಕ್ಷ ರುಪಾಯಿ ಸಂಪಾದಿಸಿದೆನೆಂದರೆ, ಖಂಡಿತ ನಾನು ನೆಮ್ಮದಿಯಿಂದ ಜೀವನ ಮಾಡುತ್ತೀನಿ" ಎಂದು ಹೇಳಿದ್ದಾಗಿ ವಾಸೀಂ ಜಾಫರ್‌, SportsKeeda ಜತೆಗಿನ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇನ್ನು ಇದೇ ವೇಳೆ ಧೋನಿ ಸಮಯ ಸಿಕ್ಕಾಗಲೆಲ್ಲಾ, "ಏನು ಬೇಕಾದರೂ ಆಗಲಿ, ನಾನಂತೂ ರಾಂಚಿಯನ್ನು ತೊರೆಯುವುದಿಲ್ಲ" ಎಂದು ಹೇಳುತ್ತಿದ್ದರು ಎಂದು ವಾಸೀಂ ಜಾಫರ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ಧೋನಿ ತಮ್ಮ ತವರು ನೆಲದ ಕುರಿತಂತೆ ಇರುವ ಅಭಿಮಾನದ ಬಗ್ಗೆ ಜಾಫರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧೋನಿ ಕ್ರಿಕೆಟ್ ಆರಂಭದ ದಿನಗಳಲ್ಲಿ ಸಣ್ಣ ಕನಸು ಹಾಗೂ ಸಣ್ಣ ಗುರಿಯನ್ನು ಇಟ್ಟುಕೊಂಡಿದ್ದರು ಎಂದು ಜಾಫರ್ ಹೇಳಿದ್ದಾರೆ.

ವಿಶ್ವಕಪ್‌ಗೆ 3 ತಿಂಗಳಿರುವಾಗಲೇ ಕಣ್ಣೀರಿಟ್ಟು ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬಾಂಗ್ಲಾ ನಾಯಕ ತಮೀಮ್ ಇಕ್ಬಾಲ್‌..!

ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ, 2007ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್‌ ಹಂತದಲ್ಲೇ ಹೊರಬಿದ್ದು ನಿರಾಸೆ ಅನುಭವಿಸಿತ್ತು. ಇನ್ನು ಇದರ ಬೆನ್ನಲ್ಲೇ 2007ರ ಚೊಚ್ಚಲ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳೆಗೆ ಧೋನಿಗೆ ಭಾರತ ತಂಡದ ನಾಯಕ ಪಟ್ಟ ಕಟ್ಟಲಾಯಿತು. 2007ರಲ್ಲಿ ಭಾರತ ತಂಡದ ನಾಯಕರಾದ ಬಳಿಕ ಧೋನಿ ಚೊಚ್ಚಲ ಪ್ರಯತ್ನದಲ್ಲೇ ಭಾರತ ತಂಡವನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದರು. ಇನ್ನು 2009ರಲ್ಲಿ ಭಾರತ ತಂಡವು ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟು ಇತಿಹಾಸ ಬರೆದಿತ್ತು.

ಇನ್ನು ಐಸಿಸಿಯ ಮೂರು ಟ್ರೋಫಿ ಗೆದ್ದ ಜಗತ್ತಿನ ಮೊದಲ ಹಾಗೂ ಏಕೈಕ ನಾಯಕ ಎನ್ನುವ ಹೆಗ್ಗಳಿಕೆ ಧೋನಿಗಿದೆ. 2007ರಲ್ಲಿ ಎಂ ಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ಟಿ20 ವಿಶ್ವಕಪ್ ಜಯಿಸಿತು. ಇದಾದ ಬಳಿಕ 2011ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಧೋನಿ ಭಾರತಕ್ಕೆ ವಿಶ್ವಕಪ್ ಜಯಿಸಿಕೊಟ್ಟರು. ಇದಾದ ಬಳಿಕ 2013ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸುವ ಮೂಲಕ ಧೋನಿ ಭಾರತದ ಯಶಸ್ವಿ ನಾಯಕರಾಗಿ ಹೊರಹೊಮ್ಮಿದ್ದರು.

click me!