ಆಂಗ್ಲರನ್ನು ಬಗ್ಗುಬಡಿದ ಟೀಂ ಇಂಡಿಯಾ: ತವರಿನಲ್ಲಿ ಭಾರತಕ್ಕೆ ಮತ್ತೊಂದು ಟಿ20 ಸರಣಿ!

Published : Feb 01, 2025, 08:47 AM IST
ಆಂಗ್ಲರನ್ನು ಬಗ್ಗುಬಡಿದ ಟೀಂ ಇಂಡಿಯಾ: ತವರಿನಲ್ಲಿ ಭಾರತಕ್ಕೆ ಮತ್ತೊಂದು ಟಿ20 ಸರಣಿ!

ಸಾರಾಂಶ

ಭಾರತ ತಂಡ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ 15 ರನ್‌ಗಳಿಂದ ರೋಚಕ ಜಯ ಸಾಧಿಸಿ ಸರಣಿ 3-1 ಅಂತರದಲ್ಲಿ ವಶಪಡಿಸಿಕೊಂಡಿದೆ. 181 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 166 ರನ್‌ಗಳಿಗೆ ಆಲೌಟ್ ಆಯಿತು. ಹಾರ್ದಿಕ್ ಮತ್ತು ದುಬೆ ತಲಾ 53 ರನ್ ಗಳಿಸಿ ಭಾರತಕ್ಕೆ ಆಸರೆಯಾದರು. 

ಪುಣೆ: ಭಾರತ ತಂಡ ತವರಿನಲ್ಲಿ ಸತತ 17ನೇ ಟಿ20 ಸರಣಿಯಲ್ಲಿ ಅಜೇಯವಾಗಿ ಉಳಿಯಲಿದೆ. ಇಂಗ್ಲೆಂಡ್‌ ವಿರುದ್ಧ ಶುಕ್ರವಾರ ಇಲ್ಲಿ ನಡೆದ 4ನೇ ಪಂದ್ಯದಲ್ಲಿ 15 ರನ್‌ಗಳ ರೋಚಕ ಗೆಲುವು ಸಾಧಿಸಿದ ಭಾರತ, 5 ಪಂದ್ಯಗಳ ಸರಣಿಯಲ್ಲಿ 3-1ರ ಮುನ್ನಡೆ ಪಡೆದು, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿತು.

ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, 12 ರನ್‌ಗೆ 3 ವಿಕೆಟ್‌ ಕಳೆದುಕೊಂಡರೂ ಹಾರ್ದಿಕ್‌ ಪಾಂಡ್ಯ ಹಾಗೂ ಶಿವಂ ದುಬೆ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ 20 ಓವರಲ್ಲಿ 9 ವಿಕೆಟ್‌ಗೆ 181 ರನ್‌ ಕಲೆಹಾಕಿತು. ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಇಂಗ್ಲೆಂಡ್‌, 19.4 ಓವರಲ್ಲಿ 166 ರನ್‌ಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು.

ಸಚಿನ್ ತೆಂಡುಲ್ಕರ್ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ; ಜೀವಮಾನ ಶ್ರೇಷ್ಠ ಪ್ರಶಸ್ತಿ ಘೋಷಿಸಿದ ಬಿಸಿಸಿಐ!

ಆರಂಭಿಕ ಆಘಾತ: ಸ್ಯಾಮ್ಸನ್‌ 1, ತಿಲಕ್‌ 0, ಸೂರ್ಯ 0 ರನ್‌ಗೆ ವಿಕೆಟ್‌ ಕಳೆದುಕೊಂಡಿದ್ದರಿಂದ ಭಾರತ ಆರಂಭಿಕ ಆಘಾತಕ್ಕೆ ಗುರಿಯಾಯಿತು. ಸರಣಿಯಲ್ಲಿ ಮೊದಲ ಪಂದ್ಯವನ್ನಾಡಿದ ಸಕೀಬ್‌ ಮೊಹ್ಮೂದ್‌ ಭಾರತದ ಪ್ರಮುಖ ಬ್ಯಾಟರ್‌ಗಳನ್ನು ಪೆವಿಲಿಯನ್‌ಗಟ್ಟಿದರು.

ಅಭಿಷೇಕ್‌ ಶರ್ಮಾ 29 ಹಾಗೂ ರಿಂಕು ಸಿಂಗ್‌ 30 ರನ್‌ ಗಳಿಸಿ ಭಾರತಕ್ಕೆ ಚೇತರಿಕೆ ನೀಡಿದರು. 6ನೇ ವಿಕೆಟ್‌ಗೆ ಕ್ರೀಸ್‌ ಹಂಚಿಕೊಂಡ ಹಾರ್ದಿಕ್‌ ಹಾಗೂ ಶಿವಂ ದುಬೆ, ಇಂಗ್ಲೆಂಡ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ದುಬೆ 34 ಎಸೆತದಲ್ಲಿ 7 ಬೌಂಡರಿ, 2 ಸಿಕ್ಸರ್‌ನೊಂದಿಗೆ 53 ರನ್‌ ಗಳಿಸಿದರೆ, ಪಾಂಡ್ಯ 30 ಎಸೆತದಲ್ಲಿ 4 ಬೌಂಡರಿ, 4 ಸಿಕ್ಸರ್‌ನೊಂದಿಗೆ 53 ರನ್‌ ಚಚ್ಚಿದರು.

ಇಂಗ್ಲೆಂಡ್‌ಗೆ ಫಿಲ್‌ ಸಾಲ್ಟ್‌ ಹಾಗೂ ಬೆನ್‌ ಡಕೆಟ್‌ ಉತ್ತಮ ಆರಂಭ ನೀಡಿದರು. 35 ಎಸೆತದಲ್ಲಿ 62 ರನ್‌ ಸೇರಿಸಿದರು. ಆದರೆ 5 ಎಸೆತಗಳ ಅಂತರದಲ್ಲಿ ಡಕೆಟ್‌ (39) ಹಾಗೂ ಸಾಲ್ಟ್‌ (23) ಇಬ್ಬರೂ ಔಟಾದರು. 26 ಎಸೆತದಲ್ಲಿ 51 ರನ್‌ ಚಚ್ಚಿ ಅಪಾಯಕಾರಿಯಾಗಿ ತೋರುತ್ತಿದ್ದ ಹ್ಯಾರಿ ಬ್ರೂಕ್‌ರನ್ನು ವರುಣ್‌ ಔಟ್‌ ಮಾಡಿದರು.

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಆಸೀಸ್‌ಗೆ ಬಿತ್ತು ಬಲವಾದ ಹೊಡೆತ; ಸ್ಟಾರ್ ಆಲ್ರೌಂಡರ್ ಟೂರ್ನಿಯಿಂದಲೇ ಔಟ್

ಇಂಗ್ಲೆಂಡ್‌ ಕೊನೆ ಓವರ್‌ ವರೆಗೂ ಹೋರಾಟ ನಡೆಸಿದರೂ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ.

ಸ್ಕೋರ್‌: ಭಾರತ 20 ಓವರಲ್ಲಿ 181/9 (ಹಾರ್ದಿಕ್‌ 53, ದುಬೆ 53, ಸಕೀಬ್‌ 3-35), ಇಂಗ್ಲೆಂಡ್‌ 19.4 ಓವರಲ್ಲಿ 166/10 (ಬ್ರೂಕ್‌ 51, ಡಕೆಟ್‌ 39, ಬಿಷ್ಣೋಯ್‌ 3-28)

ದುಬೆ ಬದಲು ರಾಣಾ!

ಸ್ಫೋಟಕ ಆಟವಾಡಿ ಭಾರತಕ್ಕೆ ನೆರವಾದ ಶಿವಂ ದುಬೆ ಅವರ ತಲೆಗೆ ಪೆಟ್ಟು ಬಿದ್ದಿದ್ದರಿಂದ ಸುಪ್ತಾವಸ್ಥೆ ಬದಲಿ ಆಟಗಾರನಾಗಿ ವೇಗಿ ಹರ್ಷಿತ್‌ ರಾಣಾರನ್ನು ಆಡಿಸಲಾಯಿತು. ತಾವೆಸೆದ ಮೊದಲ ಓವರಲ್ಲೇ ವಿಕೆಟ್‌ ಕಬಳಿಸಿದ ಹರ್ಷಿತ್‌, ನಿರ್ಣಾಯಕ ಹಂತದಲ್ಲಿ ಜೇಮಿ ಓವರ್‌ಟನ್‌ರನ್ನು ಔಟ್‌ ಮಾಡಿ ಭಾರತದ ಗೆಲುವಿಗೆ ಕೊಡುಗೆ ನೀಡಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ