ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ
ನವದೆಹಲಿ (ಮಾ. 24): ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇನ್ನು ಕೇವಲ 2 ದಿನ ಮಾತ್ರ ಬಾಕಿ ಇದೆ. ಈ ವರ್ಷ 2 ಹೊಸ ತಂಡಗಳ ಸೇರ್ಪಡೆಯಿಂದ ಟೂರ್ನಿಯ ಕಳೆ ಹೆಚ್ಚಲಿದೆ. ಟೂರ್ನಿಯಿಂದ ಅಭಿಮಾನಿಗಳು ಏನೇನು ನಿರೀಕ್ಷೆ ಮಾಡುತ್ತಿದ್ದಾರೆ. ಈ ಆವೃತ್ತಿ ಯಾಕೆ ವಿಶೇಷ ಎನಿಸಿದೆ. ಇಲ್ಲಿದೆ ಸಂಪೂರ್ಣ ವಿವರ.
ಹೊಸ ರೂಪದಲ್ಲಿ ಅಭಿಮಾನಿಗಳ ಮುಂದೆ ಐಪಿಎಲ್ ಟಿ20 ಹಬ್ಬ: ಈ ವರ್ಷ ಟೂರ್ನಿಯಲ್ಲಿ ಹಲವು ಬದಲಾವಣೆಗಳಾಗಿವೆ. ಹೊಸದಾಗಿ ಲಖನೌ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಸೇರ್ಪಡೆಗೊಂಡಿವೆ. ಇದರಿಂದಾಗಿ ಒಟ್ಟು ಪಂದ್ಯಗಳ ಸಂಖ್ಯೆಯೂ ಏರಿಕೆಯಾಗಿದ್ದು, ಅಭಿಮಾನಿಗಳಿಗೆ ಹೆಚ್ಚುವರಿ ಮನರಂಜನೆ ದೊರೆಯಲಿದೆ. ಈ ಬಾರಿ 10 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ.
ಇದನ್ನೂ ಓದಿ: IPL 2022 Tickets: ಮೈದಾನದಲ್ಲಿ ಪಂದ್ಯ ವೀಕ್ಷಿಸಲು ಟಿಕೆಟ್ ಖರೀದಿ ಮಾಡುವುದು ಎಲ್ಲಿ..? ಬೆಲೆ ಎಷ್ಟು..?
ಎಲ್ಲಾ ತಂಡಗಳು ಈ ಹಿಂದಿನಂತೆ ಲೀಗ್ ಹಂತದಲ್ಲಿ ತಲಾ 14 ಪಂದ್ಯಗಳನ್ನು ಆಡಲಿವೆ. ‘ಎ’ ಗುಂಪಿನಲ್ಲಿ ಮುಂಬೈ ಇಂಡಿಯನ್ಸ್, ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್‌ಜೈಂಟ್ಸ್ ತಂಡಗಳು ಸ್ಥಾನ ಪಡೆದಿವೆ. ‘ಬಿ’ ಗುಂಪಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಸನ್ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳಿವೆ.
ಲೀಗ್ ಹಂತದ ಮಾದರಿ ಬದಲು: ಲೀಗ್ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿದ್ದು, ಪ್ಲೇ-ಆಫ್ ಹಂತದಲ್ಲಿ 4 ಪಂದ್ಯಗಳು ಇರಲಿವೆ. ಆಯಾ ಗುಂಪಿನಲ್ಲಿರುವ ತಂಡಗಳು ಪರಸ್ಪರ ಎರಡು ಬಾರಿ ಎದುರಾಗಲಿವೆ. ಮತ್ತೊಂದು ಗುಂಪಿನಲ್ಲಿರುವ ಒಂದು ತಂಡದ ವಿರುದ್ಧ 2 ಬಾರಿ, ಉಳಿದ 4 ತಂಡಗಳ ವಿರುದ್ಧ ತಲಾ ಒಮ್ಮೆ ಸೆಣಸಲಿವೆ. ತಂಡಗಳು ಗೆದ್ದಿರುವ ಒಟ್ಟು ಟ್ರೋಫಿ ಹಾಗೂ ಪ್ರವೇಶಿಸಿರುವ ಒಟ್ಟು ಫೈನಲ್‌ಗಳನ್ನು ಆಧರಿಸಿ ಶ್ರೇಯಾಂಕ ನೀಡಲಾಗಿದೆ.
ಈ ಸಲ 2 ಡಿಆರ್‌ಎಸ್, ಹೊಸ ನಿಯಮಗಳು ಜಾರಿ: ಈ ಐಪಿಎಲ್‌ನಲ್ಲಿ ಪ್ರತಿ ಇನ್ನಿಂಗ್ಸ್‌ನಲ್ಲಿ ತಂಡಗಳಿಗೆ ಒಂದರ ಬದಲು ಎರಡು ಡಿಆರ್‌ಎಸ್‌ಗಳನ್ನು ಪಡೆಯಲು ಅವಕಾಶ ಸಿಗಲಿದೆ. ಇದರಿಂದ ತಂಡಗಳಿಗೆ ಲಾಭವಾಗಲಿದೆ. ಆದರೆ ಪಂದ್ಯ ನಡೆಯುವ ಸಮಯವೂ ಹೆಚ್ಚಲಿದೆ. ಇನ್ನು ಇತ್ತೀಚೆಗೆ ಎಂಸಿಸಿ ಪರಿಷ್ಕೃತಗೊಳಿಸಿದ ಕೆಲ ನಿಯಮಗಳನ್ನು ಐಪಿಎಲ್‌ನಲ್ಲಿ ಅವಳಡಿಸಲಾಗಿದೆ.
ಪ್ರಮುಖವಾಗಿ ಕ್ಯಾಚ್ ನೀಡಿ ಬ್ಯಾಟರ್ ಹೊರನಡೆದಾಗ ಹೊಸದಾಗಿ ಕ್ರೀಸ್‌ಗಿಳಿಯುವ ಆಟಗಾರನೇ ಸ್ಟೆ್ರೖಕ್ ಪಡೆಯಬೇಕು ಎನ್ನುವ ನಿಯಮವನ್ನು ಜಾರಿ ಮಾಡಲಾಗುತ್ತಿದೆ. ಇನ್ನು ಸೂಪರ್ ಓವರ್ ನಿಯಮವನ್ನೂ ಬಿಸಿಸಿಐ ಪರಿಷ್ಕೃರಿಸಿದೆ. ಒಂದು ವೇಳೆ ಪ್ಲೇ-ಆಫ್ ಪಂದ್ಯದಲ್ಲಿ ಸೂಪರ್ ಓವರ್ ಕೂಡ ಟೈ ಆದರೆ, ನಿಗದಿತ ಸಮಯದೊಳಗೆ ಪಂದ್ಯ ಮುಗಿಯದಿದ್ದಾಗ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆದಿದ್ದ ತಂಡಕ್ಕೆ ಗೆಲುವು ಒಲಿಯಲಿದೆ.
ಇದನ್ನೂ ಓದಿ: IPL 2022: ಲಖನೌ ಸೂಪರ್ ಜೈಂಟ್ಸ್ ಕೂಡಿಕೊಂಡ ಜಿಂಬಾಬ್ವೆ ಮಾರಕ ವೇಗಿ..!
ವೀಸಾ ಸಮಸ್ಯೆ: ಐಪಿಎಲ್ ಮೊದಲ ಪಂದ್ಯಕ್ಕೆ ಅಲಿ ಗೈರು: ಇನ್ನೂ ಭಾರತೀಯ ವೀಸಾ ಸಿಗದ ಕಾರಣ ಐಪಿಎಲ್‌ನ ಮೊದಲ ಪಂದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್‌ನ ಆಲ್ರೌಂಡರ್, ಇಂಗ್ಲೆಂಡ್‌ನ ಮೋಯಿನ್ ಅಲಿ ಗೈರಾಗಲಿದ್ದಾರೆ ಎಂದು ತಂಡದ ಸಿಇಒ ಕಾಶಿ ವಿಶ್ವನಾಥನ್ ಖಚಿತಪಡಿಸಿದ್ದಾರೆ. ಅವರು ಇನ್ನೂ ಕೆಲ ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯೂ ಇದೆ. ಅಲಿ ಅವರ ವೀಸಾ ಸಮಸ್ಯೆ ಬಗೆಹರಿಸಲು ಬಿಸಿಸಿಐ ನೆರವು ನೀಡುತ್ತಿದೆ ಎಂದು ವಿಶ್ವನಾಥನ್ ಹೇಳಿದ್ದಾರೆ.
ಲಖನೌ ತಂಡಕ್ಕೆ ಆಸೀಸ್ ವೇಗಿ ಟೈ ಸೇರ್ಪಡೆ: ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಗಾಯಗೊಂಡು 15ನೇ ಆವೃತ್ತಿ ಐಪಿಎಲ್‌ನಿಂದ ಹೊರಬಿದ್ದ ಕಾರಣ, ಲಖನೌ ಸೂಪರ್ ಜೈಂಟ್ಸ್ ಅವರ ಬದಲು ಆಸ್ಪ್ರೇಲಿಯಾ ವೇಗಿ ಆ್ಯಂಡ್ರೂ ಟೈ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ವುಡ್‌ರನ್ನು 7.5 ಕೋಟಿ ರು. ನೀಡಿ ಲಖನೌ ತಂಡ ಹರಾಜಿನಲ್ಲಿ ಖರೀದಿಸಿತ್ತು.
ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ವೇಳೆ ಅವರು ಮೊಣಕೈ ಗಾಯಕ್ಕೆ ತುತ್ತಾದ ಕಾರಣ ಐಪಿಎಲ್‌ನಿಂದ ಹೊರಬೀಳಬೇಕಾಯಿತು. 27 ಐಪಿಎಲ್ ಪಂದ್ಯಗಳನ್ನಾಡಿರುವ ಟೈ, 1 ಕೋಟಿ ರು.ಗೆ ಲಖನೌ ತಂಡದ ಪರ ಆಡಲು ಒಪ್ಪಿದ್ದಾರೆ.