
ಆಗ್ರಾ(ಜೂ.02): ಭಾರತ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ದೀಪಕ್ ಚಹಾರ್ (Deepak Chahar Wedding) ತಮ್ಮ ಗೆಳತಿ ಜಯಾ ಭಾರದ್ವಾಜ್ ಅವರೊಂದಿಗೆ ಬುಧವಾರ(ಜೂ.01) ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಬಲಗೈ ವೇಗಿ ದೀಪಕ್ ಚಹಾರ್ 2021ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಪಾಲಿನ ಲೀಗ್ ಹಂತದ ಕೊನೆಯ ಪಂದ್ಯವಾದ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಮೈದಾನದಲ್ಲಿಯೇ ಜಯಾ ಭಾರದ್ವಾಜ್ ಅವರಿಗೆ ಪ್ರೇಮ ನಿವೇದನೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ದೀಪಕ್ ಚಹಾರ್, ಐಪಿಎಲ್ ಪ್ಲೇ ಆಫ್ ವೇಳೆ ತಮ್ಮ ಗೆಳತಿಗೆ ಪ್ರಪೋಸ್ ಮಾಡಬೇಕೆಂದಿದ್ದರು. ಆದರೆ ನಾಯಕ ಧೋನಿಯ (MS Dhoni) ಸಲಹೆಯ ಮೇಲೆ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಜಯಾ ಅವರಿಗೆ ಉಂಗುರ ತೊಡಿಸಿ ಗಮನ ಸೆಳೆದಿದ್ದರು.
ದೀಪಕ್ ಚಹಾರ್ ಸಹೋದರ ರಾಹುಲ್ ಚಹಾರ್ ಮದುವೆಯ ಸುಂದರ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದೀಗ ಸ್ವತಃ ದೀಪಕ್ ಚಹಾರ್ ತಮ್ಮ ಮದುವೆಯ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಾನು ಮೊದಲ ಬಾರಿಗೆ ನಿನ್ನನ್ನು ಭೇಟಿಯಾದಾಗ, ನೀನೇ ನನಗೆ ಸರಿಯಾದ ಜೋಡಿ ಎಂದು ತೀರ್ಮಾನಿಸಿದೆ. ನಾವು ಒಂದಾಗಿ ಸಾಕಷ್ಟು ಒಳ್ಳೆಯ ಕ್ಷಣಗಳನ್ನು ಕಳೆದಿದ್ದೇವೆ. ಇದೇ ರೀತಿ ಮುಂದೆಯೂ ನಿನ್ನನ್ನು ಸಂತೋಷವಾಗಿಡುತ್ತೇನೆ ಎಂದು ಪ್ರಾಮೀಸ್ ಮಾಡುತ್ತೇನೆ. ಇದು ನನ್ನ ಜೀವನದ ಅತ್ಯಂತ ಸುಂದರ ಕ್ಷಣ. ನಿಮ್ಮೆಲ್ಲರ ಶುಭ ಹಾರೈಕೆಗಳಿರಲಿ ಎಂದು ದೀಪಕ್ ಚಹಾರ್ ಬರೆದುಕೊಂಡಿದ್ದಾರೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದ ದೀಪಕ್ ಚಹಾರ್:
ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ದೀಪಕ್ ಚಹಾರ್ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನಾಡಲು ಯಶಸ್ವಿಯಾಗಿರಲಿಲ್ಲ. ಐಪಿಎಲ್ ಆಟಗಾರರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ದಾಖಲೆಯ ಮೊತ್ತ ನೀಡಿ ದೀಪಕ್ ಚಹಾರ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದ ದೀಪಕ್ ಚಹಾರ್, 2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನಾಡಲು ಸಾಧ್ಯವಾಗಿರಲಿಲ್ಲ.
ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ದೀಪಕ್ ಚಹಾರ್, ಜಯಾ ಭಾರದ್ವಾಜ್ !
ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ (IPL Mega Auction) ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಬರೋಬ್ಬರಿ 14 ಕೋಟಿ ರುಪಾಯಿ ನೀಡಿ ದೀಪಕ್ ಚಹಾರ್ ಅವರನ್ನು ಖರೀದಿಸಿತ್ತು. ಈ ಮೂಲಕ ಐಪಿಎಲ್ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಹರಾಜಾದ ಭಾರತೀಯ ಬೌಲರ್ ಎನ್ನುವ ದಾಖಲೆಗೆ ದೀಪಕ್ ಚಹಾರ್ ಪಾತ್ರರಾಗಿದ್ದರು. ಆದರೆ ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿ ವೇಳೆ ಗಾಯಗೊಂಡು ಭಾರತ ತಂಡದಿಂದ ಹೊರಬಿದ್ದ ದೀಪಕ್ ಚಹಾರ್, ಸುಮಾರು ಒಂದು ತಿಂಗಳುಗಳ ಕಾಲ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.