ನನ್ನ ಹೇಳಿಕೆಯಿಂದ ಅಶ್ವಿನ್‌ಗೆ ನೋವಾಗಿದ್ರೆ ಸಂತೋಷ: ಮಾಜಿ ಕೋಚ್ ರವಿಶಾಸ್ತ್ರಿ ತಿರುಗೇಟು

By Suvarna NewsFirst Published Dec 25, 2021, 1:44 PM IST
Highlights

* ರವಿಚಂದ್ರನ್ ಅಶ್ವಿನ್ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಕೋಚ್ ರವಿಶಾಸ್ತ್ರಿ

* ಕುಲ್ದೀಪ್ ಯಾದವ್ ವಿದೇಶಿ ಪ್ರವಾಸದಲ್ಲಿ ನಮ್ಮ ಮೊದಲ ಆಯ್ಕೆಯ ಸ್ಪಿನ್ನರ್ ಎಂದಿದ್ದ ಶಾಸ್ತ್ರಿ

* ಶಾಸ್ತ್ರಿ ಹೇಳಿಕ ಕುರಿತಂತೆ ಕೆಲ ದಿನಗಳ ಹಿಂದಷ್ಟೇ ಅಸಮಾಧಾನ ಹೊರಹಾಕಿದ್ದ ಅಶ್ವಿನ್

ನವದೆಹಲಿ(ಡಿ.25): ‘ವಿದೇಶದಲ್ಲಿ ಕುಲ್ದೀಪ್‌ ಯಾದವ್‌ (Kuldeep Yadav) ನಂ.1 ಬೌಲರ್‌’ ಎಂಬ ಟೀಂ ಇಂಡಿಯಾ (Team India) ಮಾಜಿ ಕೋಚ್‌ ರವಿಶಾಸ್ತ್ರಿ (Ravi Shastri) ಹೇಳಿಕೆಗೆ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ತಾರಾ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌ಗೆ (Ravichandran Ashwin) ಶಾಸ್ತ್ರಿ ತಿರುಗೇಟು ನೀಡಿದ್ದಾರೆ. ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಅವರು, ‘ವಿದೇಶಗಳಲ್ಲಿ ಕುಲ್ದೀಪ್‌ ಯಾದವ್‌ ನಮ್ಮ ನಂ.1 ಬೌಲರ್‌ ಎಂಬ ಶಾಸ್ತ್ರಿ ಹೇಳಿಕೆ ನನ್ನನ್ನು ಬಸ್‌ ನಿಂದ ಕೆಳಕ್ಕೆ ತಳ್ಳಿದಂತೆ ಮಾಡಿತ್ತು. ನಾನು ತೀವ್ರ ಆಘಾತಕ್ಕೊಳಗಾಗಿದ್ದೆ ಎಂದಿದ್ದರು. ಅಶ್ವಿನ್ ಅವರ ಈ ಹೇಳಿಕೆಗೆ ಮಾಜಿ ಕೋಚ್ ರವಿಶಾಸ್ತ್ರಿ ಇದೀಗ ತಿರುಗೇಟು ನೀಡಿದ್ದಾರೆ.

ಶುಕ್ರವಾರ ರಾಷ್ಟ್ರೀಯ ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ‘ಯಾರನ್ನೂ ಮೆಚ್ಚಿಸುವುದು ನನ್ನ ಕೆಲಸವಲ್ಲ. ಅಶ್ವಿನ್‌ ಸಿಡ್ನಿ ಟೆಸ್ಟ್‌ನಲ್ಲಿ (Sydney Test) ಆಡಿರಲಿಲ್ಲ ಮತ್ತು ಕುಲ್ದೀಪ್‌ ಉತ್ತಮ ಪ್ರದರ್ಶನ ತೋರಿದ್ದರು. ಆದ್ದರಿಂದ ನಾನು ಆ ಹೇಳಿಕೆ ನೀಡಿದ್ದೆ. ಅದರಿಂದ ಅಶ್ವಿನ್‌ಗೆ ನೋವಾಗಿದ್ದರೆ ನನಗೆ ತುಂಬಾ ಸಂತೋಷ. ನಿಮ್ಮ ಕೋಚ್‌ ನಿಮಗೆ ಸವಾಲು ಹಾಕಿದರೆ ಏನು ಮಾಡುತ್ತೀರಾ?, ಮನೆಗೆ ಹೋಗಿ ಅಳುತ್ತಾ ನಾನು ಮತ್ತೆ ಆಡುವುದಿಲ್ಲ ಎನ್ನುತ್ತೀರಾ?. ಆಟಗಾರನಾದವನು ಪ್ರತಿಯೊಂದನ್ನು ಸವಾಲಾಗಿ ಸ್ವೀಕರಿಸಬೇಕು. ನನ್ನ ಹೇಳಿಕೆಯಿಂದ ಅಶ್ವಿನ್‌ಗೆ ಹೊಸದಾಗಿ ಏನನ್ನೋ ಪ್ರಯತ್ನಿಸಲು ಕಾರಣ ಸಿಕ್ಕಿತಲ್ಲ’ ಎಂದಿದ್ದಾರೆ.

ಕೋಚ್ ಆದವರ ಕೆಲಸ, ಪ್ರತಿಯೊಬ್ಬರ ಟೋಸ್ಟ್‌ಗೆ ಬೆಣ್ಣೆ ಹಚ್ಚುವುದಲ್ಲ. ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಪಾಲ್ಗೊಂಡಿರಲಿಲ್ಲ, ಅದೇ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಉತ್ತಮ ಪ್ರದರ್ಶನ ತೋರಿದ್ದರು. ಹಾಗಾಗಿ ಕುಲ್ದೀಪ್ ಬಗ್ಗೆ ಮೆಚ್ಚುಗೆ ಮಾತನಾಡಿದ್ದೆ. ಅದರಲ್ಲೇನು ತಪ್ಪಿದೆ ಎಂದು ರವಿಶಾಸ್ತ್ರಿ ಪ್ರಶ್ನಿಸಿದ್ದಾರೆ.

ರವಿಚಂದ್ರನ್ ಅಶ್ವಿನ್ 2019ರಲ್ಲಿ ಬೌಲಿಂಗ್ ಮಾಡುತ್ತಿದ್ದ ರೀತಿಗೂ, 2021ರಲ್ಲಿ ಬೌಲಿಂಗ್ ಮಾಡುತ್ತಿರುವ ರೀತಿಗೂ ಸಾಕಷ್ಟು ವ್ಯತ್ಯಾಸವಿದೆ. ನಾನಾಗ ಹೇಳಿದ್ದರ ಉದ್ದೇಶ, ಅವರು ಮತ್ತಷ್ಟು ಫಿಟ್‌ ಆಗಿರಲಿ ಎಂದು. ಇದಾದ ಬಳಿಕ ಅಶ್ವಿನ್ ಸಾಕಷ್ಟು ಶ್ರಮವಹಿಸಿ ಫಿಟ್ನೆಸ್ ಸಾಧಿಸಿದ್ದಾರೆ. ಹಾಗಾಗಿ ಇಂದು ಅವರು ಮಿಂಚುತ್ತಿದ್ದಾರೆ. ಅಶ್ವಿನ್ ಅವರೊಬ್ಬ ವಿಶ್ವದರ್ಜೆಯ ಬೌಲರ್ ಎಂದಿದ್ದಾರೆ.

Ashwin on Ravi Shastri: ಮಾಜಿ ಕೋಚ್ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ಆಫ್‌ ಸ್ಪಿನ್ನರ್..!

2018ರಲ್ಲಿ ನಡೆದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಕುಲ್ದೀಪ್ ಯಾದವ್ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಇದಾದ ಬಳಿಕ ಟೀಂ ಇಂಡಿಯಾ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿತ್ತು. ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಂ ಇಂಡಿಯಾ, ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸಿತ್ತು.

ಸದ್ಯ ರವಿಚಂದ್ರನ್ ಅಶ್ವಿನ್ ಭಾರತ ಪರ 81 ಟೆಸ್ಟ್ ಪಂದ್ಯಗಳನ್ನಾಡಿ 427 ವಿಕೆಟ್ ಕಬಳಿಸಿದ್ದು, ಟೆಸ್ಟ್‌ ಕ್ರಿಕೆಟ್‌ನಲ್ಲಿ ಅನಿಲ್‌ ಕುಂಬ್ಳೆ(Anil Kumble) (619) ಹಾಗೂ ಕಪಿಲ್‌ ದೇವ್ (434) ಬಳಿಕ ಅತಿಹೆಚ್ಚು ಟೆಸ್ಟ್ ವಿಕೆಟ್ ಕಬಳಿಸಿದ ಭಾರತದ ಮೂರನೇ ಬೌಲರ್ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಅಶ್ವಿನ್ ಇನ್ನು ಕೇವಲ 8 ವಿಕೆಟ್ ಪಡೆದರೆ, ಕಪಿಲ್ ದೇವ್ (Kapil Dev) ದಾಖಲೆ ಮುರಿದು ಎರಡನೇ ಸ್ಥಾನಕ್ಕೇರಲಿದ್ದಾರೆ. ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದು, ಈ ಸರಣಿಯಲ್ಲಿ ಅಶ್ವಿನ್‌, ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ ಕಬಳಿಸಿದ ಎರಡನೇ ಬೌಲರ್‌ ಆಗಿ ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ. 

click me!