ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿರುವ ರಿಷಭ್ ಪಂತ್
ಅಪಘಾತದ ಬಳಿಕ ಅಭೂತಪೂರ್ವವಾಗಿ ಚೇತರಿಸಿಕೊಳ್ಳುತ್ತಿರುವ ವಿಕೆಟ್ ಕೀಪರ್ ಬ್ಯಾಟರ್
ರಿಷಭ್ ಪಂತ್ ಪವರ್‌ಲಿಫ್ಟಿಂಗ್ ಮಾಡುತ್ತಿರುವ ವಿಡಿಯೋ ವೈರಲ್
ನವದೆಹಲಿ(ಜು.21): ಕಳೆದ ವರ್ಷದ ಕೊನೆಯಲ್ಲಿ ಗಂಭೀರ ಕಾರು ಅಫಘಾತಕ್ಕೊಳಗಾಗಿ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್, ಇದೀಗ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ. ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ನಿರೀಕ್ಷೆಗೂ ಮೀರಿ ಅತಿವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿರುವ ರಿಷಭ್ ಪಂತ್, ಇದೀಗ ಜಿಮ್‌ನಲ್ಲಿ ಪವರ್‌ಲಿಫ್ಟಿಂಗ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ಅಪಘಾತವಾಗಿ ಕೆಲವೇ ತಿಂಗಳುಗಳಲ್ಲಿ ಎಲ್ಲರೂ ಬೆರಗಾಗುವ ರೀತಿಯಲ್ಲಿ ಪವರ್‌ಲಿಫ್ಟಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಈ ಪವರ್‌ಲಿಫ್ಟಿಂಗ್ ಮಾಡುತ್ತಿರುವ ವಿಡಿಯೋ ಜತೆ ರಿಷಭ್ ಪಂತ್, ಏನು ಕೆಲಸ ಮಾಡುತ್ತೀಯೋ ಅದರ ಪ್ರತಿಫಲ ನಿನಗೆ ಸಿಗುತ್ತದೆಯೇ ಹೊರತು, ನೀನು ಬಯಸಿದ್ದಲ್ಲ" ಎಂದು ಬರೆದುಕೊಂಡಿದ್ದಾರೆ. ಇನ್ನು ರಿಷಭ್ ಪಂತ್ ಅವರ ಈ ವರ್ಕೌಟ್ ವಿಡಿಯೋಗೆ ಮಾಜಿ ಕ್ರಿಕೆಟಿಗ ಸುರೇಶ್ ರೈನಾ, ಹಾಗೂ ಹಾಲಿ ಕ್ರಿಕೆಟಿಗ ಕೆ ಎಲ್ ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಿಷಭ್ ಪಂತ್ ಕ್ರಿಕೆಟ್‌ನಿಂದ ದೂರವೇ ಉಳಿದು 7 ತಿಂಗಳುಗಳೇ ಕಳೆದಿವೆ. ಡಿಸೆಂಬರ್ 30ರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಪಂತ್ ಗಂಭೀರವಾಗಿಯೇ ಗಾಯಗೊಂಡಿದ್ದರು. ಕೆಲವು ಶಸ್ತ್ರಚಿಕಿತ್ಸೆಯ ಬಳಿಕ ಇದೀಗ ಪಂತ್ ಸ್ವತಂತ್ರವಾಗಿ ಓಡಾಡಲಾರಂಭಿಸಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ರಿಷಭ್ ಪಂತ್, 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್, ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಬಿದ್ದಿದ್ದರು. ಇನ್ನು ಭಾರತದಲ್ಲೇ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಿಂದಲೂ ಪಂತ್ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
499 ಅಂತಾರಾಷ್ಟ್ರೀಯ ಪಂದ್ಯಗಳ ನಂತರ ಕ್ರಿಕೆಟ್ ದೇವರು ಸಚಿನ್ಗಿಂತ ಕೊಹ್ಲಿಯೇ ಟಾಪ್..!
ಈ ಮೊದಲು ರಿಷಭ್ ಪಂತ್, ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಬಯೋಡಾಟದಲ್ಲಿ 05/01/2023ರನ್ನು ತಮ್ಮ ಎರಡನೇ ಜನ್ಮದಿನ ಎಂದು ಬದಲಾಯಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಕ್ರಿಕೆಟಿಗ ರಿಷಭ್ ಪಂತ್, ಅಕ್ಟೋಬರ್ 04, 1997ರಲ್ಲಿ ಜನಿಸಿದ್ದರು. ಆದರೆ ಕಳೆದ ವರ್ಷದ ಕೊನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಂತ್, ಜೀವನ್ಮರಣದ ಹೋರಾಟದ ಬಳಿಕ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆತಿದ್ದರಿಂದಾಗಿ ಬದುಕುಳಿಯುವಲ್ಲಿ ಯಶಸ್ವಿಯಾಗಿದ್ದರು.
ರಿಷಭ್ ಪಂತ್, 2017ರಲ್ಲಿ ಇಂಗ್ಲೆಂಡ್ ವಿರುದ್ದ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಭಾರತ ಟಿ20 ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಇದುವರೆಗೂ ರಿಷಭ್ ಪಂತ್, ಭಾರತ ಪರ 33 ಟೆಸ್ಟ್, 30 ಏಕದಿನ ಹಾಗೂ 66 ಟಿ20 ಪಂದ್ಯಗಳನ್ನಾಡಿದ್ದಾರೆ. 25 ವರ್ಷದ ರಿಷಭ್ ಪಂತ್, 2022ರ ಡಿಸೆಂಬರ್‌ನಲ್ಲಿ ಭಾರತ ತಂಡವು, ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದಾಗ ಕೊನೆಯ ಬಾರಿಗೆ ರೋಹಿತ್ ಶರ್ಮಾ ಪಡೆಯಲ್ಲಿ ಕಣಕ್ಕಿಳಿದಿದ್ದರು.