Rohit Sharma Tweet Viral ದಶಕದ ಹಿಂದಿನ ಹಿಟ್‌ ಮ್ಯಾನ್‌ ಶಪಥ ವೈರಲ್..!

By Suvarna NewsFirst Published Dec 10, 2021, 10:29 AM IST
Highlights

* ಭಾರತ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ನೇಮಕ

* ಇನ್ನು ಟೆಸ್ಟ್ ತಂಡದ ಉಪನಾಯಕನಾಗಿಯೂ ಹಿಟ್‌ ಮ್ಯಾನ್‌ಗೆ ಬಡ್ತಿ

* 2011ರ ಏಕದಿನ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯದಿರುವುದಕ್ಕೆ ನಿರಾಸೆ ಹೊರಹಾಕಿದ್ದ ರೋಹಿತ್

ಬೆಂಗಳೂರು(ಡಿ.10): ಭಾರತ ಕ್ರಿಕೆಟ್‌ ಸೀಮಿತ ಓವರ್‌ಗಳ ತಂಡದ ನಾಯಕನಾಗಿ ಹಿಟ್‌ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ (Rohit Sharma) ನೇಮಕವಾಗಿದ್ದಾರೆ. ಆದರೆ ಇದೀಗ 34 ವರ್ಷದ ರೋಹಿತ್ ಬರೋಬ್ಬರಿ ಒಂದು ದಶಕದ ಹಿಂದೆ ಮಾಡಿದ ಟ್ವೀಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Tweet Viral) ಆಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯು (BCCI) ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡುವ ವೇಳೆ ರೋಹಿತ್ ಶರ್ಮಾ ಅವರಿಗೆ ಸೀಮಿತ ಓವರ್‌ಗಳ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. 

ಹೌದು, ರೋಹಿತ್ ಶರ್ಮಾ ಟೀಂ ಇಂಡಿಯಾ ಸೀಮಿತ ಓವರ್‌ಗಳ ತಂಡದ ನಾಯಕರಾಗಿ ನೇಮಕವಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ದಶಕದ ಹಿಂದೆ ಅಂದರೆ 10 ವರ್ಷಗಳ ಹಿಂದೆ ಹಿಟ್‌ ಮ್ಯಾನ್ ಮಾಡಿದ್ದ ಒಂದು ಟ್ವೀಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ಟ್ವೀಟ್‌ನಲ್ಲಿ ತಾವು 2011ರ ಏಕದಿನ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾಗೆ (Team India) ಆಯ್ಕೆಯಾಗದಿರುವ ಬಗ್ಗೆ ತಮ್ಮ ನಿರಾಸೆಯನ್ನು ಹೊರಹಾಕಿದ್ದರು. 

ವಿಶ್ವಕಪ್ ತಂಡದ ಭಾಗವಾಗದಿರುವುದಕ್ಕೆ ನಿಜಕ್ಕೂ ನನಗೆ ನಿರಾಸೆಯಾಗಿದೆ. ಇಲ್ಲಿಂದು ನಾನು ಮುಂದೆ ಸಾಗಬೇಕಿದೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗಿದು ದೊಡ್ಡ ಹಿನ್ನೆಡೆಯಾಗಿದೆ. ನೀವೇನಂತಿರಾ? ಎಂದು ರೋಹಿತ್ ಶರ್ಮಾ 2011ರಲ್ಲಿ ಟ್ವೀಟ್‌ ಮಾಡಿದ್ದರು.

Really really disappointed of not being the part of the WC squad..I need to move on frm here..but honestly it was a big setback..any views!

— Rohit Sharma (@ImRo45)

2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಟೀಂ ಇಂಡಿಯಾ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ನೆರೆಯ ಶ್ರೀಲಂಕಾ ತಂಡವನ್ನು (Sri Lanka Cricket Team) ಮಣಿಸಿ 28 ವರ್ಷಗಳ ಬಳಿಕ ಎರಡನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯರಾಗುವ ಅವಕಾಶದಿಂದ ವಂಚಿತರಾಗಿದ್ದರು.

BCCI Sacked Virat Kohli Captaincy ಕೊಹ್ಲಿ ಕುರಿತು ದಿಟ್ಟ ನಿಲುವು ಪ್ರಕಟಿಸಿದ ರೋಹಿತ್ ಶರ್ಮಾ..!

ಇದಾದ ಬಳಿಕ ಭಾರತ ತಂಡವು 2015 ಹಾಗೂ 2019ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ಗೇರಲು ವಿಫಲವಾಗಿದೆ. ಎರಡು ಸಂದರ್ಭದಲ್ಲೂ ಭಾರತ ಕ್ರಿಕೆಟ್‌ ತಂಡವು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲೇ ಮುಗ್ಗರಿಸಿ ನಿರಾಸೆ ಅನುಭವಿಸಿದೆ. ಹೀಗಾಗಿ ರೋಹಿತ್ ಶರ್ಮಾಗೆ ಏಕದಿನ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕುವ ಅವಕಾಶ ಇನ್ನೂ ಲಭಿಸಿಲ್ಲ. ಇದೀಗ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯವನ್ನು ವಹಿಸಿದ್ದು, ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಏಕದಿನ ವಿಶ್ವಕಪ್ ಜಯಿಸುವ ಕನಸು ಕಾಣುತ್ತಿದೆ.

ದಕ್ಷಿಣ ಆಫ್ರಿಕಾ ಸರಣಿಗೆ ತಂಡವನ್ನು ಆಯ್ಕೆ ಮಾಡುವಾಗ ರೋಹಿತ್ ಶರ್ಮಾಗೆ ಸೀಮಿತ ಓವರ್‌ಗಳ ತಂಡದ ನಾಯಕತ್ವ ಕಟ್ಟಿದ್ದು ಮಾತ್ರವಲ್ಲದೇ, ಟೆಸ್ಟ್ ತಂಡದ ಉಪನಾಯಕರಾಗಿಯೂ ಆಯ್ಕೆ ಮಾಡಲಾಗಿದೆ. ಕಳಪೆ ಫಾರ್ಮ್ ಎದುರಿಸುತ್ತಿದ್ದ ಅಜಿಂಕ್ಯ ರಹಾನೆ (Ajinkya Rahane) ಅವರು ನಿರ್ವಹಿಸುತ್ತಿದ್ದ ಉಪನಾಯಕ ಪಟ್ಟ ಇದೀಗ ಮುಂಬೈ ಮೂಲದ ಮತ್ತೋರ್ವ ಕ್ರಿಕೆಟಿಗ ರೋಹಿತ್ ಶರ್ಮಾ ಪಾಲಾಗಿದೆ. 

ಈಗಾಗಲೇ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ದ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ರೋಹಿತ್ ಶರ್ಮಾ, ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಗೆ ಪೂರ್ಣಾವಧಿ ನಾಯಕರಾದ ಬಳಿಕ ದಕ್ಷಿಣ ಆಫ್ರಿಕಾ ನೆಲದಲ್ಲಿ ರೋಹಿತ್ ಶರ್ಮಾ ಭಾರತ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೊದಲಿಗೆ ಡಿಸೆಂಬರ್ 26ರಿಂದ ವಿರಾಟ್ ಕೊಹ್ಲಿ ನೇತೃತ್ವದ (Virat Kohli) ಟೀಂ ಇಂಡಿಯಾ ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದಾದ ಬಳಿಕ ಜನವರಿ 19ರಿಂದ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಹರಿಣಗಳೆದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. 

click me!