* ಭಾರತ ಹಾಗೂ ನ್ಯೂಜಿಲೆಂಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಮುಖಾಮುಖಿ
* ರೋಹಿತ್ ವರ್ಸಸ್ ಬೌಲ್ಟ್ ಕಾದಾಟ ನೋಡಲು ಕಾಯುತ್ತಿದ್ದೇನೆ ಎಂದ ಸೆಹ್ವಾಗ್
* ಐಸಿಸಿ ಟೆಸ್ಟ್ ವಿಶ್ವಕಪ್ ಜೂನ್ 18ರಿಂದ ಆರಂಭ
ನವದೆಹಲಿ(ಜೂ.12): ಬಹುನಿರೀಕ್ಷಿತ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಟ್ರೆಂಟ್ ಬೌಲ್ಟ್ ಹಾಕುವ ಒಳಬರುವ ಎಸೆತಗಳನ್ನು ರೋಹಿತ್ ಶರ್ಮಾ ಹೇಗೆ ಎದುರಿಸುತ್ತಾರೆ ಎನ್ನುವ ಕುತೂಹಲ ಜೋರಾಗಿದೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಜೂನ್ 18ರಿಂದ ಆರಂಭವಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಸೌಥಾಂಪ್ಟನ್ ಆತಿಥ್ಯವನ್ನು ವಹಿಸಿದೆ. ಟೆಸ್ಟ್ ವಿಶ್ವಕಪ್ ಎಂದೇ ಬಿಂಬಿತವಾಗಿರುವ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಜಗತ್ತೇ ಚಾತಕ ಪಕ್ಷಿಯಂತೆ ಕಾದುಕುಳಿತಿದೆ.
undefined
ಟೆಸ್ಟ್ ಕ್ರಿಕೆಟ್‌ಗೆ ಆರಂಭಿಕನಾಗಿ ಹೊಸ ಭಾಷ್ಯ ಬರೆದ ವಿರೇಂದ್ರ ಸೆಹ್ವಾಗ್, ಸದ್ಯ ರೋಹಿತ್ ಶರ್ಮಾ ಇರುವ ಫಾರ್ಮ್ ಗಮನಿಸಿದರೆ ಇಂಗ್ಲೆಂಡ್ ಪ್ರವಾಸದಲ್ಲಿ ಯಶಸ್ವಿ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಟ್ರೆಂಟ್ ಬೌಲ್ಟ್-ಟಿಮ್ ಸೌಥಿ ಜೋಡಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಲಿದ್ದಾರೆ ಎನ್ನುವ ವಿಚಾರದಲ್ಲಿ ಯಾವುದೇ ಅನುಮಾನವಿಲ್ಲ. ಬೌಲಿಂಗ್‌ನಲ್ಲಿ ಈ ಜೋಡಿ ಚೆಂಡನ್ನು ಇನ್‌ಸ್ವಿಂಗ್ ಹಾಗೂ ಔಟ್‌ಸ್ವಿಂಗ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಹೀಗಾಗಿ ನಾನು ಬೌಲ್ಟ್ ವರ್ಸಸ್ ರೋಹಿತ್ ನಡುವಿನ ಕಾಳಗವನ್ನು ನೋಡಲು ಕಾಯುತ್ತಿದ್ದೇನೆ. ಒಂದು ವೇಳೆ ರೋಹಿತ್ ಪಿಚ್‌ಗೆ ಕುದುರಿಕೊಂಡರೆ ಬೌಲ್ಟ್ ಯಾವ ರೀತಿ ಬೌಲಿಂಗ್ ಮಾಡಲಿದ್ದಾರೆ. ಈ ಇಬ್ಬರ ನಡುವಿನ ಪೈಪೋಟಿ ನೋಡಲು ಚೆನ್ನಾಗಿರುತ್ತದೆ ಎಂದು ಸೆಹ್ವಾಗ್ ಹೇಳಿದ್ದಾರೆ.
ಇಶಾಂತ್ ಬದಲಿಗೆ ಸಿರಾಜ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಲಿ ಎಂದ ಭಜ್ಜಿ..!
ಇಂಗ್ಲೆಂಡ್ ವಾತಾವರಣದಲ್ಲಿ ರೋಹಿತ್ ಶರ್ಮಾ ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಈ ಮೊದಲು 2014ರ ಪ್ರವಾಸದಲ್ಲಿ ಇಂಗ್ಲೆಂಡ್ ಎದುರು ರೋಹಿತ್ ಟೆಸ್ಟ್ ಪಂದ್ಯವನ್ನಾಡಿದ ಅನುಭವವಿದೆ. ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಯಶಸ್ಸು ಕಂಡಿರುವ ರೋಹಿತ್ ಶರ್ಮಾ ಸದ್ಯದ ಫಾರ್ಮ್ ಗಮನಿಸಿದರೆ, ಇಂಗ್ಲೆಂಡ್ ಪ್ರವಾಸದಲ್ಲಿ ರನ್ ಮಳೆ ಹರಿಸುವ ಸಾಧ್ಯತೆಯಿದೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಹಾಗೂ ಟ್ರೆಂಟ್ ಬೌಲ್ಟ್ ಇಬ್ಬರೂ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಈ ಅನುಭವವನ್ನು ರೋಹಿತ್ ಶರ್ಮಾ ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.