ಸತತ ಫಾರ್ಮ್ ಸಮಸ್ಯೆಯಿಂದ ಹೊರಬಂದಿರುವ ವಿರಾಟ್ ಕೊಹ್ಲಿ
ತಮ್ಮ ನೆರವಿಗೆ ಬಂದು ಧೋನಿಯನ್ನು ನೆನಪಿಸಿಕೊಂಡ ಮಾಜಿ ನಾಯಕ ಕೊಹ್ಲಿ
ನನ್ನ ನೆರವಿಗೆ ಬಂದ ಏಕೈಕ ವ್ಯಕ್ತಿ ಧೋನಿ: ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?
ನವದೆಹಲಿ(ಫೆ.25): ಆಧುನಿಕ ಕ್ರಿಕೆಟ್‌ನ ಸೂಪರ್‌ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ನಡುವೆ ಉತ್ತಮ ಬಾಂಧವ್ಯವಿದೆ ಎನ್ನುವ ವಿಚಾರ ಜಗಜ್ಜಾಹೀರಾಗಿರುವ ವಿಚಾರ. ಧೋನಿ ನಾಯಕತ್ವದ ಗರಡಿಯಲ್ಲಿ ಪಳಗಿ, ಅವರ ಉತ್ತರಾಧಿಕಾರಿಯಾಗಿದ್ದ ವಿರಾಟ್ ಕೊಹ್ಲಿ, ಕಳೆದ ಕೆಲ ವರ್ಷಗಳ ಕಾಲ ದೊಡ್ಡ ಮೊತ್ತ ಕಲೆಹಾಕಲು ಪದೇ ಪದೇ ವಿಫಲವಾಗುತ್ತಿದ್ದರು. ತಾವು ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾಗ, ತಮ್ಮಲ್ಲಿ ಆತ್ಮವಿಶ್ವಾಸ ತುಂಬಿದ ಪ್ರಾಮಾಣಿಕ ವ್ಯಕ್ತಿಯೆಂದರೇ ಅದು ಮಹೇಂದ್ರ ಸಿಂಗ್ ಧೋನಿ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
2021ರ ಐಸಿಸಿ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ, ಟಿ20 ನಾಯಕತ್ವದಿಂದ ಕೆಳಗಿಳಿದಿದ್ದರು. ಇದಾದ ಬಳಿಕ, ವಿರಾಟ್ ಕೊಹ್ಲಿಯನ್ನು ಬಿಸಿಸಿಐ ಅಚ್ಚರಿಯ ರೀತಿಯಲ್ಲಿ ಏಕದಿನ ನಾಯಕತ್ವದಿಂದ ಕೆಳಗಿಳಿಸಲಾಯಿತು. ಇದರ ಬೆನ್ನಲ್ಲೇ ಕೊಹ್ಲಿ ಕೂಡಾ ದಿಢೀರ್ ಎನ್ನುವಂತೆ ಟೆಸ್ಟ್ ತಂಡದ ನಾಯಕತ್ವಕ್ಕೂ ಗುಡ್ ಬೈ ಹೇಳಿದ್ದರು. 2019 ಕೊನೆಯಿಂದ 2021ರವರೆಗೆ ವಿರಾಟ್ ಕೊಹ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದರು. ಈ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಬಾಲ್ಯದ ಕೋಚ್, ಕುಟುಂಬಸ್ಥರು, ಆತ್ಮೀಯ ಸ್ನೇಹಿತರು ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ನೆರವಿಗೆ ಬಂದಿದ್ದರು ಎಂದು ಆರ್‌ಸಿಬಿ ಪಾಡ್‌ಕಾಸ್ಟ್ ವೇಳೆ ವಿರಾಟ್ ಕೊಹ್ಲಿ ಹೇಳಿದ್ದಾರೆ.
" ನನ್ನ ಬಾಲ್ಯದ ಕೋಚ್, ಕುಟುಂಬಸ್ಥರು ಹೊರತುಪಡಿಸಿದರೆ, ಪ್ರಾಮಾಣಿಕವಾಗಿ ನನ್ನ ನೆರವಿಗೆ ಬಂದ ವ್ಯಕ್ತಿಯೆಂದರೇ ಅದು ಮಹೇಂದ್ರ ಸಿಂಗ್ ಧೋನಿ. ಅವರೇ ನನ್ನನ್ನು ಸಂಪರ್ಕಿಸಿದರು. ಅವರು ನಮ್ಮ ಸಂಪರ್ಕದಲ್ಲಿರುವುದೇ ಅಪರೂಪ. ನಾನು ಪ್ರತಿನಿತ್ಯ ಕಾಲ್ ಮಾಡಿದರೇ, ಅವರು 99% ಫೋನ್ ರಿಸೀವ್ ಮಾಡುವುದಿಲ್ಲ. ಯಾಕೆಂದರೆ ಅವರು ಫೋನ್ ಕಡೆ ಹೆಚ್ಚು ಗಮನ ಕೊಡುವುದಿಲ್ಲ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಅವರೇ ನನಗೆ ಎರಡು ಬಾರಿ ಸಿಕ್ಕಿದರು. "ಯಾವಾಗ ನೀವು ಬಲಿಷ್ಠರಾಗಿರಬೇಕು ಎಂದು ಬಯಸುತ್ತೀರೋ ಹಾಗೂ ಬಲಿಷ್ಠರಾಗಿರುತ್ತೀರೋ, ಆಗ ಜನರು ನೀವು ಹೇಗಿದ್ದೀರಾ ಎಂದು ಕೇಳುವುದನ್ನೇ ಮರೆತುಬಿಡುತ್ತಾರೆ ಎಂದು ಧೋನಿ ನೀಡಿದ ಸಂದೇಶವನ್ನು ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಮೆಲುಕು ಹಾಕಿದ್ದಾರೆ.
ಇನ್ನು ಮಹೇಂದ್ರ ಸಿಂಗ್ ಧೋನಿ ನೀಡಿದ ಸಲಹೆ ತಮಗೆ ಹೇಗೆ ಉಪಯೋಗಕ್ಕೆ ಬಂದಿತು ಎನ್ನುವುದನ್ನು ವಿರಾಟ್ ಕೊಹ್ಲಿ ಅನಾವರಣ ಮಾಡಿದ್ದಾರೆ. " ಧೋನಿ ಆಡಿದ ಮಾತುಗಳು ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದವು. ಯಾಕೆಂದರೆ ನಾನು, ಯಾರು ತುಂಬಾ ಆತ್ಮವಿಶ್ವಾಸದಿಂದಿರುತ್ತಾರೋ, ಯಾರು ಮಾನಸಿಕವಾಗಿ ಸದೃಢರಾಗಿರುತ್ತಾರೋ, ಅವರ ಮಾತನ್ನು ಹೆಚ್ಚು ಆಲಿಸುತ್ತೇನೆ. ನನ್ನ ಪರಿಸ್ಥಿತಿಯನ್ನು ಅವರು ಗ್ರಹಿಸಿದರು. ಯಾಕೆಂದರೆ, ಅವರು ಸಾಕಷ್ಟು ಸಮಯದಿಂದ ನನ್ನನ್ನು ನೋಡಿದ್ದಾರೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.