T20 World Cup ಬಳಿಕ ಟೀಂ ಇಂಡಿಯಾ ಕೋಚ್ ಆಗಲು ಟಾಮ್ ಮೂಡಿ ಆಸಕ್ತಿ..!

By Suvarna NewsFirst Published Oct 10, 2021, 11:51 AM IST
Highlights

* ಟೀಂ ಇಂಡಿಯಾ ಕೋಚ್ ಆಗಲು ಒಲವು ತೋರಿದ ಟಾಮ್ ಮೂಡಿ

* ಟಿ20 ವಿಶ್ವಕಪ್ ಬಳಿಕ ರವಿಶಾಸ್ತ್ರಿ ಕೋಚ್‌ ಅವಧಿ ಮುಕ್ತಾಯ

* ಹೊಸ ಕೋಚ್ ಹುಡುಕಾಟದಲ್ಲಿದೆ ಬಿಸಿಸಿಐ

ಮೆಲ್ಬರ್ನ್‌(ಅ.10): ಭಾರತ ಕ್ರಿಕೆಟ್ ತಂಡದ ನೂತನ ಪ್ರಧಾನ ಕೋಚ್ ಆಗಲು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಅನುಭವಿ ಕೋಚ್‌ ಟಾಮ್‌ ಮೂಡಿ (Tom Moody) ಆಸಕ್ತಿ ತೋರಿದ್ದಾರೆ ಎಂದು ಆಸ್ಟ್ರೇಲಿಯಾದ ಫಾಕ್ಸ್ ಸ್ಪೋರ್ಟ್ಸ್‌ ವರದಿ ಮಾಡಿದೆ.

ಟಾಮ್ ಮೂಡಿ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) (IPL 2021) ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ವಾರದಿಂದ ಆರಂಭಗೊಳ್ಳುತ್ತಿರುವ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿ ಮುಕ್ತಾಯಗೊಂಡ ಬಳಿಕ ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್‌ ರವಿಶಾಸ್ತಿ (Ravi Shastri) ಕೆಳಗಿಳಿಯಲಿದ್ದು, ಬಿಸಿಸಿಐ (BCCI) ಟೀಂ ಇಂಡಿಯಾಗೆ ಹೊಸ ಕೋಚ್ ಹುಡುಕಾಟದಲ್ಲಿದೆ. ಹೀಗಾಗಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಟಾಮ್ ಮೂಡಿ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

2017 ಹಾಗೂ 2019ರಲ್ಲಿ ಬಿಸಿಸಿಐ ಕೋಚ್‌ ನೇಮಕಕ್ಕಾಗಿ ಸಂದರ್ಶನ ನಡೆಸಿದ್ದ ವೇಳೆಯೂ ಟಾಮ್ ಮೂಡಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ ಕೋಚ್ ಆಗಿ ನೇಮಕಗೊಂಡಿರಲಿಲ್ಲ. ಈ ಬಾರಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ ಎಂದು ಹೇಳಲಾಗಿದೆ. ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್‌ (VVS Laxman) ರನ್ನು ಬಿಸಿಸಿಐ ಭಾರತ ಕ್ರಿಕೆಟ್ ತಂಡದ ಕೋಚ್ ಆಗುವಂತೆ ಕೇಳಿಕೊಳ್ಳಲಿದೆ ಎನ್ನುವ ಸುದ್ದಿ ಸಹಾ ಹರಿದಾಡುತ್ತಿದೆ. ಕೆಲ ಮೂಲಗಳ ಪ್ರಕಾರ ಬಿಸಿಸಿಐ ಈ ಬಾರಿ ವಿದೇಶಿ ಕೋಚ್ ನೇಮಿಸಲು ಚಿಂತನೆ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅನಿಲ್‌ ಕುಂಬ್ಳೆಯನ್ನು ಮತ್ತೊಮ್ಮೆ ಟೀಂ ಇಂಡಿಯಾ ಕೋಚ್ ಮಾಡಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಹೆಚ್ಚಿನ ಒಲವು ತೋರಿದ್ದಾರೆ. ಆದರೆ ಬಿಸಿಸಿಐನ ಇನ್ನುಳಿದ ಅಧಿಕಾರಿಗಳು ಇದೇ ಅಭಿಪ್ರಾಯವನ್ನು ಹೊಂದಿಲ್ಲ ಎಂದೂ ಸಹ ವರದಿಯಾಗಿದೆ. ಯಾಕೆಂದರೆ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅನಿಲ್ ಕುಂಬ್ಳೆ (Anil Kumble) ಮಾರ್ಗದರ್ಶನದ ಪಂಜಾಬ್‌ ಕಿಂಗ್ಸ್ ತಂಡವು ಮತ್ತೊಮ್ಮೆ ಪ್ಲೇ ಆಫ್‌ಗೇರಲು ವಿಫಲವಾಗಿತ್ತು. ಇದಷ್ಟೇ ಅಲ್ಲದೇ ಅನಿಲ್‌ ಕುಂಬ್ಳೆ ಹಾಗೂ ವಿರಾಟ್ ಕೊಹ್ಲಿ (Virat Kohli) ನಡುವಿನ ವೈಮನಸ್ಸಿನಿಂದಾಗಿಯೇ ಕುಂಬ್ಳೆ ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಗುಡ್‌ ಬೈ ಹೇಳಿದ್ದರು. ಹೀಗಾಗಿ ಅದೇ ತಂಡದೊಂದಿಗೆ ಕೆಲಸ ಮಾಡಲು ಕುಂಬ್ಳೆ ಸಹಾ ಸಿದ್ದರಿಲ್ಲ ಎನ್ನಲಾಗಿದೆ.

Team India ಕೋಚ್ ಆಗಲು ಅನಿಲ್‌ ಕುಂಬ್ಳೆ ನಿರಾಸಕ್ತಿ..!

ಗ್ಯಾರಿ ಕರ್ಸ್ಟನ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ 2011ರಲ್ಲಿ ಏಕದಿನ ವಿಶ್ವಕಪ್ ಜಯಿಸಿತ್ತು. ಇದಾದ ಬಳಿಕ ಡಂಕಪ್ ಪ್ಲೆಚರ್ ಟೀಂ ಇಂಡಿಯಾ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಡಂಕನ್ ಪ್ಲೆಚರ್ ಮಾರ್ಗದರ್ಶನದಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಟೀಂ ಇಂಡಿಯಾ 2013ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಜಯಿಸಿತ್ತು. ಆದರೆ 2015ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್‌ನಲ್ಲೇ ಮುಗ್ಗರಿಸಿ ನಿರಾಸೆ ಅನುಭವಿಸಿತ್ತು. ಇದಾದ ಬಳಿಕ ಕೋಚ್ ಹುದ್ದೆಗೆ ಗುಡ್‌ ಬೈ ಹೇಳಿದ್ದರು. ನಂತರ ಅನಿಲ್‌ ಕುಂಬ್ಳೆ ಹಾಗೂ ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಇದುವರೆಗೂ ಭಾರತ ಐಸಿಸಿ ಟ್ರೋಫಿ (ICC Trophy) ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಮತ್ತೆ ಬಿಸಿಸಿಐ ವಿದೇಶಿ ಕೋಚ್‌ಗಳತ್ತ ಮುಖ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
 

click me!