
ಬೆಂಗಳೂರು: ಆ್ಯಂಡರ್‌ಸನ್-ತೆಂಡುಲ್ಕರ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ ಇದೀಗ ಬಿಸಿಸಿಐ ತವರಿನಲ್ಲಿ ನಡೆಯಲಿರುವ ದೇಶಿ ಕ್ರಿಕೆಟ್‌ನತ್ತ ಗಮನ ಹರಿಸುತ್ತಿದೆ. ದೇಶಿ ಕ್ರಿಕೆಟ್ ಟೂರ್ನಿಯು ದುಲೀಪ್ ಟ್ರೋಫಿ ಟೂರ್ನಿಯೊಂದಿಗೆ ಆರಂಭವಾಗಲಿದೆ. ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆರು ತಂಡಗಳು ಕಾದಾಟ ನಡೆಸಲಿವೆ. ಈ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಹಲವು ಸ್ಟಾರ್ ಕ್ರಿಕೆಟಿಗರು ಕಣಕ್ಕಿಳಿಯಲಿದ್ದಾರೆ. ಇದೆಲ್ಲದರ ನಡುವೆ ಭಾರತ ತಂಡವು ಸೆಪ್ಟೆಂಬರ್ 09ರಿಂದ ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಗೆ ಸಜ್ಜಾಗುತ್ತಿದೆ. ಹೀಗಿರುವಾಗಲೇ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ.
ದುಲೀಪ್ ಟ್ರೋಫಿ ಟೂರ್ನಿಗೆ ಈಗಾಗಲೇ ಈಸ್ಟ್ ಝೋನ್ ತಂಡವನ್ನು ಪ್ರಕಟಿಸಲಾಗಿದೆ. ಈಸ್ಟ್ ಝೋನ್ ತಂಡದ ನಾಯಕರಾಗಿ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ನೇಮಕವಾಗಿದ್ದರು. ಇಶಾನ್ ಕಿಶನ್ ಗಾಯದ ಸಮಸ್ಯೆಯಿಂದಾಗಿಯೇ, ಇಂಗ್ಲೆಂಡ್ ಎದುರಿನ ಕೊನೆಯ ಟೆಸ್ಟ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. ಇದಾದ ಬಳಿಕ ಫಿಟ್ನೆಸ್ ಸಾಧಿಸಿದ್ದ ಇಶಾನ್ ಕಿಶನ್, ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದರು. ಇದೀಗ ಇಶಾನ್ ಕಿಶನ್ ಮತ್ತೊಮ್ಮೆ ಗಾಯದ ಸಮಸ್ಯೆಯಿಂದಾಗಿ ದುಲೀಪ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದೀಗ ಇಶಾನ್ ಕಿಶನ್ ಬದಲಿಗೆ ಈಸ್ಟ್ ಝೋನ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆರ್ಶೀವಾದ್ ಸ್ವೆನ್ ಆಯ್ಕೆಯಾಗಿದ್ದರು. ಇನ್ನು ಇಶಾನ್ ಕಿಶನ್ ಅನುಪಸ್ಥಿತಿಯಲ್ಲಿ ಈಸ್ಟ್ ಝೋನ್ ತಂಡದ ನಾಯಕರಾಗಿ ಅಭಿಮನ್ಯು ಈಶ್ವರನ್‌ಗೆ ನಾಯಕ ಪಟ್ಟ ಕಟ್ಟಲಾಗಿದೆ. ದುಲೀಪ್ ಟ್ರೋಫಿ ಟೂರ್ನಿಯು ಇದೇ ಆಗಸ್ಟ್ 28ರಿಂದ ಆರಂಭವಾಗಲಿದೆ.
ಏಷ್ಯಾಕಪ್ ತಂಡದ ಆಯ್ಕೆಯ ರೇಸ್‌ನಿಂದಲೂ ಇಶಾನ್ ಕಿಶನ್ ಔಟ್:
ಎಡಗೈ ಅಗ್ರಕ್ರಮಾಂಕದ ಸ್ಪೋಟಕ ಬ್ಯಾಟರ್ ಇಶಾನ್ ಕಿಶನ್, ಇದೀಗ ಗಾಯದ ಸಮಸ್ಯೆಯಿಂದಾಗಿ ಏಷ್ಯಾಕಪ್ ಟೂರ್ನಿಯಿಂದಲೂ ಹೊರಬಿದ್ದಿದ್ದಾರೆ. ಏಷ್ಯಾಕಪ್ ಟೂರ್ನಿಗೆ ಇದೇ ಅಗಸ್ಟ್ 19ರಂದು ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಭಾರತ ತಂಡವನ್ನು ಆಯ್ಕೆ ಮಾಡಲಿದೆ. ಇದೀಗ ಫಿಸಿಕಲಿ ಅನ್‌ಫಿಟ್ ಆಗಿರುವ ಇಶಾನ್ ಕಿಶನ್, ಏಷ್ಯಾಕಪ್ ಟೂರ್ನಿಗೆ ಭಾರತ ತಂಡದಿಂದ ಆಯ್ಕೆ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಸಂಜು ಸ್ಯಾಮ್ಸನ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಳ್ಳಲಿದ್ದು, ಎರಡನೇ ಆಯ್ಕೆಯ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಇದೀಗ ಧ್ರುವ್ ಜುರೆಲ್ ಹಾಗೂ ಜಿತೇಶ್ ಶರ್ಮಾ ನಡುವೆ ಪೈಪೋಟಿ ಏರ್ಪಟ್ಟಿದೆ.
ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಯು ಮುಂಬರುವ ಸೆಪ್ಟೆಂಬರ್ 09ರಿಂದ ಸೆಪ್ಟೆಂಬರ್ 28ರವರೆಗೆ ನಡೆಯಲಿದೆ. ಏಷ್ಯಾಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿದೆಯಾದರೂ, ಪಾಕಿಸ್ತಾನವೂ ಭಾರತಕ್ಕೆ ಕ್ರಿಕೆಟ್ ಆಡಲು ಬಾರದಿರುವುದರಿಂದ ಯುಎಇನಲ್ಲಿ ಪಂದ್ಯ ಆಯೋಜನೆಗೊಳ್ಳಲಿದೆ. ಯುಎಇನ ದುಬೈ ಹಾಗೂ ಅಬುದಾಬಿಯಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಹಾಲಿ ಚಾಂಪಿಯನ್ ಭಾರತ ಮತ್ತೊಮ್ಮೆ ಏಷ್ಯಾಕಪ್ ಟ್ರೋಫಿ ಜಯಿಸುವ ವಿಶ್ವಾಸದಲ್ಲಿದೆ.
ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಏಷ್ಯಾದ 8 ತಂಡಗಳಾದ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಆಫ್ಘಾನಿಸ್ತಾನ, ಓಮನ್, ಹಾಂಕಾಂಗ್ ಹಾಗೂ ಯುಎಇ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದು, ‘ಎ’ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಯುಎಇ ಹಾಗೂ ಓಮನ್ ತಂಡಗಳು ಸ್ಥಾನ ಪಡೆದಿವೆ. ಇನ್ನು ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಆಪ್ಘಾನಿಸ್ತಾನ ಹಾಗೂ ಹಾಂಕಾಂಗ್ ತಂಡಗಳು ಸ್ಥಾನ ಪಡೆದಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.