ತೆಂಬ ಬವುಮಾ ಶತಕ, ಹಾಲಿ ಚಾಂಪಿಯನ್‌ ಇಂಗ್ಲೆಂಡ್ ಎದುರು ಏಕದಿನ ಸರಣಿ ಗೆದ್ದ ಹರಿಣಗಳು

By Kannadaprabha NewsFirst Published Jan 30, 2023, 9:15 AM IST
Highlights

ಇಂಗ್ಲೆಂಡ್ ಎದುರು ದಕ್ಷಿಣ ಆಫ್ರಿಕಾ ಪಾಲಾದ ಏಕದಿನ ಕ್ರಿಕೆಟ್‌ ಸರಣಿ
ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಿ ಹರಿಣಗಳ ಪಾಲು
ಆಕರ್ಷಕ ಶತಕ ಸಿಡಿಸಿ ಮಿಂಚಿದ ದಕ್ಷಿಣ ಆಫ್ರಿಕಾ ನಾಯಕ ತೆಂಬ ಬವುಮಾ

ಬ್ಲೂಮ್‌ಫೌಂಟೇನ್‌(ಜ.30): ನಾಯಕ ತೆಂಬ ಬವುಮಾ(109) ಶತಕದ ನೆರವಿನಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್‌ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಅಫ್ರಿಕಾ 5 ವಿಕೆಟ್‌ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಗೆದ್ದುಕೊಂಡಿತು. 

ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಇಂಗ್ಲೆಂಡ್‌ 7 ವಿಕೆಟ್‌ಗೆ 342 ರನ್‌ ಕಲೆ ಹಾಕಿತು. ಜೋಸ್‌ ಬಟ್ಲರ್‌(ಔಟಾಗದೆ 94), ಹ್ಯಾರಿ ಬ್ರೂಕ್‌(80), ಮೋಯಿನ್‌ ಅಲಿ(51) ಅಬ್ಬರದಿಂದಾಗಿ ದಕ್ಷಿಣ ಆಫ್ರಿಕಾಕ್ಕೆ ದೊಡ್ಡ ಮೊತ್ತದ ಗುರಿ ನೀಡಿತು. ದಕ್ಷಿಣ ಆಫ್ರಿಕಾ ಪರ ಸಂಘಟಿತ ಬೌಲಿಂಗ್ ಪ್ರದರ್ಶನ ತೋರಿದ ಏನ್ರಿಚ್ ನೊಕಿಯಾ ಎರಡು ವಿಕೆಟ್ ಪಡೆದರೆ, ಏಯ್ಡನ್ ಮಾರ್ಕ್‌ರಮ್, ಕೇಶವ್ ಮಹರಾಜ್, ಮಾರ್ಕೊ ಯಾನ್ಸೆನ್, ಲುಂಗಿ ಎಂಗಿಡಿ ಹಾಗೂ ವೇಯ್ನ್ ಪಾರ್ನೆಲ್ ತಲಾ ಒಂದೊಂದು ವಿಕೆಟ್ ಪಡೆದರು.

ಇನ್ನು ಕಠಿಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ತೆಂಬ ಬವುಮಾ ನಾಯಕನ ಆಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಬವುಮಾ 102 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 109 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಕ್ವಿಂಟನ್ ಡಿ ಕಾಕ್(31), ರಾಸ್ಸಿ ವ್ಯಾನ್ ಡರ್ ಡುಸೇನ್(38), ಏಯ್ಡನ್ ಮಾರ್ಕ್‌ರಮ್(49), ಹೆನ್ರಿಚ್ ಕ್ಲಾಸೇನ್(27) ಉಪಯುಕ್ತ ರನ್‌ ಕಾಣಿಕೆ ನೀಡಿದರು. ಇನ್ನು ಕೊನೆಯಲ್ಲಿ ಮಿಂಚಿನ ಬ್ಯಾಟಿಂಗ್ ನಡೆಸಿದ ಡೇವಿಡ್ ಮಿಲ್ಲರ್ ಕೇವಲ 37 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 58 ರನ್ ಬಾರಿಸಿದರೆ, ಮಾರ್ಕೊ ಯಾನ್ಸೆನ್‌ 32 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

A stunning run-chase from South Africa as they take an unassailable lead in the ODI series 🔥 | 📝 https://t.co/PGCzEvxFLF pic.twitter.com/64svNGMALH

— ICC (@ICC)

ಏಕದಿನ: ಕರ್ನಾಟಕ ಮಹಿಳಾ ಕ್ರಿಕೆಟ್ ತಂಡ ಪ್ರಿ ಕ್ವಾರ್ಟರ್‌ಗೆ

ಮುಂಬೈ: ರಾಷ್ಟ್ರೀಯ ಹಿರಿಯ ಮಹಿಳೆಯರ ಏಕದಿನ ಟೂರ್ನಿಯಲ್ಲಿ ಕಳೆದ ಬಾರಿ ರನ್ನರ್‌ ಅಪ್‌ ಕರ್ನಾಟಕ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಭಾನುವಾರ ಗುಂಪು ಹಂತದ ಕೊನೆ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 109 ರನ್‌ಗಳಿಂದ ಸೋತ ರಾಜ್ಯ ತಂಡ ನೇರವಾಗಿ ಕ್ವಾರ್ಟರ್‌ಗೇರುವ ಅವಕಾಶ ಕಳೆದುಕೊಂಡಿತು. ‘ಬಿ’ ಗುಂಪಿನಲ್ಲಿ ಕರ್ನಾಟಕ 6 ಪಂದ್ಯಗಳಲ್ಲಿ 20 ಅಂಕಗಳೊಂದಿಗೆ 2ನೇ ಸ್ಥಾನಿಯಾದರೆ, ಡೆಲ್ಲಿ(28 ಅಂಕ) ಅಗ್ರಸ್ಥಾನಕ್ಕೇರಿತು. 

IND vs NZ ಸುಲಭ ಗುರಿ ತಿಣುಕಾಡಿ ಗೆದ್ದ ಭಾರತ, ಸರಣಿ ಸಮಬಲ!

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ 4 ವಿಕೆಟ್‌ಗೆ 256 ರನ್‌ ಕಲೆ ಹಾಕಿತು. ಪ್ರಿಯಾ ಪೂನಿಯಾ(105) ದೊಡ್ಡ ಮೊತ್ತ ಗಳಿಸಲು ನೆರವಾದರು. ಪ್ರತ್ಯುಷಾ 3 ವಿಕೆಟ್‌ ಕಿತ್ತರು. ರಾಜ್ಯ ತಂಡ 38.2 ಓವರಲ್ಲಿ 149ಕ್ಕೆ ಆಲೌಟಾಯಿತು. ವೃಂದಾ(42) ಹೋರಾಟ ವ್ಯರ್ಥವಾಯಿತು. ಕರ್ನಾಟಕ ಪ್ರಿ ಕ್ವಾರ್ಟರ್‌ನಲ್ಲಿ ಬುಧವಾರ ‘ಇ’ ಗುಂಪಿನ ದ್ವಿತೀಯ ಸ್ಥಾನಿ ಮಧ್ಯಪ್ರದೇಶ ವಿರುದ್ಧ ಸೆಣಸಲಿದೆ.

ರಣಜಿ ಕ್ವಾರ್ಟರ್‌: ಕರ್ನಾಟಕ ಕ್ರಿಕೆಟ್‌ ತಂಡದಲ್ಲಿಲ್ಲ ಬದಲಾವಣೆ

ಬೆಂಗಳೂರು: ಜನವರಿ 31ರಿಂದ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉತ್ತರಾಖಂಡ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ಯಾವುದೇ ಬದಲಾವಣೆಯಾಗಿಲ್ಲ. ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳಲಾಗಿದೆ. ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ವೇಗಿ ರೋನಿತ್‌ ಮೋರೆ ಈ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ.

ಕರ್ನಾಟಕ ತಂಡ: ಮಯಾಂಕ್‌ ಅಗರ್‌ವಾಲ್(ನಾಯಕ), ರವಿಕುಮಾರ್ ಸಮರ್ಥ್(ಉಪನಾಯಕ), ದೇವದತ್ ಪಡಿಕ್ಕಲ್‌, ನಿಕಿನ್‌ ಜೋಶ್, ಮನೀಶ್‌ ಪಾಂಡೆ, ಸಿದ್ಧಾರ್ಥ್, ಬಿ.ಆರ್‌.ಶರತ್‌, ಶರತ್‌ ಶ್ರೀನಿವಾಸ್‌, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್, ಶುಭಾಂಗ್‌ ಹೆಗ್ಡೆ, ವಿದ್ವತ್‌ ಕಾವೇರಪ್ಪ, ಕೌಶಿಕ್‌, ವೈಶಾಖ್‌, ವೆಂಕಟೇಶ್‌.

click me!