IND vs NZ ಸುಲಭ ಗುರಿ ತಿಣುಕಾಡಿ ಗೆದ್ದ ಭಾರತ, ಸರಣಿ ಸಮಬಲ!

By Suvarna NewsFirst Published Jan 29, 2023, 10:31 PM IST
Highlights

100 ರನ್ ಟಾರ್ಗೆಟ್ ಚೇಸಿಂಗ್ ಟೀಂ ಇಂಡಿಯಾಗೆ ಅಂದುಕೊಂಡಷ್ಟು ಸುಲಭವಿರಲಿಲ್ಲ. 4 ವಿಕೆಟ್ ಕಳದುಕೊಂಡ ಭಾರತ ದ್ವಿತೀಯ ಪಂದ್ಯ ಗೆದ್ದುಕೊಂಡಿತು. ಇದೀಗ ಸರಣಿ ಸಮಬಲವಾಗಿದ್ದು,  3ನೇ ಪಂದ್ಯ ಫೈನಲ್ ಸ್ವರೂಪ ಪಡೆದುಕೊಂಡಿದೆ.

ಲಖನೌ(ಜ.29):   ಗುರಿ 100 ರನ್. ಆದರೆ ಈ ಅಲ್ಪ ಮೊತ್ತ ಚೇಸಿಂಗ್ ವೇಳೆ ಟೀಂ ಇಂಡಿಯಾ ಹಲವು ಎಡವಟ್ಟುಗಳನ್ನೇ ಮಾಡಿದೆ. ಪ್ರತಿ ಎಸತೆದಲ್ಲಿ ರನ್ ಬರಲೇಬೇಕೆಂಬ ಒತ್ತಡ ತಂಡದ ಮೇಲೆ ಇರಲಿಲ್ಲ. ಆದರೂ ಇಬ್ಬರು ಬ್ಯಾಟ್ಸ್‌ಮನ್ ರನೌಟ್‌ಗೆ ಬಲಿಯಾಗಿದ್ದಾರೆ. ಇದರ ನಡುವೆ ಭಾರತ ಕುಂಟುತ್ತಾ ಸಾಗಿತು. ನ್ಯೂಜಿಲೆಂಡ್ ಎಲ್ಲಾ ಪ್ರಯತ್ನ ಮಾಡಿ ಭಾರತ ಕಟ್ಟಿಹಾಕಲು ಯತ್ನಿಸಿತು. ಟಾರ್ಗೆಟ್ 20 ರನ್ ಹೆಚ್ಚಿದ್ದರೂ ಭಾರತಕ್ಕೆ ಗೆಲುವು ದೂರವಾಗುತ್ತಿತ್ತು. ಭಾರತ ಸುಲಭ ಗುರಿಯನ್ನು 19.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಹರಸಾಹಸ ಪಟ್ಟು ದಡ ಸೇರಿತು. 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ.

ನ್ಯೂಜಿಲೆಂಡ್ ತಂಡ ಗೆಲುವಿಗೆ 100 ರನ್ ಟಾರ್ಗೆಟ್ ನೀಡಿತ್ತು. ಟಾರ್ಗೆಟ್ ಸುಲಭವಾಗಿತ್ತು. ಟೀಂ ಇಂಡಿಯಾ ಮೇಲೆ ಯಾವುದೇ ಒತ್ತಡ ಇರಲಿಲ್ಲ. ಆದರ 17 ರನ್‌ಗಳಿಸುವಷ್ಟರಲ್ಲೇ ಟೀಂ ಇಂಡಿಯಾ ಮೊದಲ ವಿಕೆಟ್ ಕಳೆದುಕೊಂಡಿತು. ಶುಭಮನ್ ಗಿಲ್ 11 ರನ್ ಸಿಡಿಸಿ ಔಟಾದರು. 19 ರನ್ ಸಿಡಿಸಿದ್ದ ಇಶಾನ್ ಕಿಶನ್ ವಿಕೆಟ್ ಕೂಡ ಪತನಗೊಂಡಿತು. ಇಶಾನ್ ಕಿಶನ್ ಬೆನಲ್ಲೇ ರಾಹುಲ್ ತ್ರಿಪಾಠಿ ವಿಕೆಟ್ ಕೈಚೆಲ್ಲಿದರು. ತ್ರಿಪಾಠಿ 13 ರನ್ ಸಿಡಿಸಿದರು.

ಇತ್ತ ವಾಶಿಂಗ್ಟನ್ ಸುಂದರ್ 10 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಸೂರ್ಯಕುಮಾರ್ ಯಾದವ್ ಹಾಗೂ ಸುಂದರ್ ನಡುವಿನ ಗೊಂದಲದಿಂದ ವಿಕೆಟ್ ಕೈಚೆಲ್ಲಿದರು. ಅಲ್ಪ ಮೊತ್ತ ಚೇಸಿಂಗ್ ವೇಳೆ ಭಾರತ 2 ಪ್ರಮುಖ ವಿಕೆಟ್ ರನೌಟ್‌ಗೆ ಬಲಿಯಾಯಿತು. ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟ ಟೀಂ ಇಂಡಿಯಾಗೆ ಉಸಿರಾಟ ನೀಡಿತು.

ಭಾರತ ಗೆಲುವಿಗೆ ಅಂತಿಮ 6 ಎಸೆತದಲ್ಲಿ 6 ರನ್ ಬೇಕಿತ್ತು. ಮೊದಲ ಎಸೆತದಲ್ಲಿ 1 ರನ್ ಕಲೆಹಾಕಿದ ಭಾರತ 2ನೇ ಎಸೆತದಲ್ಲಿ ರನ್ ಕಲೆ ಹಾಕಲಿಲ್ಲ. ಇದು ಟೀಂ ಇಂಡಿಯಾ ಮೇಲೆ ಒತ್ತಡ ಹೆಚ್ಚಿಸಿತು. 3ನೇ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಕ್ಯಾಚ್ ನೀಡಿದರು. ಆದರೆ ವೇಗಿ ಟಿಕ್ನರ್ ಕೈಯಿಂದ ಚೆಂಡು ನಲೆಕ್ಕುರುಳಿತು. ಜೀವದಾನದ ಜೊತೆಗೆ 1 ರನ್ ಕರುಣಿಸಿತು. 5ನೇ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಬೌಂಡರಿ ಸಿಡಿಸಿದರು. ಇದರೊಂದಿಗೆ ಭಾರತ 6 ವಿಕೆಟ್ ಗೆಲುವು ದಾಖಲಿಸಿತು. ಸೂರ್ಯಕುಮಾರ್ ಯಾದವ್ ಅಜೇಯ 26 ರನ್ ಸಿಡಿಸಿದರೆ, ಪಾಂಡ್ಯ ಅಜೇಯ 15 ರನ್ ಸಿಡಿಸಿದರು. ಭಾರತ ಸರಣಿಯನ್ನು 1-1 ಅಂತರದಲ್ಲಿ ಸಮಬಲ ಮಾಡಿಕೊಂಡಿತು. 

ನ್ಯೂಜಿಲೆಂಡ್ ಇನ್ನಿಂಗ್ಸ್
ನ್ಯೂಜಿಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕಳೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ಪ್ರದರ್ಶನ ನೀಡಿತ್ತು. ಇಷ್ಟೇ ಅಲ್ಲ ಗೆಲುವು ಸಾಧಿಸಿತ್ತು. ಇದೇ ಲೆಕ್ಕಾಚಾರದಲ್ಲಿ ಬ್ಯಾಟಿಂಗ್ ಇಳಿದ ನ್ಯೂಜಿಲೆಂಡ್‌ಗೆ ಟೀಂ ಇಂಡಿಯಾ ಶಾಕ್ ನೀಡಿತು. ಆರಂಭದಿದಲೇ ಟೀಂ ಇಂಡಿಯಾ ದಾಳಿ ನಡೆಸಿತು. ಫಿನ್ ಅಲೆನ್ 11 ರನ್ ಸಿಡಿಸಿ ಔಟಾದರು. ಇತ್ತ ಕೊನ್ವೇ 11 ರನ್ ಕಾಣಿಕೆ ನೀಡಿದರು. ಚಾಪ್‌ಮ್ಯಾನ್ 14 ರನ್ ಸಿಡಿಸಿ ನಿರ್ಗಮಿಸಿದರು. 

ಗ್ಲೆನ್ ಫಿಲಿಪ್ಸ್ ಹಾಗೂ ಡರಿಲ್ ಮಿಚೆಲ್ ಅಬ್ಬರಿಸಲಿಲ್ಲ. ಇದು ನ್ಯೂಜಿಲೆಂಡ್ ತಂಡಕ್ಕೆ ತೀವ್ರ ಹೊಡೆತ ನೀಡಿತು. ಮಿಚೆಲ್ ಬ್ರೇಸ್‌ವೆಲ್ ಹಾಗೂ ಮಿಚೆಲ್ ಸ್ಯಾಂಟ್ನರ್ ಜೊತೆಯಾಟದಿಂದ ನ್ಯೂಜಿಲೆಂಡ್ ಕೊಂಚ ಚೇತರಿಸಿಕೊಂಡಿತು. ಬ್ರೇಸ್‌ವೆಲ್ ಆಟ 14 ರನ್‌ಗಳಿಗೆ ಅಂತ್ಯವಾಯಿತು. ಇತ್ತ ಸ್ಯಾಂಟ್ನರ್ ಹೋರಾಟ ಮುಂದುವರಿಸಿದರು.

ಐಶ್ ಸೋಧಿ, ಲ್ಯೂಕಿ ಫರ್ಗ್ಯೂಸನ್ ಅಬ್ಬರಿಸಲಿಲ್ಲ. ಸ್ಯಾಂಟ್ನರ್ ಅಜೇಯ 19 ರನ್ ಸಿಡಿಸಿದರು. ಇದು ನ್ಯೂಜಿಲೆಂಡ್ ವೈಯುಕ್ತಿಕ ಗರಿಷ್ಟ ರನ್. ಅಂತಿಮವಾಗಿ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 99 ರನ್ ಸಿಡಿಸಿತು. 
 

click me!