Ind vs Aus ಸೆಂಚುರಿ ಟೆಸ್ಟ್ ಕ್ಲಬ್ ಸೇರಲು ತುದಿಗಾಲಲ್ಲಿ ನಿಂತ ಚೇತೇಶ್ವರ್ ಪೂಜಾರ..!

By Naveen KodaseFirst Published Feb 14, 2023, 5:48 PM IST
Highlights

ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್‌ ಪಂದ್ಯ ಫೆಬ್ರವರಿ 17ರಿಂದ ಆರಂಭ
ದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯ
ಎರಡನೇ ಟೆಸ್ಟ್ ಚೇತೇಶ್ವರ್ ಪೂಜಾರ ಪಾಲಿಗೆ 100ನೇ ಟೆಸ್ಟ್ ಪಂದ್ಯ

ನವದೆಹಲಿ(ಫೆ.14): ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್‌ ಎಂದೇ ಬಿಂಬಿತವಾಗಿರುವ ಚೇತೇಶ್ವರ್ ಪೂಜಾರ, ಇದೀಗ ಆಸ್ಟ್ರೇಲಿಯಾ ಎದುರು ಇದೇ ಫೆಬ್ರವರಿ 17ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಭಾರತ ಪರ 100 ಟೆಸ್ಟ್‌ ಪಂದ್ಯವನ್ನಾಡಿದ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ.

ಸದ್ಯ ಚೇತೇಶ್ವರ್ ಪೂಜಾರ 99 ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ. ಇದೀಗ ಡೆಲ್ಲಿ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ 100 ಟೆಸ್ಟ್‌ ಪಂದ್ಯವನ್ನಾಡಿದ ಭಾರತದ 13ನೇ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪೂಜಾರ ಪಾತ್ರರಾಗಲಿದ್ದಾರೆ. ಸದ್ಯ ಹಾಲಿ ಭಾರತೀಯ ಕ್ರಿಕೆಟಿಗರ ಪೈಕಿ ವಿರಾಟ್ ಕೊಹ್ಲಿ ಬಳಿಕ 100 ಟೆಸ್ಟ್‌ ಪಂದ್ಯವನ್ನಾಡುತ್ತಿರುವ ಎರಡನೇ ಕ್ರಿಕೆಟಿಗ ಎನ್ನುವ ಕೀರ್ತಿಯೂ ಸೌರಾಷ್ಟ್ರ ಮೂಲದ ಪೂಜಾರ ಪಾಲಾಗಲಿದೆ. ಕಳೆದ ವರ್ಷದ(2022) ಮಾರ್ಚ್‌ನಲ್ಲಿ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ದ ತಮ್ಮ ವೃತ್ತಿಜೀವನದ 100ನೇ ಟೆಸ್ಟ್ ಪಂದ್ಯವನ್ನಾಡಿದ್ದರು.

ಚೇತೇಶ್ವರ್ ಪೂಜಾರ 2010ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ದವೇ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದೀಗ ಕಾಕತಾಳೀಯವೆನ್ನುವಂತೆ ಪೂಜಾರ ತಮ್ಮ ವೃತ್ತಿಜೀವನದ 100ನೇ ಟೆಸ್ಟ್‌ ಪಂದ್ಯವನ್ನುಆಸ್ಟ್ರೇಲಿಯಾ ಎದುರು ಆಡಲು ಸಜ್ಜಾಗಿದ್ದಾರೆ. ಪೂಜಾರ ತಮ್ಮ ಪಾದಾರ್ಪಣೆ ಪಂದ್ಯದಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ರಾಹುಲ್ ದ್ರಾವಿಡ್ ಬದಲಿಗೆ ಮೂರನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಆಕರ್ಷಕ 72 ರನ್‌ ಬಾರಿಸಿ ಮಿಂಚಿದ್ದರು. ಆಸ್ಟ್ರೇಲಿಯಾ ನೀಡಿದ್ದ 207 ರನ್‌ಗಳ ಸಾಧಾರಣ ಗುರಿಯನ್ನು ಭಾರತ ಅನಾಯಾಸವಾಗಿ ತಲುಪಿತ್ತು. ಈ ಮೂಲಕ ಭಾರತ ಎರಡು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ ಸ್ವೀಪ್ ಮಾಡಿತ್ತು. ಇದಾದ ಬಳಿಕ ಚೇತೇಶ್ವರ್ ಪೂಜಾರ ಕಳೆದೊಂದು ದಶಕದಿಂದ ಭಾರತ ಟೆಸ್ಟ್ ತಂಡದ  ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.

Ind vs Aus ಧರ್ಮಶಾಲಾದಿಂದ ಇಂದೋರ್‌ಗೆ ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್ ಶಿಫ್ಟ್‌..!

ಚೇತೇಶ್ವರ್ ಪೂಜಾರ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಬಳಿಕ ಆಸ್ಟ್ರೇಲಿಯಾ ಎದುರು 20ಕ್ಕೂ ಅಧಿಕ ಟೆಸ್ಟ್‌ ಪಂದ್ಯಗಳನ್ನಾಡಿದ್ದು, ಬಲಿಷ್ಠ ಕಾಂಗರೂ ಪಡೆಯ ಎದುರು ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಪೂಜಾರ, ಆಸ್ಟ್ರೇಲಿಯಾ ಎದುರು 21 ಟೆಸ್ಟ್‌ ಪಂದ್ಯಗಳನ್ನಾಡಿ 52.77ರ ಬ್ಯಾಟಿಂಗ್ ಸರಾಸರಿಯಲ್ಲಿ 1,900 ರನ್‌ ಬಾರಿಸಿದ್ದಾರೆ. ಇದರಲ್ಲಿ 5 ಶತಕ ಹಾಗೂ 10 ಅರ್ಧಶತಕಗಳು ಸೇರಿವೆ.

ಭಾರತ ಕ್ರಿಕೆಟ್‌ ತಂಡವು 2018-19ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ, ಚೇತೇಶ್ವರ್ ಪೂಜಾರ 521 ರನ್ ಸಿಡಿಸುವ ಮೂಲಕ ಸರಣಿಯಲ್ಲಿ ಗರಿಷ್ಠ ರನ್ ಸ್ಕೋರರ್‌ ಆಗಿ ಹೊರಹೊಮ್ಮಿದ್ದರು. ಇದರ ಜತೆಗೆ ಟೀಂ ಇಂಡಿಯಾ, ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಬಾರಿಗೆ ಟೆಸ್ಟ್ ಸರಣಿ ಗೆಲ್ಲುವಲ್ಲಿ ಪೂಜಾರ ಮಹತ್ತರ ಪಾತ್ರವನ್ನು ವಹಿಸಿದ್ದರು. 

ಇದುವರೆಗೂ ಚೇತೇಶ್ವರ್ ಪೂಜಾರ ಒಟ್ಟು 99 ಟೆಸ್ಟ್‌ ಪಂದ್ಯಗಳನ್ನಾಡಿ 44.15ರ ಬ್ಯಾಟಿಂಗ್ ಸರಾಸರಿಯಲ್ಲಿ 19 ಶತಕ ಹಾಗೂ 34 ಅರ್ಧಶತಕ ಸಹಿತ 7,021 ರನ್ ಬಾರಿಸಿದ್ದಾರೆ. 

click me!