2011ರ ವಿಶ್ವಕಪ್ ವೇಳೆ ಧೋನಿ ಕಿಚಡಿ ಡಯೆಟ್..!
ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ವಿರೇಂದ್ರ ಸೆಹ್ವಾಗ್..!
2011ರಲ್ಲಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿದ್ದ ಟೀಂ ಇಂಡಿಯಾ
ನವದೆಹಲಿ(ಜೂ..28): ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಬರೋಬ್ಬರಿ 12 ವರ್ಷಗಳ ಬಳಿಕ ಮತ್ತೊಮ್ಮೆ ಭಾರತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿದೆ. 2011ರಲ್ಲೂ ಭಾರತ-ಬಾಂಗ್ಲಾದೇಶ-ಶ್ರೀಲಂಕಾ ಜಂಟಿಯಾಗಿ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿತ್ತು. ಆಗ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, ನೆರೆಯ ಶ್ರೀಲಂಕಾವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಭಾರತ ಏಕಾಂಗಿಯಾಗಿ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿದ್ದು, ದಶಕದ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ. ಹೀಗಿರುವಾಗಲೇ 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯ ವಿರೇಂದ್ರ ಸೆಹ್ವಾಗ್, ನೀವೆಂದು ಕೇಳಿರದ ಧೋನಿ ನಂಬುತ್ತಿದ್ದ ಕಿಚಡಿ ಸೀಕ್ರೇಟ್‌ವೊಂದನ್ನು ಬಿಚ್ಚಿಟ್ಟಿದ್ದಾರೆ.
1983ರ ಬಳಿಕ ಟೀಂ ಇಂಡಿಯಾ, ಏಕದಿನ ವಿಶ್ವಕಪ್ ಗೆಲ್ಲಲು ವಿಫಲವಾಗಿತ್ತು. ಆದರೆ 2011ರಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಬರೋಬ್ಬರಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಚಾಂಪಿಯನ್ ಆಗುವ ಮೂಲಕ ಆತಿಥ್ಯ ವಹಿಸಿದ ದೇಶವೇ ಕಪ್ ಗೆದ್ದ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. ಇನ್ನು 2011ರ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಕ್ಯಾಪ್ಟನ್ ಕೂಲ್ ಧೋನಿ, ಅಕ್ಕಿ ಹಾಗೂ ಮೊಸರಿನಿಂದ ತಯಾರಿಸಿದ ಕಿಚಡಿಯನ್ನು ಮಾತ್ರ ತಿಂದಿದ್ದರು ಎನ್ನುವ ಸೀಕ್ರೇಟ್ ಅನ್ನು ಸಹ ಆಟಗಾರ ವಿರೇಂದ್ರ ಸೆಹ್ವಾಗ್ ಬಿಚ್ಚಿಟ್ಟಿದ್ದಾರೆ. ಐಸಿಸಿಯು ಜೂನ್ 27ರಿಂದ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಶ್ರೀಲಂಕಾ ಕ್ರಿಕೆಟ್ ದಿಗ್ಗಜ ಮುತ್ತಯ್ಯ ಮುರುಳೀಧರನ್ ಜತೆಗಿನ ವೇಳೆ ಮಾತನಾಡಿದ ಸೆಹ್ವಾಗ್, ಕಿಚಡಿ ತಿಂದಿದ್ದು ಆತಿಥ್ಯ ವಹಿಸಿದ್ದ ತಂಡಕ್ಕೆ ಹೆಚ್ಚು ಪ್ರಯೋಜನವಾಯಿತು ಎಂದು ಧೋನಿ ಹೇಳಿದ್ದಾರೆ.
undefined
ಕಿಚಡಿ ಮಾಡುವುದು ಹೇಗೆಂದು ತಡಕಾಡಬೇಡಿ! ಸಿಂಪಲ್ಲಾಗಿ ಹೀಗ್ಮಾಡಿ!
" ಪ್ರತಿಯೊಬ್ಬರು ಒಂದಲ್ಲ ಒಂದು ತಮ್ಮದೇ ಆದ ಮೂಢನಂಬಿಕೆಗಳನ್ನು ಹೊಂದಿರುತ್ತಾರೆ. ಎಲ್ಲರೂ ತಮ್ಮದೇ ಆದ ನಂಬಿಕೆಗಳನ್ನು ಫಾಲೋ ಮಾಡುತ್ತಾರೆ. ಎಂ ಎಸ್ ಧೋನಿ ಕೂಡಾ ಕಿಚಡಿ ಕುರಿತಾಗಿ ಮೂಢನಂಬಿಕೆ ಹೊಂದಿದ್ದರು. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯುದ್ದಕ್ಕೂ ಅವರು ಕಿಚಡಿಯನ್ನು ತಿಂದಿದ್ದರು" ಎಂದು ಸೆಹ್ವಾಗ್ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಾತನಾಡುವಾಗ ವಿವರಿಸಿದ್ದಾರೆ.
"ನಾನು 2011ರ ಏಕದಿನ ವಿಶ್ವಕಪ್ ಆಡಲು ಹೋಗುತ್ತಿದ್ದಲೆಲ್ಲಾ ಜನರು ನಾವು ಈ ಬಾರಿ ವಿಶ್ವಕಪ್ ಗೆಲ್ಲಲಿ ಎಂದು ಬಯಸುತ್ತಿದ್ದರು. ನಮಗಿಂತ ಮೊದಲು ಯಾವ ಆತಿಥ್ಯ ವಹಿಸಿದ ದೇಶವು ವಿಶ್ವಕಪ್ ಜಯಿಸಿರಲಿಲ್ಲ. ಹೀಗಾಗಿ ಪ್ರತಿಯೊಬ್ಬರು ತಮ್ಮದೇ ಆದ ಮೂಢನಂಬಿಕೆಗಳನ್ನು ಹೊಂದಿದ್ದರು. ಧೋನಿ, 2011ರ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಪ್ರತಿದಿನ ಕಿಚಡಿ ತಿನ್ನುತ್ತಿದ್ದರು. ಒಂದು ವೇಳೆ ನಾನು ರನ್ ಗಳಿಸದಿದ್ದರೂ, ಈ ಮೂಢನಂಬಿಕೆಗಳು ನಮ್ಮ ಕೈಹಿಡಿಯುತ್ತಿವೆ ಹಾಗೂ ನಾವು ಪಂದ್ಯಗಳನ್ನು ಗೆಲ್ಲುತ್ತೇವೆ ಎಂದು ಧೋನಿ ಆಗಾಗ ನನ್ನ ಬಳಿ ಹೇಳುತ್ತಿದ್ದರು" ಎಂದು ಸೆಹ್ವಾಗ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ 2011ರ ವಿಶ್ವಕಪ್ ಫೈನಲ್‌ವರೆಗೂ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಿರಲಿಲ್ಲ. ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಧೋನಿ 8 ಪಂದ್ಯಗಳನ್ನಾಡಿ 150 ರನ್ ಗಳಿಸಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಧೋನಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಲಂಕಾ ಎದುರಿನ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 4ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಕ್ರೀಸ್‌ಗಿಳಿದ ಧೋನಿ ಅಜೇಯ 91 ರನ್ ಬಾರಿಸಿದ್ದರು. ಅದರಲ್ಲೂ ವಾಂಖೇಡೆ ಮೈದಾನದಲ್ಲಿ ನುವಾನ್ ಕುಲಸೇಖರ ಎದುರು ಗೆಲುವಿನ ಸಿಕ್ಸರ್ ಬಾರಿಸಿದ್ದು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿಯುವಂತೆ ಮಾಡಿದೆ.
2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ವಿರೇಂದ್ರ ಸೆಹ್ವಾಗ್ ಕೂಡಾ ಮಹತ್ವದ ಪಾತ್ರ ವಹಿಸಿದ್ದರು. ಸೆಹ್ವಾಗ್, 2011ರ ವಿಶ್ವಕಪ್ ಟೂರ್ನಿಯಲ್ಲಿ ಒಂದು ಭರ್ಜರಿ ಶತಕ ಸಹಿತ 380 ರನ್ ಬಾರಿಸಿದ್ದರು. ಆದರೆ ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ 275 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತ್ತು. ಸೆಹ್ವಾಗ್ ಖಾತೆ ತೆರೆಯುವ ಮುನ್ನವೇ ಲಸಿತ್ ಮಾಲಿಂಗಾ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದರು.