ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ತೆರಳಿ ನವರಾತ್ರಿ ಆಚರಿಸಿದ ದಕ್ಷಿಣ ಆಫ್ರಿಕಾ ಸ್ಪಿನ್ನರ್‌ ಕೇಶವ್‌ ಮಹಾರಾಜ್‌!

By Santosh NaikFirst Published Sep 27, 2022, 12:17 PM IST
Highlights

ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಬಳಿಕ ಟೀಮ್‌ ಇಂಡಿಯಾ ಪ್ರವಾಸಿ ದಕ್ಷಿಣ ಅಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ. ಸರಣಿಯ ಮೊದಲ ಪಂದ್ಯ ನಾಳೆ ತಿರುವನಂತಪುರದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡದ ಆಟಗಾರ ಕೇಶವ್‌ ಮಹರಾಜ್‌ ನವರಾತ್ರಿ ನಿಮಿತ್ತ ಇಲ್ಲಿನ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ತೆರಳಿ ಭೇಟಿ ನೀಡಿದರು.

ತಿರುವನಂತಪುರ (ಸೆ. 27): ದುರ್ಗಾ ಮಾತೆಯ ಆರಾಧನೆಯ ಹಬ್ಬವಾದ ನವರಾತ್ರಿ ಸೆಪ್ಟೆಂಬರ್ 26 ರಿಂದ ಪ್ರಾರಂಭವಾಗಿದೆ. ಭಾರತಕ್ಕೆ ಭೇಟಿ ನೀಡಿದ ದಕ್ಷಿಣ ಆಫ್ರಿಕಾ ತಂಡದ ಸ್ಪಿನ್ನರ್ ಕೇಶವ್ ಮಹಾರಾಜ್ ಕೂಡ ಈ ಹಬ್ಬದ ರಂಗುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೇಶವ ಮಹಾರಾಜ್‌ ತಿರುವನಂತಪುರದ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ನವರಾತ್ರಿ ನಿಮಿತ್ತ ತೆರಳಿ ದೇವರ ದರ್ಶನ ಪಡೆದುಕೊಂಡರು. ಕೇಶವ್ ತಮ್ಮ ಇನ್ಸ್‌ಟಾಗ್ರಾಮ್‌ ಸ್ಟೋರಿಯಲ್ಲಿ ಅದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಂಚಿಕೊಂಡ ಫೋಟೋದಲ್ಲಿ, ಕೇಶವ್ ಮಹಾರಾಜ್ ಸಾಂಪ್ರದಾಯಿಕ ಭಾರತೀಯ ವೇಷಭೂಷಣದಲ್ಲಿ (ಧೋತಿ) ಕಾಣಿಸಿಕೊಂಡಿದ್ದಾರೆ. ಕೇಶವ್ ಅವರು ಫೋಟೋದ ಶೀರ್ಷಿಕೆಯಲ್ಲಿ 'ಎಲ್ಲರಿಗೂ ನವರಾತ್ರಿಯ ಶುಭಾಶಯಗಳು, ಜೈ ಮಾತಾ ದಿ' ಎಂದು ಬರೆದುಕೊಂಡಿದ್ದಾರೆ. ಕೇಶವ್ ಈಗಾಗಲೇ ಹಿಂದೂ ದೇವರು ಮತ್ತು ದೇವತೆಗಳನ್ನು ಪೂಜಿಸುತ್ತಾರೆ, ವಿಶೇಷವಾಗಿ ಅವರು ಹನುಮಂತನ ದೊಡ್ಡ ಭಕ್ತರಾಗಿದ್ದಾರೆ. ಅದಲ್ಲದೆ, ಕೇಶವ ಮಹಾರಾಜ್‌ ಅವರ ಪೂರ್ವಜರು ಭಾರತದ ಉತ್ತರ ಪ್ರದೇಶದ ಸುಲ್ತಾನಪುರಕ್ಕೆ ಸೇರಿದವರು. ಕೇಶವ್ ಅವರ ತಂದೆ ಆತ್ಮಾನಂದ ಮಹಾರಾಜ್ ಅವರ ಪೂರ್ವಜರು 1874 ರ ಸುಮಾರಿಗೆ ಸುಲ್ತಾನ್‌ಪುರದಿಂದ ಡರ್ಬನ್‌ಗೆ ಸ್ಥಳಾಂತರಗೊಂಡಿದ್ದರು ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದರು. ಆ ಸಮಯದಲ್ಲಿ ಭಾರತೀಯ ಜನರು ಸಂತೋಷದ ಜೀವನವನ್ನು ನಡೆಸಲು ದಕ್ಷಿಣ ಆಫ್ರಿಕಾದಂತಹ ದೇಶಗಳಿಗೆ ಕೆಲಸ ಹುಡುಕಲು ಹೋಗುತ್ತಿದ್ದರು.

ಕೇಶವ್‌ ಮಹರಾಜ್‌ (Keshav Maharaj ) ಅವರ ತಂದೆ ಅತ್ಮಾನಂದ (Athmanand) ಕೂಡ ಕ್ರಿಕೆಟರ್‌ ಆಗಿದ್ದವರು. ಅವರು ದೇಶೀಯ ಕ್ರಿಕೆಟ್‌ನಲ್ಲಿ (Domestic Cricket) ವಿಕೆಟ್‌ಕೀಪರ್‌ ಆಗಿದ್ದರು. ಆದರೆ, ಆತ್ಮಾನಂದ ಅವರಿಗೆ ಎಂದಿಗೂ ದೇಶದ ಪರವಾಗಿ ಟೆಸ್ಟ್‌ ಕ್ರಿಕೆಟ್‌ ಆಡುವ ಅವಕಾಶ ಸಿಗಲಿಲ್ಲ. ಇನ್ನು 32 ವರ್ಷದ ಕೇಶವ್‌ ಮಹರಾಜ್‌, 45 ಟೆಸ್ಟ್‌, 24 ಏಕದಿನ ಹಾಗೂ 18 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ ಪಂದ್ಯದಲ್ಲಿ 30.61ರ ಸರಾಸರಿಯಲ್ಲಿ ಕೇಶವ್‌ ಮಹರಾಜ್‌ 154 ವಿಕೆಟ್‌ಗಳನ್ನು ಪಡೆದುಕೊಂಡಿದ್ದರೆ, ಏಕದಿನ ಕ್ರಿಕೆಟ್‌ನಲ್ಲಿ 27 ವಿಕೆಟ್‌ ಹಾಗೂ ಟಿ20 ಕ್ರಿಕೆಟ್‌ನಲ್ಲಿ 15 ವಿಕೆಟ್‌ ಉರುಳಿಸಿದ್ದಾರೆ. ಟೆಸ್ಟ್‌ನಲ್ಲಿ 1032 ರನ್‌ಗಳನ್ನೂ ಕೇಶವ್‌ ಮಹರಾಜ್‌ ಬಾರಿಸಿದ್ದಾರೆ.

ಕಿಂಗ್‌ ಕೊಹ್ಲಿ ದಾಖಲೆ, ರಾಹುಲ್‌ ದ್ರಾವಿಡ್‌ ರೆಕಾರ್ಡ್‌ ಬ್ರೇಕ್‌ ಮಾಡಿದ ವಿರಾಟ್‌!

ಇನ್ನು ಕೇಶವ್‌ ಮಹರಾಜ್‌ ಅವರ ವೈಯಕ್ತಿಕ ಜೀವನ ಕೂಡ ಸುದ್ದಿಯಲ್ಲಿದೆ. ಕೇಶವ್‌ ಅವರ ಪತ್ನಿಯ ಹೆಸರು ಲೆರಿಶಾ ಮುನ್ಸಾಮಿ. ಆಕೆ ಪ್ರಸಿದ್ಧ ಕಥಕ್‌ ನೃತ್ಯಗಾರ್ತಿ (Kathak Dancer). ಲೆರಿಶಾ ಅವರ ಫೋಟೋಗಳು ಮತ್ತು ನೃತ್ಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪ್ರಸಿದ್ಧವಾಗಿವೆ. ಬಾಲಿವುಡ್ ಹಾಡುಗಳನ್ನು ಇಷ್ಟಪಡುವ ಲೆರಿಶಾ (Lerisha Munsamy) ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 13 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಕೇಶವ್ ಮತ್ತು ಲೆರಿಶಾ ಮೊದಲು ಪರಸ್ಪರ ಸ್ನೇಹಿತನ ಮೂಲಕ ಭೇಟಿಯಾದರು. ಕ್ರಮೇಣ ಈ ಸ್ನೇಹ ಪ್ರೀತಿಗೆ ತಿರುಗಿತ್ತು.

ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೂ ಮುನ್ನ ಭಾರತಕ್ಕೆ ಆಘಾತ, ಮೂವರು ಆಟಗಾರರು ಔಟ್‌!

ಇಬ್ಬರೂ ತಮ್ಮ ಸಂಬಂಧವನ್ನು ದೀರ್ಘಕಾಲದವರೆಗೆ ಕುಟುಂಬ ಮತ್ತು ಪ್ರಪಂಚದಿಂದ ಮರೆಮಾಡಿದ್ದರು. ಕೇಶವ ಮಹಾರಾಜ್‌ಗೆ ತಮ್ಮ ಕುಟುಂಬವನ್ನು ಒಪ್ಪಿಸುವುದು ಸವಾಲಿನ ಕೆಲಸವಾಗಿತ್ತು. ಇಬ್ಬರೂ ವಿಭಿನ್ನ ಹಿನ್ನಲೆ ಹೊಂದಿದ್ದ ಕಾರಣಕ್ಕೆ ಕೇಶವ್‌ ಮಹರಾಜ್‌ ಅವರ ಕುಟುಂಬ ಆರಂಭದಲ್ಲಿ ಈ ಮದುವೆಗೆ ಒಪ್ಪಿರಲಿಲ್ಲ. ತೀವ್ರ ಪ್ರಯಾಸದ ಬಳಿಕ ಕುಟುಂಬವನ್ನು ಒಪ್ಪಿಸಿದ ಕೇಶವ್‌ ಮಹಾರಾಜ್‌, 2019ರಲ್ಲಿ ಲೆರಿಶಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಕೋವಿಡ್‌ ಕಾರಣದಿಂದ ಮದುವೆ ಮೂರು ವರ್ಷ ಮುಂದೂಡಿಕೆಯಾಗಿತ್ತು. ಈ ವರ್ಷದ ಏಪ್ರಿಲ್‌ನಲ್ಲಿ ಇಬ್ಬರೂ ವಿವಾಹವಾಗಿದ್ದಾರೆ.

click me!