
ನವದೆಹಲಿ(ಜೂ.28): ಬಹುದಿನಗಳಿಂದ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಧಿಕೃತ ವೇಳಾಪಟ್ಟಿ ಕೊನೆಗೂ ಹೊರಬಿದ್ದಿದೆ. ಅ.5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದ ಮೂಲಕ ಟೂರ್ನಿಗೆ ಚಾಲನೆ ಸಿಗಲಿದ್ದು, ಇದೇ ಕ್ರೀಡಾಂಗಣದಲ್ಲಿ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅ.15ರಂದು ಮುಖಾಮುಖಿಯಾಗಲಿವೆ. ಭಾರತ ಅ.8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಅಭಿಯಾನ ಆರಂಭಿಸಲಿದೆ.
ಟೂರ್ನಿ ಆರಂಭಕ್ಕೆ ಸರಿಯಾಗಿ 100 ದಿನಗಳು ಬಾಕಿ ಇರುವಾಗ ಮಂಗಳವಾರ ಮುಂಬೈನಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಐಸಿಸಿ, ಬಿಸಿಸಿಐ ಜಂಟಿಯಾಗಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ (ICC Men's ODI World Cup 2023 Schedule) ವೇಳಾಪಟ್ಟಿ ಬಿಡುಗಡೆಗೊಳಿಸಿದವು. ಇತ್ತೀಚೆಗಷ್ಟೇ ಪ್ರಕಟಗೊಂಡಿದ್ದ ತಾತ್ಕಾಲಿಕ ವೇಳಾಪಟ್ಟಿಯನ್ನು ಕೆಲ ಬದಲಾವಣೆಗಳೊಂದಿಗೆ ಅಂತಿಮಗೊಳಿಸಲಾಗಿದೆ.
ರೋಜರ್ ಬಿನ್ನಿ BCCI ಅಧ್ಯಕ್ಷರಾದ್ರೂ ಬೆಂಗಳೂರಿನಲ್ಲಿ ಡಮ್ಮಿ ಮ್ಯಾಚ್..!
ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದರೂ ಪಾಕಿಸ್ತಾನ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಇನ್ನೂ ಖಚಿತವಾಗಿಲ್ಲ. ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ಈಗಲೂ ಸರ್ಕಾರದಿಂದ ಅನುಮತಿಗೆ ಕಾಯುತ್ತಿದೆ. ಈ ಬಗ್ಗೆ ಪಿಸಿಬಿ(PCB) ಮಾಹಿತಿ ನೀಡಿದ್ದು, ‘ಟೂರ್ನಿಯಲ್ಲಿ ಪಾಕ್ ತಂಡ ಪಾಲ್ಗೊಳ್ಳಲು ಹಾಗೂ ಅಹಮದಾಬಾದ್, ಮುಂಬೈನಲ್ಲಿ ಪಂದ್ಯವಾಡಲು ಸರ್ಕಾರ ಇನ್ನಷ್ಟೇ ಅನುಮತಿ ನೀಡಬೇಕು. ಸರ್ಕಾರ ಅನುಮತಿಸಿದರೆ ಮಾತ್ರ ಭಾರತಕ್ಕೆ ತೆರಳಲಿದ್ದೇವೆ’ ಎಂದಿದೆ. ಆದರೆ ಪಾಕ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ಐಸಿಸಿ (ICC) ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದೆ.
ಪಾಕ್ ಮನವಿ ತಿರಸ್ಕೃತ
ಟೂರ್ನಿಯ ತನ್ನ ಕೆಲ ಪಂದ್ಯಗಳ ಸ್ಥಳ ಬದಲಾವಣೆ ಮಾಡುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಡಿದ್ದ ಮನವಿಯನ್ನು ಐಸಿಸಿ, ಬಿಸಿಸಿಐ (BCCI) ತಿರಸ್ಕರಿಸಿದೆ. ಅಹಮದಾಬಾದ್ ಜೊತೆಗೆ ಇತರ 4 ಕ್ರೀಡಾಂಗಣಗಳಲ್ಲೂ ಪಾಕ್ ತನ್ನ ಪಂದ್ಯಗಳನ್ನಾಡಲಿದೆ. ಈ ಪೈಕಿ ಆಸ್ಟ್ರೇಲಿಯಾ(ಅ.20) ಹಾಗೂ ನ್ಯೂಜಿಲೆಂಡ್(ನ.04) ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ಸೆಣಸಾಡಲಿದ್ದು, ಕೋಲ್ಕತಾ, ಹೈದರಾಬಾದ್, ಚೆನ್ನೈನಲ್ಲೂ ತಲಾ 2 ಪಂದ್ಯಗಳನ್ನಾಡಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ
ಪಾಕಿಸ್ತಾನಕ್ಕೆ 2 ಪಂದ್ಯಬೆಂಗಳೂರಲ್ಲಿ ಒಟ್ಟು 5 ಪಂದ್ಯಗಳು ನಡೆಯಲಿವೆ. ಅ.20ಕ್ಕೆ ಪಾಕಿಸ್ತಾನ-ಆಸ್ಟ್ರೇಲಿಯಾ, ಅ.26ಕ್ಕೆ ಇಂಗ್ಲೆಂಡ್-ಕ್ವಾಲಿಫೈಯರ್ 2, ನ.4ಕ್ಕೆ ಪಾಕಿಸ್ತಾನ-ನ್ಯೂಜಿಲೆಂಡ್, ನ.9ಕ್ಕೆ ನ್ಯೂಜಿಲೆಂಡ್-ಕ್ವಾಲಿಫೈಯರ್ 2, ನ.11ಕ್ಕೆ ಭಾರತ-ಕ್ವಾಲಿಫೈಯರ್ 1 ಪಂದ್ಯಗಳಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ.
ಟೂರ್ನಿ ಮಾದರಿ ಹೇಗೆ?: ಟೂರ್ನಿ ಕಳೆದ ಬಾರಿಯಂತೆ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಪ್ರತಿ ತಂಡ ಇತರ 9 ತಂಡಗಳ ವಿರುದ್ಧ ತಲಾ 1 ಬಾರಿ ಸೆಣಸಾಡಲಿದೆ. ಲೀಗ್ ಹಂತದ ಮುಕ್ತಾಯಕ್ಕೆ ಅಗ್ರ 4 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಟೂರ್ನಿಯ 42 ಪಂದ್ಯಗಳು ಹಗಲು-ರಾತ್ರಿ ಹಾಗೂ ಇನ್ನುಳಿದ 6 ಪಂದ್ಯಗಳು ಹಗಲಿನಲ್ಲಿ ನಡೆಯಲಿವೆ. 2 ಪಂದ್ಯಗಳು ನಡೆಯಲಿರುವ ದಿನ ಮೊದಲ ಪಂದ್ಯ ಬೆಳಗ್ಗೆ 10.30ಕ್ಕೆ, 2ನೇ ಪಂದ್ಯ ಮಧ್ಯಾಹ್ನ 2ಕ್ಕೆ ಆರಂಭಗೊಳ್ಳಲಿದೆ. ಒಂದೇ ಪಂದ್ಯವಿರುವ ದಿನ ಪಂದ್ಯ ಮಧ್ಯಾಹ್ನ 2ಕ್ಕೆ ಶುರುವಾಗಲಿದೆ.
ಮುಂಬೈ, ಕೋಲ್ಕತಾದಲ್ಲಿ ಸೆಮೀಸ್ಸೆಮಿಫೈನಲ್ ಪಂದ್ಯಗಳು ನ.15 ಹಾಗೂ 16ರಂದು ಕ್ರಮವಾಗಿ ಮುಂಬೈನ ವಾಂಖೇಡೆ ಹಾಗೂ ಕೋಲ್ಕತಾ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿವೆ. ಒಂದು ವೇಳೆ ಪಾಕಿಸ್ತಾನ ಸೆಮೀಸ್ ಪ್ರವೇಶಿಸಿದರೆ ಆ ತಂಡದ ಪಂದ್ಯ ಕೋಲ್ಕತಾದಲ್ಲಿ ನಡೆಯಲಿದೆ. ಭಾರತ ಸೆಮೀಸ್‌ಗೇರಿದರೆ ಪಂದ್ಯಕ್ಕೆ ಮುಂಬೈ ಆತಿಥ್ಯ ವಹಿಸಲಿದೆ. ಒಂದು ವೇಳೆ ಭಾರತ-ಪಾಕಿಸ್ತಾನ ಸೆಮೀಸ್‌ನಲ್ಲಿ ಎದುರಾಗುವ ಸಂದರ್ಭ ಬಂದರೆ ಪಂದ್ಯ ಕೋಲ್ಕತಾದಲ್ಲಿ ನಡೆಯಲಿದೆ ಎಂದು ಐಸಿಸಿ ತಿಳಿಸಿದೆ. ನ.19ರಂದು ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ:
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.