
ಬ್ರಿಸ್ಬೇನ್(ಜ.20): ಕಳೆದ ಬಾರಿ ಆಸ್ಪ್ರೇಲಿಯಾ ಪ್ರವಾಸದಲ್ಲಿ 500ಕ್ಕೂ ಹೆಚ್ಚು ರನ್ ಕಲೆಹಾಕಿ ಆಸ್ಪ್ರೇಲಿಯಾ ಪಾಲಿಗೆ ವಿಲನ್ ಆಗಿದ್ದ ಚೇತೇಶ್ವರ್ ಪೂಜಾರ, ಈ ಸರಣಿಯೂ ಕಾಂಗರೂಗಳನ್ನು ಬಲವಾಗಿ ಕಾಡಿದರು. ಈ ಸರಣಿಯಲ್ಲಿ 900ಕ್ಕೂ ಹೆಚ್ಚು ಎಸೆತ ಎದುರಿಸಿದ ಪೂಜಾರ, ವಿನೂತನ ದಾಖಲೆಯೊಂದನ್ನು ಬರೆದರು.
ನೇಥನ್ ಲಯನ್ ವಿರುದ್ಧ ಟೆಸ್ಟ್‌ನಲ್ಲಿ 500 ರನ್ ಪೂರೈಸಿದ ಪೂಜಾರ, ಕಳೆದ 20 ವರ್ಷಗಳಲ್ಲಿ ಟೆಸ್ಟ್‌ನಲ್ಲಿ ಒಬ್ಬ ಬೌಲರ್ ವಿರುದ್ಧ 500ಕ್ಕೂ ಹೆಚ್ಚು ರನ್ ಬಾರಿಸಿದ ಕೇವಲ 2ನೇ ಬ್ಯಾಟ್ಸ್‌ಮನ್ ಎನ್ನುವ ಹಿರಿಮಗೆ ಪಾತ್ರರಾದರು.
ಈ ಮೊದಲು ಪಾಕಿಸ್ತಾನದ ಸಯೀದ್ ಅಜ್ಮಲ್ ವಿರುದ್ಧ ಲಂಕಾದ ಕುಮಾರ ಸಂಗಕ್ಕರ ಈ ಸಾಧನೆ ಮಾಡಿದ್ದರು. ಇನ್ನು ಆಸ್ಪ್ರೇಲಿಯಾದಲ್ಲಿ 6 ಇನ್ನಿಂಗ್ಸ್‌ಗಳಲ್ಲಿ 200ಕ್ಕೂ ಹೆಚ್ಚು ಎಸೆತ ಎದುರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನ್ನುವ ದಾಖಲೆಯನ್ನೂ ಪೂಜಾರ ಬರೆದಿದ್ದಾರೆ. ಗವಾಸ್ಕರ್ ಹಾಗೂ ಕೊಹ್ಲಿ 5 ಬಾರಿ ಈ ಸಾಧನೆ ಮಾಡಿದ್ದರು.
ಟೀಂ ಇಂಡಿಯಾ ಸರಣಿ ಗೆಲುವಿನ ಬಳಿಕ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ ಹೇಗಿದೆ?
ಪೂಜಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಅತಿಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಏರಿದ್ದಾರೆ. ಸದ್ಯ ಅವರು 81 ಟೆಸ್ಟ್‌ಗಳಲ್ಲಿ 6111 ರನ್ ಗಳಿಸಿದ್ದು, ಜಿ.ಆರ್.ವಿಶ್ವನಾಥ್ (6080 ರನ್)ರನ್ನು ಹಿಂದಿಕ್ಕಿದರು.
ಆಸೀಸ್ 32 ವರ್ಷದ ದಾಖಲೆ ಪತನ!
ಆಸ್ಪ್ರೇಲಿಯಾ ತಂಡ ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ಈ ಸೋಲಿಗೂ ಮುನ್ನ ಕೊನೆ ಬಾರಿಗೆ ಸೋತಾಗ, ಭಾರತ ತಂಡದ ಬಹುತೇಕ ಆಟಗಾರರು ಜನಿಸಿರಲಿಲ್ಲ. 1988ರ ಬಳಿಕ ಗಾಬಾದಲ್ಲಿ ಆಸ್ಪ್ರೇಲಿಯಾಗಿದು ಮೊದಲ ಟೆಸ್ಟ್ ಸೋಲು. 31 ಟೆಸ್ಟ್‌ಗಳ ಬಳಿಕ ಆಸೀಸ್ ಗಾಬಾದಲ್ಲಿ ಮೊದಲ ಸೋಲು.
3ನೇ ಗರಿಷ್ಠ ಗುರಿ ಬೆನ್ನತ್ತಿ ಗೆದ್ದ ಭಾರತ
328 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿ ಗೆದ್ದ ಟೀಂ ಇಂಡಿಯಾ, ಈ ಮೊದಲು ಇದಕ್ಕಿಂತ ಹೆಚ್ಚು ಗುರಿಯನ್ನು ಕೇವಲ 2 ಬಾರಿ ಯಶಸ್ವಿಯಾಗಿ ತಲುಪಿತ್ತು. 1975-76ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್‌ನಲ್ಲಿ 403 ರನ್ ಗುರಿ ಬೆನ್ನತ್ತಿ ಗೆದ್ದಿದ್ದ ಭಾರತ, 2008-09ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ 387 ರನ್ ಗುರಿ ಬೆನ್ನತ್ತಿ ಜಯಿಸಿತ್ತು.
ಸ್ಮಿತ್, ವಾರ್ನರ್ ಇದ್ರೂ ಆಸೀಸ್‌ಗೆ ಸೋಲು!
2018-19ರಲ್ಲೂ ಭಾರತ 2-1ರಲ್ಲಿ ಸರಣಿ ಜಯಿಸಿತ್ತು. ಆಗ ಆಸ್ಪ್ರೇಲಿಯಾ ತಂಡದಲ್ಲಿ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇರಲಿಲ್ಲ. ಹೀಗಾಗಿ ಭಾರತಕ್ಕೆ ಗೆಲ್ಲಲು ಅನುಕೂಲವಾಯಿತು ಎಂದು ಆಸ್ಪ್ರೇಲಿಯಾದ ಮಾಜಿ ಕ್ರಿಕೆಟಿಗರು ಸಮರ್ಥಿಸಿಕೊಂಡಿದ್ದರು. ಈ ಬಾರಿ ಸ್ಮಿತ್ ಹಾಗೂ ವಾರ್ನರ್ ಇಬ್ಬರೂ ಇದ್ದರು. ಆದರೂ ಆಸೀಸ್ ಸರಣಿ ಗೆಲ್ಲಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.