
ಸೆಂಚೂರಿಯನ್(ಜ.15): ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು, SA20 League ಟೂರ್ನಿಯಲ್ಲಿ ತಮ್ಮ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ವಿರುದ್ದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು 37 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಬಾರಿ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತೆಕ್ಕೆಗೆ ಸೇರ್ಪಡೆಗೊಂಡಿರುವ ಇಂಗ್ಲೆಂಡ್ ಸ್ಪೋಟಕ ಬ್ಯಾಟರ್ ವಿಲ್ ಜೇಕ್ಸ್ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಪ್ರಿಟೋರಿಯಾ ಕ್ಯಾಪಿಟಲ್ಸ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ವಿಲ್ ಜೇಕ್ಸ್ ಕೇವಲ 46 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 92 ರನ್ ಸಿಡಿಸಿ ಮಿಂಚಿದರು. ಇನ್ನು ಪ್ರಿಟೋರಿಯಾ ಕ್ಯಾಪಿಟಲ್ಸ್ ಪರ ಟ್ಯುನಿಶ್ ಡಿ ಬೃಯನ್ ಕೇವಲ 23 ಎಸೆತಗಳಲ್ಲಿ ಚುರುಕಿನ 42 ರನ್ ಸಿಡಿಸಿ ಮಿಂಚಿದರು.
ಇನ್ನು ಸವಾಲಿನ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ಆರಂಭದಲ್ಲೇ ಸರೇಲ್ ಇರ್ವಿ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಜೋರ್ಡನ್ ಕಾಕ್ಸ್ ವಿಕೆಟ್ ಕಳೆದುಕೊಂಡಿತು. ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಕ್ಕೆ ನಾಯಕ ವೇಯ್ನ್ ಪಾರ್ನೆಲ್ ಭರ್ಜರಿ ಆರಂಭವನ್ನೇ ಒದಗಿಸಿಕೊಟ್ಟರು. ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಪರ ನಾಯಕ ಏಯ್ಡನ್ ಮಾರ್ಕ್‌ರಮ್ 29 ಎಸೆತಗಳಲ್ಲಿ 46 ರನ್ ಹಾಗೂ ಕೊನೆಯಲ್ಲಿ ಮಾರ್ಕೊ ಯಾನ್ಸೆನ್ 20 ಎಸೆತಗಳಲ್ಲಿ ಅಜೇಯ 178 ರನ್ ಬಾರಿಸಿದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 178 ರನ್ ಗಳಿಸಲಷ್ಟೇ ಶಕ್ತವಾಯಿತು.
SA20 League: ಫಿಲ್ ಸಾಲ್ಟ್ ಅಬ್ಬರ, ಪ್ರಿಟೋರಿಯಾ ಕ್ಯಾಪಿಟಲ್ಸ್‌ಗೆ ಭರ್ಜರಿ ಜಯ
ಪ್ರಿಟೋರಿಯಾ ಕ್ಯಾಪಿಟಲ್ಸ್ ಪರ ನಾಯಕ ವೇಯ್ನ್ ಪಾರ್ನೆಲ್ ಕೇವಲ 20 ರನ್ ನೀಡಿ 2 ವಿಕೆಟ್ ಪಡೆದರೆ, ಇಂಗ್ಲೆಂಡ್ ಲೆಗ್‌ಸ್ಪಿನ್ನರ್ ಆದಿಲ್ ರಶೀದ್ 46 ರನ್ ನೀಡಿ 2 ಬಲಿ ಪಡೆದರು.
ಗಮನ ಸೆಳೆದ ವಿಲ್ ಜೇಕ್ಸ್: ಪಾಕಿಸ್ತಾನ ಎದುರಿನ ಸರಣಿಯಲ್ಲಿ ಅದ್ಭುತ ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿ ಆರ್‌ಸಿಬಿ ತೆಕ್ಕೆಗೆ ಸೇರಿದ್ದ ವಿಲ್ ಜೇಕ್ಸ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಮೊದಲ ಪಂದ್ಯದಲ್ಲಿ ವಿಲ್ ಜೇಕ್ಸ್ ಕೇವಲ 6 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ ಇದೀಗ ವಿಲ್ ಜೇಕ್ಸ್ ತಾನಾಡಿದ ಎರಡನೇ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ ಆರ್‌ಸಿಬಿ ಅಭಿಮಾನಿಗಳ ಪಾಳಯದಲ್ಲಿ ಪುಳಕವನ್ನುಂಟು ಮಾಡಿದ್ದಾರೆ. 92 ರನ್ ಸದ್ಯ SA20 ಲೀಗ್ ಟೂರ್ನಿಯಲ್ಲಿ ಆಟಗಾರನೊಬ್ಬ ದಾಖಲಿಸಿದ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿಕೊಂಡಿದೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.