
ದುಬೈ(ಅ.10): ಲೀಗ್ ಹಂತದ 56 ಪಂದ್ಯಗಳು ರೋಚಕವಾಗಿ ಮುಕ್ತಾಯಗೊಂಡ ಬಳಿಕ 14ನೇ ಆವೃತ್ತಿಯ ಐಪಿಎಲ್ (IPL 2021) ನಿರ್ಣಾಯಕ ಘಟ್ಟತಲುಪಿದೆ. ಪ್ಲೇ-ಆಫ್ ಹಂತಕ್ಕೆ ಭಾನುವಾರ ಚಾಲನೆ ಸಿಗಲಿದ್ದು, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎಂ.ಎಸ್.ಧೋನಿ (MS Dhoni) ನೇತೃತ್ವದ, ಅನುಭವಿ ಆಟಗಾರರ ದಂಡೇ ಇರುವ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings), ಯುವ ಹಾಗೂ ಉತ್ಸಾಹಿ ಆಟಗಾರರಿಂದ ಕೂಡಿರುವ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಸೆಣಸಲಿದೆ.
ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನಗಳನ್ನು ಪಡೆದ ಈ ಎರಡು ತಂಡಗಳು ಫೈನಲ್‌ಗೆ ನೇರ ಪ್ರವೇಶ ಪಡೆಯಲು ಜಿದ್ದಾಜಿದ್ದಿನಿಂದ ಪೈಪೋಟಿ ನಡೆಸಲಿವೆ. ಗೆಲ್ಲುವ ತಂಡಕ್ಕೆ ಫೈನಲ್ ಟಿಕೆಟ್ ಸಿಗಲಿದ್ದು, ಸೋಲುವ ತಂಡಕ್ಕೆ ಫೈನಲ್ ಪ್ರವೇಶಿಸಲು ಮತ್ತೊಂದು ಅವಕಾಶವಿರಲಿದೆ.
ಹ್ಯಾಟ್ರಿಕ್ ಸೋಲಿನ ಆಘಾತದಿಂದ ಪ್ಲೇ-ಆಫ್‌ಗೆ ಕಾಲಿಡುತ್ತಿರುವ ಚೆನ್ನೈ ಈ ಪಂದ್ಯದಲ್ಲಿ ಲಯ ಕಂಡುಕೊಳ್ಳಲು ಹಪಹಪಿಸುತ್ತಿದೆ. ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲ ಪ್ರಮುಖ ಬದಲಾವಣೆಗಳು ಆಗುವ ನಿರೀಕ್ಷೆ ಇದೆ. ಆರಂಭಿಕರಾದ ಋುತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡು ಪ್ಲೆಸಿಸ್ ಮೇಲೆ ತಂಡ ಹೆಚ್ಚು ವಿಶ್ವಾಸವಿರಿಸಿದೆ. ಮಹತ್ವದ ಪಂದ್ಯವಾಗಿರುವ ಕಾರಣ ಸುರೇಶ್ ರೈನಾ (Suresh Raina) ತಂಡಕ್ಕೆ ಮರಳಬಹುದು. ಮೋಯಿನ್ ಅಲಿ, ಅಂಬಟಿ ರಾಯುಡುಗೆ ಮಧ್ಯ ಓವರ್‌ಗಳಲ್ಲಿ ಉತ್ತಮ ಸ್ಟ್ರೈಕ್‌ರೇಟ್‌ನೊಂದಿಗೆ ರನ್ ಕಲೆಹಾಕುವ ಜವಾಬ್ದಾರಿ ಸಿಗಲಿದ್ದು, ಧೋನಿಗಿಂತ ಮೊದಲೇ ರವೀಂದ್ರ ಜಡೇಜಾ (Ravindra Ashwin) ಕ್ರೀಸ್‌ಗಿಳಿದರೆ ಅಚ್ಚರಿಯಿಲ್ಲ.
IPL 2021: 56 ಲೀಗ್ ಪಂದ್ಯಗಳ ಬಳಿಕ ಬಯಲಾಯ್ತು ಟಾಪ್ 4 ತಂಡಗಳು; ಇಲ್ಲಿದೆ ನೋಡಿ ಪ್ಲೇ ಆಫ್ ವೇಳಾಪಟ್ಟಿ..!
ಚೆನ್ನೈ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಹೋಲಿಸಿದರೆ ಬೌಲರ್‌ಗಳು ಉತ್ತಮ ಲಯದಲ್ಲಿದ್ದು, ಸಂಘಟಿತ ಪ್ರದರ್ಶನ ನಿರೀಕ್ಷೆ ಮಾಡಲಾಗುತ್ತಿದೆ. ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಜೋಶ್ ಹೇಜಲ್‌ವುಡ್, ಡ್ವೇನ್ ಬ್ರಾವೋ ಹಾಗೂ ರವೀಂದ್ರ ಜಡೇಜಾ ತಮ್ಮ ಅನುಭವವನ್ನು ಬಳಸಿ ಡೆಲ್ಲಿ ವೀರರನ್ನು ಕಟ್ಟಿಹಾಕಬೇಕಿದೆ. 9 ಬಾರಿ ಐಪಿಎಲ್ ಫೈನಲ್‌ನಲ್ಲಿ ಆಡಿ ಅನುಭವವಿರುವ ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ, ತಮ್ಮ ಬತ್ತಳಿಕೆಯಲ್ಲಿರುವ ಎಲ್ಲಾ ಅಸ್ತ್ರಗಳನ್ನು ಡೆಲ್ಲಿ ಮೇಲೆ ಪ್ರಯೋಗಿಸಲು ಸಜ್ಜಾಗಿದ್ದಾರೆ.
ಡೆಲ್ಲಿ ಫೇವರಿಟ್: ಮತ್ತೊಂದೆಡೆ ಈ ಆವೃತ್ತಿಯಲ್ಲಿ ಲೀಗ್ ಹಂತದಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ಚೆನ್ನೈ ಮೇಲೆ ಮೇಲುಗೈ ಸಾಧಿಸಿ ಗೆದ್ದಿದ್ದ ಡೆಲ್ಲಿ, ಹ್ಯಾಟ್ರಿಕ್ ಬಾರಿಸಲು ಕಾಯುತ್ತಿದೆ. ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ವೀರೋಚಿತವಾಗಿ ಸೋತರೂ, ಡೆಲ್ಲಿ ತಂಡ ಸಮತೋಲನದಿಂದ ಕೂಡಿದೆ. ಆರಂಭಿಕರಾದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಲಯಕ್ಕೆ ಮರಳಿರುವುದು ತಂಡದ ಪಾಲಿಗೆ ಸಿಹಿ ಸುದ್ದಿ. ಶ್ರೇಯಸ್ ಅಯ್ಯರ್, ನಾಯಕ ರಿಷಭ್ ಪಂತ್, ಶಿಮ್ರೊನ್ ಹೆಟ್ಮೇಯರ್ ತಂಡದ ಬ್ಯಾಟಿಂಗ್ ಆಧಾರಸ್ತಂಭ ಎನಿಸಿದ್ದಾರೆ. ಗುಣಮಟ್ಟದ ಆಲ್ರೌಂಡರ್‌ಗಳ ಬಲವೂ ತಂಡಕ್ಕಿದೆ. ಮಾರ್ಕಸ್ ಸ್ಟೋಯ್ನಿಸ್ ಗಾಯದಿಂದ ಚೇತರಿಸಿಕೊಂಡಿದ್ದು, ತಂಡಕ್ಕೆ ವಾಪಸಾಗುವ ನಿರೀಕ್ಷೆ ಇದೆ.
ಡೆಲ್ಲಿ ತಂಡ ಪ್ರಮುಖವಾಗಿ ತನ್ನ ಮೂವರು ವೇಗಿಗಳಾದ ಆವೇಶ್ ಖಾನ್, ಏನ್ರಿಚ್ ನೋಕಿಯ ಹಾಗೂ ಕಗಿಸೋ ರಬಾಡ ಮೇಲೆ ಅವಲಂಬಿತವಾಗಲಿದೆ. ಅಕ್ಷರ್ ಪಟೇಲ್ ಹಾಗೂ ಆರ್.ಅಶ್ವಿನ್ ವಿಕೆಟ್ ಕೀಳುವುದಕ್ಕಿಂತ ಹೆಚ್ಚಾಗಿ ರನ್ ನಿಯಂತ್ರಿಸುವ ಜವಾಬ್ದಾರಿ ನಿಭಾಯಿಸಬೇಕಿದೆ.
ಸಂಭವನೀಯ ಆಟಗಾರರ ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ನಾಯಕ), ಶಿಮ್ರೊನ್ ಹೆಟ್ಮೇಯರ್, ಮಾರ್ಕಸ್ ಸ್ಟೋಯ್ನಿಸ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೋ ರಬಾಡ, ಆವೇಶ್ ಖಾನ್, ಏನ್ರಿಚ್ ನೋಕಿಯ.
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೋಯಿನ್ ಅಲಿ, ಅಂಬಟಿ ರಾಯುಡು, ಸುರೇಶ್ ರೈನಾ, ಎಂ ಎಸ್ ಧೋನಿ(ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹೇಜಲ್‌ವುಡ್.
ಸ್ಥಳ: ದುಬೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.