ಸ್ಥಿರತೆ ತೋರದ ಆಟಗಾರರಿಗೆ ಕೋಚ್ ರಾಹುಲ್ ದ್ರಾವಿಡ್ ಖಡಕ್ ವಾರ್ನಿಂಗ್..!

By Suvarna News  |  First Published Jan 25, 2022, 3:20 PM IST

* ಟೀಂ ಇಂಡಿಯಾ ಬ್ಯಾಟರ್‌ಗಳು ಜವಾಬ್ದಾರಿಯುತ ಪ್ರದರ್ಶನ ನೀಡಬೇಕು

* ಟೀಂ ಇಂಡಿಯಾ ಆಟಗಾರರ ಕಿವಿ ಹಿಂಡಿದ ಕೋಚ್ ರಾಹುಲ್ ದ್ರಾವಿಡ್

* ದೇಶಕ್ಕಾಗಿ ಆಡುವಾಗ ನಿರೀಕ್ಷೆಗಳನ್ನು ತಲುಪಬೇಕಾಗುತ್ತದೆ ಎಂದ 'ದ ವಾಲ್'


ಕೇಪ್‌ಟೌನ್‌(ಜ.25): ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾದ (Team India) ಕಳಪೆ ಪ್ರದರ್ಶನಕ್ಕೆ ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಆಟದಲ್ಲಿ ಸ್ಥಿರತೆ ತೋರದ ಆಟಗಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಟೆಸ್ಟ್‌ ಸರಣಿಯನ್ನು 1-2ರಲ್ಲಿ ಸೋತಿದ್ದ ಭಾರತ, ಏಕದಿನ ಸರಣಿಯನ್ನು 0-3ರಲ್ಲಿ ಕಳೆದುಕೊಂಡಿತು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್‌, ಮಧ್ಯಮ ಕ್ರಮಾಂಕದ ಕೆಲ ಆಟಗಾರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದರು. ‘ಕೆಲ ಆಟಗಾರರಿಗೆ ತಂಡದಲ್ಲಿ ಭದ್ರತೆ ಸಿಗಲಿದೆ. ಆದರೆ ಅಂತಹ ಆಟಗಾರರಿಂದ ನಾವು ದೊಡ್ಡ ಆಟವನ್ನು ನಿರೀಕ್ಷಿಸುತ್ತೇವೆ. ಅವರಿಗೆ ನೀಡುವ ಪ್ರತಿ ಸವಾಲನ್ನು ಸಮರ್ಥವಾಗಿ ಎದುರಿಸಬೇಕಾಗುತ್ತದೆ. ದೇಶಕ್ಕಾಗಿ ಆಡುವಾಗ ನಿರೀಕ್ಷೆಗಳನ್ನು ತಲುಪಬೇಕಾಗುತ್ತದೆ. ಇದು ಅತ್ಯಗತ್ಯ’ ಎಂದು ದ್ರಾವಿಡ್‌ ಹೇಳಿದ್ದಾರೆ.

ಪ್ರಮುಖವಾಗಿ ಶ್ರೇಯಸ್‌ ಅಯ್ಯರ್‌ರ (Shreyas Iyer) ಆಟದ ಬಗ್ಗೆ ಮಾತನಾಡಿದ ದ್ರಾವಿಡ್‌, ‘ನೀವು 4, 5, ಇಲ್ಲವೇ 6ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಾಗ ತಂಡಕ್ಕೆ ಏನು ಅಗತ್ಯವಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಆಡಬೇಕು. ಶ್ರೇಯಸ್‌ ಎಲ್ಲಾ ಮೂರೂ ಪಂದ್ಯಗಳಲ್ಲಿ ಮುಂಚಿತವಾಗಿಯೇ ಕ್ರೀಸ್‌ಗಿಳಿದಿದ್ದರು. ಅವರ ಬಳಿ ಬಹಳಷ್ಟು ಸಮಯವಿತ್ತು. ಆದರೂ ನಿರೀಕ್ಷಿತ ಆಟ ಮೂಡಿಬರಲಿಲ್ಲ’ ಎಂದರು. ಏಕದಿನ ಸರಣಿಯಲ್ಲಿ ಶ್ರೇಯಸ್‌ ಕ್ರಮವಾಗಿ 17, 11 ಹಾಗೂ 26 ರನ್‌ ಗಳಿಸಿದರು.

Tap to resize

Latest Videos

Ind vs SA: ವೈಟ್‌ವಾಶ್ ಅನುಭವಿಸಿದ ಬೆನ್ನಲ್ಲೇ ಟೀಂ ಇಂಡಿಯಾಗೆ ಶಾಕ್ ಕೊಟ್ಟ ಐಸಿಸಿ..!

ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಎಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ನೀಡಿದ್ದ 288 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೇವಲ 283 ರನ್‌ಗಳಿಗೆ ಸರ್ವಪತನ ಕಂಡಿತ್ತು. ಕೆ.ಎಲ್. ರಾಹುಲ್ (KL Rahul) ಆರಂಭದಲ್ಲೇ ವಿಕೆಟ್ ಒಪ್ಪಿಸಿದ್ದರು. ಆ ಬಳಿಕ ವಿರಾಟ್ ಕೊಹ್ಲಿ (Virat Kohli) ಹಾಗೂ ಶಿಖರ್ ಧವನ್ (Shikhar Dhawan) ಸಮಯೋಚಿತ ಅರ್ಧಶತಕ ಚಚ್ಚಿದ್ದರು. ಇನ್ನು ರಿಷಭ್ ಪಂತ್ (Rishabh Pant) ಶೂನ್ಯ ಸುತ್ತಿ ನಿರಾಸೆ ಅನುಭವಿಸಿದರೆ, ಶ್ರೇಯಸ್ ಅಯ್ಯರ್ ಹಾಗೂ ಸೂರ್ಯಕುಮಾರ್ ಯಾದವ್ ಜವಾಬ್ದಾರಿಯುತ ಪ್ರದರ್ಶನ ತೋರಲಿಲ್ಲ. ಶ್ರೇಯಸ್ ಅಯ್ಯರ್ 34 ಎಸೆತಗಳಲ್ಲಿ 26 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 39 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಏಕದಿನ ಟೀಂನಲ್ಲಿ ಸಮತೋಲನ ಇಲ್ಲ: ರಾಹುಲ್‌ ದ್ರಾವಿಡ್‌

ಕೇಪ್‌ಟೌನ್‌: ಏಕದಿನ ತಂಡದಲ್ಲಿ ಸಮತೋಲನವಿಲ್ಲ. 6, 7ನೇ ಕ್ರಮಾಂಕದಲ್ಲಿ ಸಮರ್ಥವಾಗಿ ಆಡುವ ಆಟಗಾರರ ಕೊರತೆ ಎದ್ದು ಕಾಣುತ್ತಿದೆ ಎಂದು ಭಾರತ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ ಒಪ್ಪಿಕೊಂಡಿದ್ದಾರೆ. ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ ಅವರ ಅನುಪಸ್ಥಿತಿ ಬಗ್ಗೆ ಮಾತನಾಡಿರುವ ದ್ರಾವಿಡ್‌, ‘ತಂಡದ ಸಮತೋಲನಕ್ಕೆ ಸಹಕಾರಿಯಾಗುವ ಆಟಗಾರರು ಆಯ್ಕೆಗೆ ಲಭ್ಯರಿರಲಿಲ್ಲ. ಅವರು ವಾಪಸಾದ ಬಳಿಕ ನಮ್ಮ ತಂಡದ ಸಾಮರ್ಥ್ಯ ಹೆಚ್ಚಾಗಲಿದೆ. ನಮ್ಮ ಆಟದ ಶೈಲಿಯೂ ಬದಲಾಗಲಿದೆ ಎನ್ನುವ ವಿಶ್ವಾಸವಿದೆ’ ಎಂದಿದ್ದಾರೆ.

ರಾಹುಲ್‌ ನಾಯಕತ್ವ ಸಮಾಧಾನಕರ: ದ್ರಾವಿಡ್‌

ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸಿದ ಕೆ.ಎಲ್‌.ರಾಹುಲ್‌ರ ನಾಯಕತ್ವ ಸಮಾಧಾನ ತಂದಿದೆ ಎಂದು ದ್ರಾವಿಡ್‌ ಹೇಳಿದ್ದಾರೆ. ‘ತಂಡ ಸತತವಾಗಿ ಸೋಲುವಾಗ ನಾಯಕತ್ವ ನಿರ್ವಹಿಸುವುದು ಕಷ್ಟ. ಸಹ ಆಟಗಾರರು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿದಾಗ ಮಾತ್ರ ನಾಯಕ ತನ್ನ ಕೌಶಲ್ಯಗಳನ್ನು ಪ್ರದರ್ಶಿಸಲು ಸಾಧ್ಯ’ ಎಂದು ದ್ರಾವಿಡ್‌ ಹೇಳಿದ್ದಾರೆ.

click me!