* ನೂತನ ಐಪಿಎಲ್ ಫ್ರಾಂಚೈಸಿ ಲಖನೌ ತಂಡದ ಹೊಸ ಹೆಸರು ಅನಾವರಣ
* ಕೆ.ಎಲ್ ರಾಹುಲ್ ನೇತೃತ್ವದ ತಂಡಕ್ಕೆ ಲಖನೌ ಸೂಪರ್ ಜೈಂಟ್ಸ್ ಎಂದು ನಾಮಕರಣ
* ಐಪಿಎಲ್ ಆಟಗಾರರ ಮೆಗಾ ಹರಾಜಿಗೂ ಮುನ್ನ ಹೊಸ ತಂಡದ ಹೆಸರು ಅನಾವರಣ
ಲಖನೌ(ಜ.25): ಐಪಿಎಲ್‌ಗೆ (IPL 2022) ನೂತನವಾಗಿ ಸೇರ್ಪಡೆಯಾದ ಲಖನೌ ತಂಡದ ಹೆಸರು ಅಧಿಕೃತಗೊಂಡಿದ್ದು, ‘ಲಖನೌ ಸೂಪರ್ ಜೈಂಟ್ಸ್’ (Lucknow Super Giants) ಎಂಬ ಹೆಸರನ್ನು ಫ್ರಾಂಚೈಸಿಯು ಅಂತಿಮಗೊಳಿಸಿದೆ. ಈ ಹಿಂದೆ ಪುಣೆ ತಂಡದ ಮಾಲಿಕತ್ವ ಪಡೆದಿದ್ದ ಉದ್ಯಮಿ ಸಂಜೀವ್ ಗೋಯೆಂಕಾ ತಮ್ಮ ತಂಡಕ್ಕೆ ‘ರೈಸಿಂಗ್ ಪುಣೆ ಸೂಪರ್ ಜೈಂಟ್ಸ್’ ಎಂದು ಹೆಸರಿಟ್ಟಿದ್ದರು. ಅದೇ ಮಾದರಿಯಲ್ಲಿ ಲಖನೌ ತಂಡಕ್ಕೂ ನಾಮಕರಣ ಮಾಡಲಾಗಿದೆ.
ತಮ್ಮ ತಂಡಕ್ಕೆ ಹೆಸರುಗಳನ್ನು ಸೂಚಿಸುವಂತೆ ಫ್ರಾಂಚೈಸಿಯು ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳನ್ನು ಕೇಳಿತ್ತು. ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದರು. ಗೋಯೆಂಕಾ ಅವರ ಆರ್‌ಪಿಎಸ್‌ಜಿ ಸಮೂಹವು ಲಖನೌ ತಂಡವನ್ನು 7,090 ಕೋಟಿ ರು. ನೀಡಿ ಖರೀದಿಸಿತ್ತು. ತಂಡಕ್ಕೆ ಕೆ.ಎಲ್.ರಾಹುಲ್ (KL Rahul) ನಾಯಕರಾಗಿ ಆಯ್ಕೆಯಾಗಿದ್ದಾರೆ. 2022ರ ಐಪಿಎಲ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳಲಿದ್ದು, ಲಖನೌ ತಂಡದ ಜತೆಗೆ ಅಹಮದಾಬಾದ್ ತಂಡವು ಸಹಾ ಈ ಬಾರಿ ಐಪಿಎಲ್‌ನಲ್ಲಿ ಕಣಕ್ಕಿಳಿಯಲಿದೆ.
ಕಳೆದ ವಾರವಷ್ಟೇ ಡಾ. ಸಂಜೀವ್ ಗೋಯೆಂಕಾ (Sanjiv Goenka) ಮುಂಬರುವ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಕೆ.ಎಲ್. ರಾಹುಲ್ ಅವರಿಗೆ ಬರೋಬ್ಬರಿ 17 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದಷ್ಟೇ ಅಲ್ಲದೇ ರಾಹುಲ್ ಅವರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿರುವುದಾಗಿಯೂ ಲಖನೌ ಫ್ರಾಂಚೈಸಿಯು ಘೋಷಿಸಿತ್ತು. ಇನ್ನು ಕೆ.ಎಲ್. ರಾಹುಲ್ ಜತೆಗೆ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಮಾರ್ಕಸ್ ಸ್ಟೋನಿಸ್ ಅವರಿಗೆ 9.2 ಕೋಟಿ ರುಪಾಯಿ ಹಾಗೂ ಭಾರತದ ಪ್ರತಿಭಾನ್ವಿತ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿಗೆ 4 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಲಖನೌ ಫ್ರಾಂಚೈಸಿಯು ಯಶಸ್ವಿಯಾಗಿತ್ತು.
ಕಳೆದೆರಡು ಆವೃತ್ತಿಗಳಲ್ಲಿ ಮಾರ್ಕಸ್ ಸ್ಟೋನಿಸ್, ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು ಪ್ರತಿನಿಧಿಸಿದ್ದರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ 2020ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಫೈನಲ್‌ಗೇರುವಲ್ಲಿ ಸ್ಟೋನಿಸ್ ಮಹತ್ವದ ಪಾತ್ರ ವಹಿಸಿದ್ದರು. ಇನ್ನು 21 ವರ್ಷದ ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಕಳೆದೆರಡು ವರ್ಷಗಳ ಐಪಿಎಲ್ ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. 2020 ಹಾಗೂ 2021ರ ಐಪಿಎಲ್ ಟೂರ್ನಿಗಳಲ್ಲಿ ರವಿ ಬಿಷ್ಣೋಯಿ ತಲಾ 12 ವಿಕೆಟ್ ಕಬಳಿಸಿ ಮಿಂಚಿದ್ದರು.
And here it is,
Our identity,
Our name.... 🤩🙌 pic.twitter.com/OVQaw39l3A
ಇದೇ ವೇಳೆ ಅಹಮದಾಬಾದ್ ಫ್ರಾಂಚೈಸಿಯು ಹರಾಜಿಗೂ ಮುನ್ನ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya), ಆಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್‌ಗೆ (Rashid Khan) ತಲಾ 15 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿದ್ದರೆ, ಟೀಂ ಇಂಡಿಯಾ (Team India) ಯುವ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಅವರಿಗೆ 8 ಕೋಟಿ ರುಪಾಯಿ ನೀಡಿ ತನ್ನತ್ತ ಸೆಳೆದುಕೊಂಡಿದೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಅಹಮದಾಬಾದ್ ತಂಡವನ್ನು ನಾಯಕರಾಗಿ ಮುನ್ನಡೆಸಲಿದ್ದಾರೆ.
IPL 2022: ನಿಗದಿಗಿಂತ ಒಂದು ವಾರ ಮುಂಚಿತವಾಗಿ ಐಪಿಎಲ್ ಟೂರ್ನಿ ಆರಂಭ..!
ಇನ್ನು ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜು (IPL Mega Auction) ಫೆಬ್ರವರಿ 12 ಹಾಗೂ 13 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಎಲ್ಲಾ 10 ಫ್ರಾಂಚೈಸಿಗಳು ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ರಣತಂತ್ರ ಹೆಣೆಯಲಾರಂಭಿಸಿವೆ. ಇನ್ನು 2022ನೇ ಸಾಲಿನ ಐಪಿಎಲ್ ಟೂರ್ನಿಯು ಮಾರ್ಚ್ ಕೊನೆಯ ವಾರದಲ್ಲಿ ಆರಂಭವಾಗುವ ಸಾಧ್ಯತೆಯಿದೆ.