ಶುಭ್‌ಮನ್‌ ಗಿಲ್ ಭರ್ಜರಿ ಶತಕ, ಬೃಹತ್ ಮೊತ್ತದತ್ತ ಟೀಂ ಇಂಡಿಯಾ..!

By Naveen KodaseFirst Published Jan 15, 2023, 3:55 PM IST
Highlights

ಲಂಕಾ ಎದುರು ಶತಕ ಸಿಡಿಸಿ ಸಂಭ್ರಮಿಸಿದ ಶುಭ್‌ಮನ್‌ ಗಿಲ್
ಏಕದಿನ ಕ್ರಿಕೆಟ್‌ನಲ್ಲಿ ಗಿಲ್ ಎರಡನೇ ಶತಕ ದಾಖಲು
65ನೇ ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ

ತಿರುವನಂತಪುರಂ(ಜ.15): ಟೀಂ ಇಂಡಿಯಾ ಆರಂಭಿಕ ಬ್ಯಾಟರ್‌ ಶುಭ್‌ಮನ್‌ ಗಿಲ್‌ ಬಾರಿಸಿದ ವೃತ್ತಿಜೀವನದ ಎರಡನೇ ಆಕರ್ಷಕ ಶತಕದ ನೆರನಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಗಿಲ್‌ ಕೇವಲ 89 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸಿದ್ದಾರೆ. ಸದ್ಯ 33 ಓವರ್ ಅಂತ್ಯದ ವೇಳೆಗೆ ಟೀಂ ಇಂಡಿಯಾ ಒಂದು ವಿಕೆಟ್‌ ಕಳೆದುಕೊಂಡು 224 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ.

ಇಲ್ಲಿನ ಗ್ರೀನ್ ಪಾರ್ಕ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ನಿರೀಕ್ಷೆಯಂತೆಯೇ ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್‌ ಗಿಲ್ ಭರ್ಜರಿ ಆರಂಭವನ್ನು ಒದಗಿಸಿಕೊಟ್ಟರು. ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿರುವ ಭಾರತ, ಇದೀಗ ಮೈಚಳಿ ಬಿಟ್ಟು ಆಟವಾಡುತ್ತಿದೆ. ಪರಿಣಾಮ ಮೊದಲ ವಿಕೆಟ್‌ಗೆ ರೋಹಿತ್-ಗಿಲ್ ಜೋಡಿ 15.2 ಓವರ್‌ಗಳಲ್ಲಿ 95 ರನ್‌ಗಳ ಜತೆಯಾಟವಾಡಿತು. ನಾಯಕ ರೋಹಿತ್ ಶರ್ಮಾ 42 ರನ್ ಬಾರಿಸಿ ಚಮಿಕಾ ಕರುಣರತ್ನೆಗೆ ವಿಕೆಟ್ ಒಪ್ಪಿಸಿದರು.

Ind vs SL: 3ನೇ ಪಂದ್ಯದಲ್ಲಿ ಲಂಕಾ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

2ನೇ ಏಕದಿನ ಶತಕ ಸಿಡಿಸಿದ ಗಿಲ್‌: ವೃತ್ತಿಜೀವನದ 18ನೇ ಇನಿಂಗ್ಸ್ ಆಡುತ್ತಿರುವ ಶುಭ್‌ಮನ್‌ ಗಿಲ್ ಇದೀಗ ಎರಡನೇ ಶತಕ ಸಿಡಿಸಿ ಮಿಂಚಿದರು. ಗಿಲ್ ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಇನಿಂಗ್ಸ್‌ನ 6ನೇ ಓವರ್‌ನಲ್ಲಿ ಗಿಲ್ ಸತತ 4 ಬೌಂಡರಿ ಬಾರಿಸುವ ಮೂಲಕ ತಾವು ಅಪಾಯಕಾರಿಯಾಗಬಲ್ಲೇ ಎನ್ನುವ ಸೂಚನೆ ನೀಡಿದರು. ಕೇವಲ 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಗಿಲ್, ಇದಾದ ಬಳಿಕ ಮತ್ತಷ್ಟು ಆಕ್ರಮಣಕಾರಿಯಾಟಕ್ಕೆ ಮೊರೆ ಹೋದರು. ಪರಿಣಾಮ 89 ಎಸೆತಗಳಲ್ಲಿ ಗಿಲ್‌ ಮೂರಂಕಿ ಮೊತ್ತ ದಾಖಲಿಸಿದರು. ಗಿಲ್ ಶತಕದಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್‌ಗಳು ಸೇರಿದ್ದವು.

Shubman Gill departs after a brilliant knock of 116 of 97 deliveries.

Live - https://t.co/q4nA9Ff9Q2 pic.twitter.com/R2DVFeZu4O

— BCCI (@BCCI)

ಕೊಹ್ಲಿ-ಗಿಲ್ ಜುಗಲ್ಬಂದಿ: ಹೌದು, ರೋಹಿತ್ ಶರ್ಮಾ ಬಳಿಕ ಕ್ರೀಸ್‌ಗಿಳಿದ ವಿರಾಟ್ ಕೊಹ್ಲಿ, ಗಿಲ್ ಜತೆಗೂಡಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಗಿಲ್‌ ಹಾಗೂ ವಿರಾಟ್ ಕೊಹ್ಲಿ ಜೋಡಿ ಎರಡನೇ ವಿಕೆಟ್‌ಗೆ 110 ಎಸೆತಗಳನ್ನು ಎದುರಿಸಿ 131 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 220ರ ಗಡಿದಾಟಿಸಿದರು. ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ 65ನೇ ಅರ್ಧಶತಕ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದಾರೆ. ಇನ್ನೊಂದೆಡೆ ಶುಭ್‌ಮನ್ ಗಿಲ್‌, 97 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 116 ರನ್ ಬಾರಿಸಿ ಕುಸಾಲ್ ರಜಿತಾ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು.

ವಿರಾಟ್ ಕೊಹ್ಲಿ ದಾಖಲೆ ಮುರಿದ ಗಿಲ್‌"
ಏಕದಿನ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಗಿಲ್, ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ದಾಖಲೆಯನ್ನು ಬ್ರೇಕ್ ಮಾಡುವಲ್ಲಿ ಯಶಸ್ವಿಯಾದರು. ಮೊದಲ 20 ಇನಿಂಗ್ಸ್‌ಗಳಲ್ಲಿ ಅತಿಹೆಚ್ಚು ಏಕದಿನ ರನ್ ಬಾರಿಸಿದ ಬ್ಯಾಟರ್ ಎನ್ನುವ ದಾಖಲೆ ಇದೀಗ ಗಿಲ್ ಪಾಲಾಗಿದೆ. ಗಿಲ್‌ ಕೇವಲ 18 ಇನಿಂಗ್ಸ್‌ಗಳನ್ನಾಡಿ 855* ರನ್ ಬಾರಿಸಿದ್ದಾರೆ.

ಮೊದಲ 20 ಇನಿಂಗ್ಸ್‌ಗಳಲ್ಲಿ ಅತಿಹೆಚ್ಚು ಏಕದಿನ ರನ್ ಬಾರಿಸಿದ ಟಾಪ್ 5 ಬ್ಯಾಟರ್‌ಗಳ ವಿವರ

ಶುಭ್‌ಮನ್ ಗಿಲ್‌: 855*
ವಿರಾಟ್ ಕೊಹ್ಲಿ: 847
ನವಜೋತ್ ಸಿಧು: 822
ಶ್ರೇಯಸ್ ಅಯ್ಯರ್: 813
ಶಿಖರ್ ಧವನ್: 783

click me!