
ನವದೆಹಲಿ: ಮುಂಬರುವ ಬಹುನಿರೀಕ್ಷಿತ ಏಷ್ಯಾಕಪ್ ಟಿ20 ಟೂರ್ನಿಗೆ ಭಾರತ ತಂಡಕ್ಕೆ ಆಯ್ಕೆಯಾಗುವ ಆಟಗಾರರು ಯಾರು ಎಂಬ ಕುತೂಹಲಕ್ಕೆ ಮಂಗಳವಾರ ತೆರೆ ಬೀಳಲಿದೆ. ಬಿಸಿಸಿಐ ಆಯ್ಕೆ ಸಮಿತಿ ಮಂಗಳವಾರ ಸಭೆ ನಡೆಸಲಿದ್ದು, ಟೂರ್ನಿಯಲ್ಲಿ ಆಡುವ ಆಟಗಾರರ ಪಟ್ಟಿ ಸಿದ್ಧಪಡಿಸಲಿದೆ.
ಟೂರ್ನಿಗೆ 15 ಆಟಗಾರರ ಪಟ್ಟಿ ಪ್ರಕಟಿಸಬೇಕಿದೆ. ಆದರೆ ಪ್ರತಿಭಾವಂತರೇ ತುಂಬಿರುವ ತಂಡದಲ್ಲಿ 30ರಷ್ಟು ಆಟಗಾರರ ನಡುವೆ ಪೈಪೋಟಿ ಇದೆ. ಒಂದೊಂದು ಸ್ಥಾನಕ್ಕೂ ಹಲವು ಹೆಸರುಗಳು ಕೇಳಿಬರುತ್ತಿವೆ.
ಅಗ್ರ 3 ಸ್ಥಾನಕ್ಕೆ ಒಟ್ಟು 6 ಆಟಗಾರರ ನಡುವೆ ಪೈಪೋಟಿ ಇದೆ. ವಿಶ್ವ ನಂ.2 ಬ್ಯಾಟರ್ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾಗೆ ಆಯ್ಕೆ ಸಮಿತಿ ಮಣೆ ಹಾಕಬಹುದು. ಅವರ ಜೊತೆಗೆ ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್ ಕೂಡಾ ಪೈಪೋಟಿ ನಡೆಸಬೇಕಿದೆ. ಇದರಲ್ಲಿ ಜೈಸ್ವಾಲ್ ಹೆಚ್ಚುವರಿ ಆರಂಭಿಕನಾಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಕಳೆದ ಐಪಿಎಲ್‌ನಲ್ಲಿ 4ನೇ ಗರಿಷ್ಠ ಸ್ಕೋರರ್, ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅಭೂತಪೂರ್ವ ಆಟದ ಹೊರತಾಗಿಯೂ ಗಿಲ್‌ಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ.
ತಿಲಕ್ vs ಶ್ರೇಯಸ್?: ಮಧ್ಯಮ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ ಹಾಗೂ ತಿಲಕ್ ವರ್ಮಾ ನಡುವೆ ತೀವ್ರ ಪೈಪೋಟಿ ಇದೆ. ಇಬ್ಬರೂ ಐಪಿಎಲ್, ಭಾರತ ತಂಡದಲ್ಲಿ ಅಬ್ಬರಿಸಿದ್ದು, ಟಿ20ಗೆ ಹೇಳಿ ಮಾಡಿಸಿದ ಆಟಗಾರರು ಎನಿಸಿಕೊಂಡಿದ್ದಾರೆ. ಶ್ರೇಯಸ್ ಕಳೆದ ಐಪಿಎಲ್‌ನಲ್ಲಿ 175ರ ಸ್ಟ್ರೈಕ್‌ರೇಟ್‌ನಲ್ಲಿ 600+ ರನ್ ಗಳಿಸಿದ್ದರು. ತಿಲಕ್ ಕಳೆದ ವರ್ಷ ಭಾರತದ ಪರ ಸತತ 2 ಶತಕ ಬಾರಿಸಿದ್ದು, ಐಪಿಎಲ್‌ನಲ್ಲೂ ಸ್ಫೋಟಕ ಆಟವಾಡಿದ್ದರು. ಆದರೆ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ತಂಡದಲ್ಲಿ ಅವಕಾಶ ಸಿಗಬಹುದು. 15ರ ಬಳಗದಲ್ಲಿ ಇಬ್ಬರನ್ನು ಆಯ್ಕೆ ಮಾಡಿದರೂ ಅಚ್ಚರಿಯಿಲ್ಲ.
ಉಳಿದಂತೆ ನಾಯಕ ಸೂರ್ಯಕುಮಾರ್ ಯಾದವ್, ಆಲ್ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ಸಾಧ್ಯತೆ ಅಧಿಕ. ಆದರೆ ರಿಂಕು ಸಿಂಗ್‌ಗೆ ಅವಕಾಶ ಸಿಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಸಂಜು ಜೊತೆ 2ನೇ ವಿಕೆಟ್ ಕೀಪರ್ ಸ್ಥಾನಕ್ಕೆ ಜಿತೇಶ್ ಶರ್ಮಾ ಹಾಗೂ ಧ್ರುವ್ ಜುರೆಲ್ ನಡುವೆ ಪೈಪೋಟಿಯಿದೆ.
ಸ್ಪಿನ್ನರ್ ಯಾರು?
ತಂಡಕ್ಕೆ ಸ್ಪಿನ್ನರ್ ಆಯ್ಕೆ ಬಗ್ಗೆಯೂ ಕುತೂಹಲವಿದೆ. ಅಕ್ಷರ್ ಜೊತೆ ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್ ಆಯ್ಕೆ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ರವಿ ಬಿಷ್ಣೋಯ್ ಹೆಸರು ಕೂಡಾ ಕೇಳಿಬರುತ್ತಿದೆ. ಇನ್ನು, ಹೆಚ್ಚುವರಿ ಆಲ್ರೌಂಡರ್ ಅಗತ್ಯವಿದೆ ಎಂದು ಭಾವಿಸಿದರೆ ವಾಷಿಂಗ್ಟನ್ ಸುಂದರ್ ಕೂಡಾ ಆಯ್ಕೆಯಾಗಬಹುದು. ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಜೊತೆ ಶಿವಂ ದುಬೆ ಸ್ಥಾನ ಗಿಟ್ಟಿಸಿಕೊಳ್ಳಬಹುದು.
ವೇಗಿಗಳ ರೇಸ್‌ನಲ್ಲಿ ಹಲವರು
ವೇಗಿ ಬುಮ್ರಾ ಆಡುವುದು ಬಹುತೇಕ ಖಚಿತವಾಗಿದ್ದು, ಅರ್ಶ್‌ದೀಪ್ ಸಿಂಗ್ ಕೂಡಾ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ. ಇನ್ನೂ 3 ಸ್ಥಾನಗಳು ಬಾಕಿಯಿದ್ದು, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ ಜೊತೆ ಮೊಹಮ್ಮದ್ ಸಿರಾಜ್ ಆಯ್ಕೆಯಾಗಬಹುದು.
ಭಾರೀ ಕುತೂಹಲ
- ಆರಂಭಿಕ 3 ಸ್ಥಾನಗಳಿಗೆ 6 ಆಟಗಾರರ ನಡುವೆ ಪೈಪೋಟಿ
- ಗಿಲ್, ಜೈಸ್ವಾಲ್, ಸುದರ್ಶನ್ ಆಯ್ಕೆ ಬಗ್ಗೆ ಕುತೂಹಲ
- ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್, ತಿಲಕ್ ನಡುವೆ ಸ್ಪರ್ಧೆ
- ಕುಲ್ದೀಪ್, ವರುಣ್, ರವಿ ಬಿಷ್ಣೋಯ್ ನಡುವೆ ಸ್ಪಿನ್ನರ್ಸ್ ಸ್ಥಾನಕ್ಕೆ ಪೈಪೋಟಿ
- ವೇಗದ ಬೌಲರ್, ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಸಿಗುತ್ತಾ ಅವಕಾಶ?
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.