ರಾಸ್ ಟೇಲರ್ ಶತಕ: ಟೀಂ ಇಂಡಿಯಾಗೆ ಸೋಲಿನ ಆಘಾತ..!

By Suvarna NewsFirst Published Feb 5, 2020, 3:47 PM IST
Highlights

ಅನುಭವಿ ರಾಸ್ ಟೇಲರ್ ಅಜೇಯ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡವು ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

ಹ್ಯಾಮಿಲ್ಟನ್(ಫೆ.05): ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್(108) ಆಕರ್ಷಕ ಅಜೇಯ ಶತಕ ಹಾಗೂ ಹೆನ್ರಿ ನಿಕೋಲಸ್(78), ನಾಯಕ ಟಾಮ್ ಲಾಥಮ್(69) ಸಮಯೋಚಿತ ಅರ್ಧಶತಕಗಳ ನೆರವಿನಿಂದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ 4 ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಿವೀಸ್ 1-0 ಮುನ್ನಡೆ ಸಾಧಿಸಿದೆ.

2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಬಳಿಕ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಇಂಗ್ಲೆಂಡ್‌ನಲ್ಲಿ ನಡೆದ ಟೂರ್ನಿಯ ಸೆಮಿಫೈನಲ್‌ನಲ್ಲೂ ಭಾರತದೆದುರು ಕಿವೀಸ್ ಜಯಭೇರಿ ಬಾರಿಸಿತ್ತು. ಟಿ20 ಸರಣಿಯಲ್ಲಿ ವೈಟ್‌ವಾಷ್ ಅನುಭವಿಸಿದ್ದ ನ್ಯೂಜಿಲೆಂಡ್, ಏಕದಿನ ಸರಣಿಯಲ್ಲಿ ಜಯದ ಹಳಿಗೆ ಮರಳಿದೆ.

Tough day at the office but we hope to come back strong next ODI 🇮🇳💪🏻 pic.twitter.com/CzOfPrVEBF

— BCCI (@BCCI)

ಟೀಂ ಇಂಡಿಯಾ ನೀಡಿದ್ದ 348 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಉತ್ತಮ ಆರಂಭವನ್ನೇ ಪಡೆಯಿತು. ಮಾರ್ಟಿನ್ ಗಪ್ಟಿಲ್-ಹೆನ್ರಿ ನಿಕೋಲಸ್ ಜೋಡಿ 85 ರನ್‌ಗಳ ಜತೆಯಾಟ ಆಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಈ ಜೋಡಿಯನ್ನು ಬೇರ್ಪಡಿಸಲು ಶಾರ್ದೂಲ್ ಠಾಕೂರ್ ಯಶಸ್ವಿಯಾದರು. 41 ಎಸೆತಗಳಲ್ಲಿ 2 ಬೌಂಡರಿ ಸಹಿತ 32 ರನ್ ಗಳಿಸಿದ್ದ ಗಪ್ಟಿಲ್ ಕೇದಾರ್ ಜಾಧವ್‌ಗೆ ಸುಲಭ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದಾಗಿ ಕೆಲವೇ ಹೊತ್ತಿನಲ್ಲೇ  ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಟಾಮ್ ಬ್ಲಂಡೆಲ್ 9 ರನ್ ಗಳಿಸಿ ರನೌಟ್‌ ಆಗುವ ಮೂಲಕ ನಿರಾಸೆ ಅನುಭವಿಸಿದರು.

ಆಸರೆಯಾದ ನಿಕೋಲಸ್-ಟೇಲರ್: ಎರಡು ದಿಢೀರ್ ವಿಕೆಟ್ ಪತನದ ಬಳಿಕ ನಿಕೋಲಸ್ ಕೂಡಿಕೊಂಡ ಟೇಲರ್ ತಂಡಕ್ಕೆ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು. ಈ ಜೋಡಿ ಮೂರನೇ ವಿಕೆಟ್‌ಗೆ 62 ರನ್‌ಗಳ ಜತೆಯಾಟ ನಿಭಾಯಿಸಿತು. 82 ಎಸೆತಗಳಲ್ಲಿ 11 ಬೌಂಡರಿ ಸಹಿತ 78 ರನ್ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಹೆನ್ರಿ ನಿಕೋಲಸ್, ಕೊಹ್ಲಿ ಮಾಡಿದ ಅದ್ಭುತ ರನೌಟ್‌ಗೆ ಪೆವಿಲಿಯನ್ ಸೇರಿದರು.

ಟೇಲರ್-ಲಾಥಮ್ ಜುಗಲ್‌ಬಂದಿ: ಹೆನ್ರಿ ನಿಕೋಲಸ್ ವಿಕೆಟ್ ಒಪ್ಪಿಸಿದಾಗ ನ್ಯೂಜಿಲೆಂಡ್ 171 ರನ್ ಬಾರಿಸಿತ್ತು. ಹೀಗಾಗಿ ಗೆಲ್ಲಲೂ ಸರಿಸುಮಾರು 177 ರನ್ ಅವಶ್ಯಕತೆಯಿತ್ತು. ಈ ವೇಳೆ ರಾಸ್ ಟೇಲರ್ ಅವರನ್ನು ಕೂಡಿಕೊಂಡ ನಾಯಕ ಟಾಮ್ ಲಾಥಮ್ 138 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ಸಮೀಪ ಕೊಂಡ್ಯೊಯ್ದರು. ಈ ಜೋಡಿ ಚುರುಕಾಗಿ ರನ್ ಗಳಿಸುವ ಮೂಲಕ ಪ್ರವಾಸಿ ಪಡೆಯ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಯಿತು.  ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ರಾಸ್ ಟೇಲರ್ 84 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 109 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಟಾಮ್ ಲಾಥಮ್ 48 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 69 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಬರ್ತ್ ಡೇ ಬಾಯ್ ಮಿಚೆಲ್ ಸ್ಯಾಂಟ್ನರ್ 12 ರನ್ ಬಾರಿಸುವ ಮೂಲಕ ಕಿವೀಸ್ ಗೆಲುವನ್ನು ಮತ್ತಷ್ಟು ಸುಲಭಗೊಳಿಸಿದರು.

ಅಯ್ಯರ್ ಶತಕ; ಕಿವೀಸ್‌ಗೆ ಕಠಿಣ ಗುರಿ ನೀಡಿದ ಟೀಂ ಇಂಡಿಯಾ

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಶ್ರೇಯಸ್ ಅಯ್ಯರ್ ಶತಕ ಹಾಗೂ ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ ಸಮಯೋಚಿತ ಅರ್ಧಶತಕಗಳ ನೆರವಿನಿಂದ 347 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಆದರೆ ಭಾರತೀಯ ಬೌಲರ್‌ಗಳ ಈ ಮೊತ್ತವನ್ನು ಕಾಪಾಡಿಕೊಳ್ಳಲು ಯಶಸ್ವಿಯಾಗಲಿಲ್ಲ. 

ಇನ್ನು ಫೆಬ್ರವರಿ 08ರಂದು ಆಕ್ಲೆಂಡ್‌ನ ಈಡನ್‌ಪಾರ್ಕ್ ಮೈದಾನದಲ್ಲಿ ಎರಡನೇ ಪಂದ್ಯ ನಡೆಯಲಿದೆ. ಸರಣಿಯನ್ನು ಟೀಂ ಇಂಡಿಯಾ ಜೀವಂತವಾಗಿರಿಸಿಕೊಳ್ಳಬೇಕಾದರೆ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ.  

ಸಂಕ್ಷಿಪ್ತ ಸ್ಕೋರ್:

ಭಾರತ: 347/4

ಶ್ರೇಯಸ್ ಅಯ್ಯರ್: 103

ನ್ಯೂಜಿಲೆಂಡ್: 348/6

ರಾಸ್ ಟೇಲರ್: 109*

 

ಫೆಬ್ರವರಿ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ ಮಾಡಿ

click me!