Ind vs SA Test Series: ಮತ್ತೆ ಟೆಸ್ಟ್‌ ಕ್ರಿಕೆಟ್‌ ಆಡುವ ನಂಬಿಕೆ ಇರಲಿಲ್ಲ: ಕೆ.ಎಲ್ ರಾಹುಲ್‌

By Suvarna NewsFirst Published Dec 25, 2021, 12:18 PM IST
Highlights

* ಭಾರತ ಹಾಗೂ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಆರಂಭಕ್ಕೆ ಕ್ಷಣಗಣನೆ

* ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಗೆ ಕನ್ನಡಿಗ ಕೆ.ಎಲ್‌. ರಾಹುಲ್‌ಗೆ ಉಪನಾಯಕ ಪಟ್ಟ

* ಟೆಸ್ಟ್ ತಂಡದ ಉಪನಾಯಕನಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ರಾಹುಲ್

ನವದೆಹಲಿ(ಡಿ.25): ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡದ ಉಪನಾಯಕನಾಗಿ ನೇಮಕಗೊಂಡಿರುವ ಕನ್ನಡಿಗ ಕೆ.ಎಲ್‌.ರಾಹುಲ್‌ (KL Rahul) ತಾವು 6-7 ತಿಂಗಳುಗಳ ಹಿಂದೆ ಮತ್ತೆ ಟೆಸ್ಟ್‌ ಕ್ರಿಕೆಟ್‌ ಆಡುವ ನಂಬಿಕೆಯನ್ನೇ ಕಳೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಇಂಗ್ಲೆಂಡ್‌ ಸರಣಿಗೂ ಮುನ್ನ 2 ವರ್ಷಗಳ ಕಾಲ ಗಾಯದಿಂದ ತಂಡದಿಂದ ಹೊರಗುಳಿದಿದ್ದ ರಾಹುಲ್‌, ಈ ಬಗ್ಗೆ ಸಹ ಆಟಗಾರ ಮಯಾಂಕ್‌ ಅಗರ್‌ವಾಲ್‌ (Mayank Agarwal) ಜೊತೆಗಿನ ಸಂಭಾಷಣೆಯಲ್ಲಿ ಮಾತನಾಡಿದ್ದಾರೆ.  ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಅಜಿಂಕ್ಯ ರಹಾನೆ (Ajinkya Rahane) ಅವರನ್ನು ಕೆಳಗಿಳಿಸಿ, ರೋಹಿತ್ ಶರ್ಮಾ (Rohit Sharma) ಅವರಿಗೆ ಟೆಸ್ಟ್ ಉಪನಾಯಕ ಪಟ್ಟ ಕಟ್ಟಲಾಗಿತ್ತು. ಆದರೆ ಗಾಯದ ಸಮಸ್ಯೆಯಿಂದಾಗಿ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಭಾರತ ಕ್ರಿಕೆಟ್ ತಂಡದಿಂದ ಹೊರಬಿದ್ದಿದ್ದರು. ಹೀಗಾಗಿ ಇದೀಗ ಕನ್ನಡಿಗ ಕೆ.ಎಲ್. ರಾಹುಲ್ ಟೆಸ್ಟ್ ಉಪನಾಯಕ ಪಟ್ಟ ನೀಡಲಾಗಿದೆ. 

‘6-7 ತಿಂಗಳು ಅಥವಾ ವರ್ಷದ ಹಿಂದೆ ಮತ್ತೆ ಟೆಸ್ಟ್‌ ಕ್ರಿಕೆಟ್‌ ಆಡುತ್ತೇನೆ ಎನ್ನುವ ನಂಬಿಕೆ ನನಗಿರಲಿಲ್ಲ. ಆದರೆ ಎಲ್ಲವೂ ವೇಗವಾಗಿ ಬದಲಾಯಿತು ಮತ್ತು ಈಗ ಟೆಸ್ಟ್‌ ತಂಡಕ್ಕೆ ಉಪನಾಯಕನಾಗಿ ಆಯ್ಕೆಯಾಗಿದ್ದು ಖುಷಿಯಾಗಿದೆ. ನನ್ನಿಂದು ಉತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿರುವುದಾಗಿ' ಕೆ.ಎಲ್. ರಾಹುಲ್ ಹೇಳಿದ್ದಾರೆ. 

ಕೆ.ಎಲ್. ರಾಹುಲ್. 29 ವರ್ಷದ ಬಲಗೈ ಬ್ಯಾಟರ್‌ ರಾಹುಲ್‌, 2014ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ (Test Cricket) ಪಾದಾರ್ಪಣೆ ಮಾಡಿದ್ದರು. ಇದುವರೆಗೂ ರಾಹುಲ್ ಭಾರತ ಪರ 40 ಟೆಸ್ಟ್‌ ಪಂದ್ಯಗಳನ್ನಾಡಿ 35.16ರ ಬ್ಯಾಟಿಂಗ್ ಸರಾಸರಿಯಲ್ಲಿ 6 ಶತಕ ಹಾಗೂ 12 ಅರ್ಧಶತಕ ಸಹಿತ 2,321 ರನ್ ಬಾರಿಸಿದ್ದಾರೆ. ಆದರೆ ಕಳೆದೊಂದು ವರ್ಷದ ಹಿಂದೆ ನೀರಸ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ರಾಹುಲ್ ಟೆಸ್ಟ್ ತಂಡದಿಂದಲೇ ಹೊರಬಿದ್ದಿದ್ದರು. ಇತ್ತೀಚೆಗಷ್ಟೇ ಇಂಗ್ಲೆಂಡ್ ಪ್ರವಾಸದಲ್ಲಿ ರಾಹುಲ್ 8 ಇನಿಂಗ್ಸ್‌ಗಳಿಂದ 315 ರನ್ ಬಾರಿಸಿ ಗಮನ ಸೆಳೆದಿದ್ದರು.

ICC Test Rankings: ಟೀಂ ಇಂಡಿಯಾ ಸರಣಿ ಗೆದ್ದರಷ್ಟೇ ನಂ.1 ಸ್ಥಾನ ಭದ್ರ..!

ಭಾರತ ಕ್ರಿಕೆಟ್ ತಂಡವು (Indian Cricket Team) ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ ಅಭ್ಯಾಸವನ್ನು ಆರಂಭಿಸಿದೆ. ಅಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ (Team India) ಮೂರು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 26ರಿಂದ ಆರಂಭವಾಗಲಿದೆ. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಕರ್ನಾಟಕದ ಜೋಡಿಯಾದ ಮಯಾಂಕ್ ಅಗರ್‌ವಾಲ್ ಹಾಗೂ ಕೆ.ಎಲ್. ರಾಹುಲ್ ನಡೆಸಿದ ಸಂಭಾಷಣೆಯಲ್ಲಿ ರಾಹುಲ್‌ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

From playing domestic cricket to donning the whites for together, the batting duo has come a long way. 👏 ☺️ tracks the journey of & as they gear up for the SA challenge. 👍👍

Full interview🎥 🔽https://t.co/0BcVvjOG8X pic.twitter.com/gcfDxbCFDe

— BCCI (@BCCI)

ಕರ್ನಾಟಕ ಕ್ರಿಕೆಟ್ ತಂಡದ ತಾರಾ ಜೋಡಿಯಾದ ಮಯಾಂಕ್ ಅಗರ್‌ವಾಲ್ ಹಾಗೂ ಕೆ.ಎಲ್‌. ರಾಹುಲ್ ಭಾರತ ಪರ 2019ರಲ್ಲಿ ಆಸ್ಟ್ರೇಲಿಯಾ ವಿರುದ್ದ ಸಿಡ್ನಿ ಟೆಸ್ಟ್ (Sydney Test) ಪಂದ್ಯದಲ್ಲಿ ಮೊದಲ ಬಾರಿಗೆ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಇದಾಗಿ ಬರೋಬ್ಬರಿ ಮೂರು ವರ್ಷಗಳ ಬಳಿಕ ಮತ್ತೊಮ್ಮೆ ದಕ್ಷಿಣ ಆಫ್ರಿಕಾದ ಸೆಂಚುರಿಯನ್‌ನಲ್ಲಿ ಮತ್ತೊಮ್ಮೆ ಟೀಂ ಇಂಡಿಯಾ ಆರಂಭಿಕರಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಕೆ.ಎಲ್. ರಾಹುಲ್ ಕಳಫೆ ಫಾರ್ಮ್‌ನಿಂದಾಗಿ 2018ರಲ್ಲಿ ಭಾರತ ಟೆಸ್ಟ್ ತಂಡದಿಂದ ಹೊರಬಿದ್ದಿದ್ದರು, ಹೀಗಾಗಿ ಮಯಾಂಕ್‌ ಅಗರ್‌ವಾಲ್‌ಗೆ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಲು ಅವಕಾಶ ಬಂದೊಗಿತ್ತು. ಮಯಾಂಕ್‌ ಅಗರ್‌ವಾಲ್ 2019ರಲ್ಲಿ ಮೆಲ್ಬೊರ್ನ್‌ ಕ್ರಿಕೆಟ್‌ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

click me!