
ಮೆಲ್ಬರ್ನ್(ಡಿ.26): ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ದಿನದ ಗೌರವ ಪಡೆದಿದೆ. ಆಸ್ಟ್ರೇಲಿಯಾವನ್ನು ಕೇವಲ 195 ರನ್‌ಗಳಿಗೆ ಆಲೌಟ್ ಮಾಡಿರುವ ಭಾರತ ದಿನದಾಟದಂತ್ಯಕ್ಕೆ ಕೇವಲ 1 ವಿಕೆಟ್ ಕಳೆದುಕೊಂಡು 36 ರನ್ ಬಾರಿಸಿದ್ದು, ಇನ್ನೂ 159 ರನ್‌ಗಳ ಹಿನ್ನಡೆಯಲ್ಲಿದೆ.
ಹೌದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡಕ್ಕೆ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಘಾತ ನೀಡಿದರು. ಬುಮ್ರಾ 4 ವಿಕೆಟ್ ಕಬಳಿಸಿ ಮಿಂಚಿದರೆ, ಅಶ್ವಿನ್ 3 ಪ್ರಮುಖ ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು.
ಎರಡನೇ ಟೆಸ್ಟ್ ಪಂದ್ಯದಲ್ಲಿ ಯಾವುದೇ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಿಗೆ ಅರ್ಧಶತಕ ಬಾರಿಸಲು ಟೀಂ ಇಂಡಿಯಾ ಬೌಲರ್‌ಗಳು ಅವಕಾಶ ಮಾಡಿಕೊಡಲಿಲ್ಲ. ಮಾರ್ನಸ್ ಲಬುಶೇನ್ 48 ರನ್ ಬಾರಿಸಿದ್ದೇ ಆಸೀಸ್ ಪರ ಮೊದಲ ಇನಿಂಗ್ಸ್‌ನಲ್ಲಿ ದಾಖಲಾದ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿದೆ.
ಬಾಕ್ಸಿಂಗ್ ಡೇ ಟೆಸ್ಟ್: ಬುಮ್ರಾ ದಾಳಿಗೆ ಆಸ್ಟ್ರೇಲಿಯಾ 195ಕ್ಕೆ ಆಲೌಟ್
ಪಾದಾರ್ಪಣೆ ಪಂದ್ಯದಲ್ಲಿ ಮಿಂಚಿದ ಸಿರಾಜ್: ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಹೈದ್ರಾಬಾದ್ ವೇಗಿ ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾದ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಾದ ಮಾರ್ನಸ್ ಲಬುಶೇನ್ ಹಾಗೂ ಕ್ಯಾಮರೋನ್ ಗ್ರೀನ್ ವಿಕೆಟ್ ಕಬಳಿಸುವ ಮೂಲಕ ಈ ಪಂದ್ಯವನ್ನು ಮತ್ತಷ್ಟು ಸ್ಮರಣೀಯವಾಗಿಸಿಕೊಂಡರು. ಇನ್ನು ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಶುಭ್‌ಮನ್ ಗಿಲ್ ಸಹ ಕೇವಲ 38 ಎಸೆತಗಳಲ್ಲಿ 5 ಬೌಂಡರಿ ಸಹಿತ 28 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮಯಾಂಕ್ ಫೇಲ್: ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್‌ವಾಲ್ ಮತ್ತೊಮ್ಮೆ ಆಸೀಸ್ ನೆಲದಲ್ಲಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದಾರೆ. ಮಿಚೆಲ್ ಸ್ಟಾರ್ಕ್ ಎಸೆದ ಮೊದಲ ಓವರ್‌ನ ಕೊನೆಯ ಎಸೆತದಲ್ಲೇ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದಾರೆ. ಇದೀಗ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ(7) ಹಾಗೂ ಗಿಲ್(28) ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ: 195/10(ಮೊದಲ ಇನಿಂಗ್ಸ್)
ಮಾರ್ನಸ್ ಲಬುಶೇನ್: 48
ಜಸ್ಪ್ರೀತ್ ಬುಮ್ರಾ: 56/4
ಭಾರತ: 36/1
ಗಿಲ್: 28*
ಸ್ಟಾರ್ಕ್: 14/1
(ಮೊದಲ ದಿನದಾಟ ಮುಕ್ತಾಯದ ವೇಳೆಗೆ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.