
ನವದೆಹಲಿ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ಬೃಹತ್ ಮೊತ್ತ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಶುಭ್‌ಮನ್ ಗಿಲ್ ಅವರ ಭರ್ಜರಿ ಶತಕ ಹಾಗೂ ಸಾಯಿ ಸುದರ್ಶನ್ ಆಕರ್ಷಕ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 518 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡು 318 ರನ್ ಬಾರಿಸಿತ್ತು. ಮೊದಲ ದಿನದಲ್ಲೇ 173 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಎರಡನೇ ದಿನದಾಟದಲ್ಲಿ ತನ್ನ ವೈಯುಕ್ತಿಕ ಖಾತೆಗೆ ಎರಡು ರನ್ ಸೇರಿಸಿ, ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ನಿತೀಶ್ ಕುಮಾರ್ ರೆಡ್ಡಿ ಹಾಗೂ ಶುಭ್‌ಮನ್ ಗಿಲ್ ಜೋಡಿ ನಾಲ್ಕನೇ ವಿಕೆಟ್‌ಗೆ 91 ರನ್‌ಗಳ ಜತೆಯಾಟವಾಡಿದರು. ನಿತೀಶ್ ಕುಮಾರ್ ರೆಡ್ಡಿ 43 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.
ಮೊದಲ ದಿನದಾಟದಂತ್ಯಕ್ಕೆ ಅಜೇಯ 20 ರನ್ ಬಾರಿಸಿದ್ದ ಶುಭ್‌ಮನ್ ಗಿಲ್, ಎರಡನೇ ದಿನ ಚುರುಕಿನ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದರು. ಒಟ್ಟು 176 ಎಸೆತಗಳನ್ನು ಎದುರಿಸಿದ ಶುಭ್‌ಮನ್ ಗಿಲ್ 14 ಬೌಂಡರಿ ಹಾಗೂ ಒಂದು ಮುಗಿಲೆತ್ತರದ ಸಿಕ್ಸರ್ ಸಹಿತ ಆಕರ್ಷಕ ಶತಕ ಪೂರೈಸಿದರು. ಇದರೊಂದಿಗೆ ಶುಭ್‌ಮನ್ ಗಿಲ್ ನಾಯಕನಾಗಿ ಕೇವಲ 12 ಇನ್ನಿಂಗ್ಸ್‌ಗಳನ್ನಾಡಿ 5ನೇ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಅತಿ ಕಡಿಮೆ ಇನ್ನಿಂಗ್ಸ್‌ಗಳನ್ನಾಡಿ ಅತಿವೇಗವಾಗಿ 5+ ಶತಕ ಸಿಡಿಸಿ ಮೂರನೇ ಬ್ಯಾಟರ್ ಎನ್ನುವ ಹಿರಿಮೆಗೂ ಗಿಲ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಇಂಗ್ಲೆಂಡ್‌ನ ಅಲಿಸ್ಟರ್ ಕುಕ್ 9 ಇನ್ನಿಂಗ್ಸ್‌ಗಳನ್ನಾಡಿ ಹಾಗೂ ಭಾರತದ ಸುನಿಲ್ ಗವಾಸ್ಕರ್ ನಾಯಕನಾಗಿ ಮೊದಲ 10 ಇನ್ನಿಂಗ್ಸ್‌ಗಳಲ್ಲಿ 5 ಶತಕ ಸಿಡಿಸಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಶುಭ್‌ಮನ್ ಗಿಲ್ 196 ಎಸೆತಗಳನ್ನು ಎದುರಿಸಿ 16 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 129 ರನ್ ಸಿಡಿಸಿದರು.
ಇನ್ನು ಐದನೇ ವಿಕೆಟ್‌ಗೆ ಶುಭ್‌ಮನ್ ಗಿಲ್ ಹಾಗೂ ಧ್ರುವ್ ಜುರೆಲ್ 155 ಎಸೆತಗಳನ್ನು ಎದುರಿಸಿ 102 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ಐನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಜುರೆಲ್ 44 ರನ್ ಗಳಿಸಿ ರೋಸ್ಟನ್ ಚೇಸ್‌ಗೆ ವಿಕೆಟ್ ಒಪ್ಪಿಸುತ್ತಿದ್ದಂತೆಯೇ ನಾಯಕ ಗಿಲ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.