ಜಸ್ಪ್ರೀತ್ ಬುಮ್ರಾ ಬೆಂಕಿ ಬೌಲಿಂಗ್, ODI ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಲಗ್ಗೆ..!

By Naveen KodaseFirst Published Jul 13, 2022, 3:45 PM IST
Highlights

* ಐಸಿಸಿ ಪರಿಷ್ಕೃತ ಏಕದಿನ ರ‍್ಯಾಂಕಿಂಗ್‌ ಪ್ರಕಟ
* ಮತ್ತೊಮ್ಮೆ ಬೌಲಿಂಗ್‌ ವಿಭಾಗದಲ್ಲಿ ನಂ.1 ಸ್ಥಾನಕ್ಕೇರಿದ ಬುಮ್ರಾ
* ಇಂಗ್ಲೆಂಡ್ ಎದುರು ಮೊದಲ ಪಂದ್ಯದಲ್ಲಿ 6 ವಿಕೆಟ್ ಕಬಳಿಸಿ ಮಿಂಚಿದ ಬುಮ್ರಾ

ದುಬೈ(ಜು.13): ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಕೇವಲ 19 ರನ್‌ ನೀಡಿ 6 ವಿಕೆಟ್ ಕಬಳಿಸುವ ಮೂಲಕ ವೃತ್ತಿಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದ್ದಾರೆ. ಲಂಡನ್‌ನ ದ ಓವಲ್‌ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ ಟೀಂ ಇಂಡಿಯಾ, ಇಂಗ್ಲೆಂಡ್ ಎದುರು 10 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯ ಮುಕ್ತಾಯದ ಬೆನ್ನಲ್ಲೇ ಐಸಿಸಿ ಏಕದಿನ ರ‍್ಯಾಂಕಿಂಗ್‌ ಪ್ರಕಟಗೊಂಡಿದ್ದು, ಬೌಲಿಂಗ್ ವಿಭಾಗದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ನಂ.1 ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.

ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಬರೋಬ್ಬರಿ 730 ದಿನಗಳ ಕಾಲ ಐಸಿಸಿ ಏಕದಿನ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದ್ದರು. ಆದರೆ 2020ರ ಫೆಬ್ರವರಿಯಲ್ಲಿ ಜಸ್ಪ್ರೀತ್ ಬುಮ್ರಾ ನಂ.1 ಸ್ಥಾನವನ್ನು ಕಳೆದುಕೊಂಡಿದ್ದರು. ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್‌, ಬುಮ್ರಾರನ್ನು ಹಿಂದಿಕ್ಕಿ ಏಕದಿನ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದರು. ಮಾರಕ ವೇಗಿ ಬುಮ್ರಾ, ಈ ಮೊದಲು ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿಯೂ ನಂ.1 ಸ್ಥಾನವನ್ನು ಅಲಂಕರಿಸಿದ್ದರು. ಸದ್ಯ ಬುಮ್ರಾ ಟೆಸ್ಟ್ ಕ್ರಿಕೆಟ್‌ನ ಬೌಲಿಂಗ್ ವಿಭಾಗದಲ್ಲಿ 3ನೇ ಸ್ಥಾನದಲ್ಲಿದ್ದಾರೆ.

ಕಪಿಲ್ ದೇವ್ ಬಳಿಕ ಏಕದಿನ ಕ್ರಿಕೆಟ್‌ನ ವೇಗದ ಬೌಲಿಂಗ್‌ ವಿಭಾಗದಲ್ಲಿ ನಂ.1 ಸ್ಥಾನಕ್ಕೇರಿದ ಹಿರಿಮೆ ಜಸ್ಪ್ರೀತ್ ಬುಮ್ರಾ ಹೆಸರಿನಲ್ಲಿದೆ. ಇನ್ನು ಸ್ಪಿನ್ನರ್‌ಗಳಾದ ಮಣೀಂದರ್ ಸಿಂಗ್, ಅನಿಲ್ ಸಿಂಗ್ ಹಾಗೂ  ರವೀಂದ್ರ ಜಡೇಜಾ ಕೂಡಾ ಐಸಿಸಿ ಏಕದಿನ ರ‍್ಯಾಂಕಿಂಗ್‌ ನಲ್ಲಿ ನಂ.1 ಸ್ಥಾನಕ್ಕೇರಿದ್ದರು. ಇನ್ನು ಜಸ್ಪ್ರೀತ್ ಬುಮ್ರಾ ಜತೆ ಹೊಸ ಚೆಂಡಿನೊಂದಿಗೆ ದಾಳಿಗಿಳಿಯುವ ಅನುಭವಿ ವೇಗಿ ಮೊಹಮ್ಮದ್ ಶಮಿ, ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ 31 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಇದೀಗ ಶಮಿ ಕೂಡಾ ರ‍್ಯಾಂಕಿಂಗ್‌ನಲ್ಲಿ ಜಿಗಿತ ಕಂಡಿದ್ದು, ಸ್ವಿಂಗ್ ಸ್ಪೆಷಲಿಸ್ಟ್‌ ಭುವನೇಶ್ವರ್ ಕುಮಾರ್ ಜತೆ ಜಂಟಿ 23ನೇ ಸ್ಥಾನಕ್ಕೇರಿದ್ದಾರೆ.

No bowler above him 🔝

Jasprit Bumrah stands as the No.1 ODI bowler in the latest rankings!

— ICC (@ICC)

9 ವರ್ಷಗಳಾಯ್ತು, ಈಗಲೂ ರೋಹಿತ್ ಶರ್ಮಾ ಜತೆಗಿನ ಬಾಂಧವ್ಯ ಗಟ್ಟಿಯಾಗಿದೆ ಎಂದ ಧವನ್..!

ಇನ್ನು ಬೌಲಿಂಗ್‌ನಲ್ಲಿ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್‌, ಪಾಕಿಸ್ತಾನದ ವೇಗಿ ಶಾಹಿನ್ ಅಫ್ರಿದಿ, ಜೋಶ್ ಹೇಜಲ್‌ವುಡ್‌ ಹಾಗೂ ಮುಜೀಬ್ ಉರ್ ರೆಹಮಾನ್ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಬಾಂಗ್ಲಾದೇಶದ ಮೆಹದಿ ಹಸನ್‌ ಒಂದು ಸ್ಥಾನ ಮೇಲೇರಿ 6ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್‌ 4 ಸ್ಥಾನ ಜಾರಿ 7ನೇ ಸ್ಥಾನಕ್ಕೆ ಜಾರಿದ್ದಾರೆ. ಇನ್ನು ಮ್ಯಾಟ್ ಹೆನ್ರಿ, ಮೊಹಮ್ಮದ್ ನಬಿ ಹಾಗೂ ರಶೀದ್ ಖಾನ್ ಟಾಪ್ 10 ಪಟ್ಟಿಯಲ್ಲಿ ಭದ್ರವಾಗಿದ್ದಾರೆ.

ಇನ್ನು ಬ್ಯಾಟರ್‌ಗಳ ವಿಭಾಗದಲ್ಲಿ ಟಾಪ್ 10 ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಪಾಕಿಸ್ತಾನದ ಬಾಬರ್ ಅಜಂ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದರೇ ಇಮಾಮ್ ಉಲ್ ಹಕ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಕಾಕ್‌ ಕ್ರಮವಾಗಿ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ. ಇನ್ನು ರಾಸ್ಸಿ ವ್ಯಾನ್ ಡರ್‌ ಡುಸೇನ್, ರಾಸ್ ಟೇಲರ್, ಜಾನಿ ಬೇರ್‌ಸ್ಟೋವ್, ಡೇವಿಡ್ ವಾರ್ನರ್ ಹಾಗೂ ಆರೋನ್ ಫಿಂಚ್ ಕ್ರಮವಾಗಿ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ.

click me!