ವರದಿಗಳ ಪ್ರಕಾರ, ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.
ನವದೆಹಲಿ: ಜೂನ್‌ನಲ್ಲಿ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹೊರಗುಳಿಯುವ ಸಾಧ್ಯತೆಯಿದೆ. ಆದರೆ ವಿರಾಟ್ ಕೊಹ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿದ್ದಾಗಿ
ವರದಿಯಾಗಿದೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಅಲ್ಲದೇ ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್‌ನಿಂದ ಹೊರಗುಳಿದಿದ್ದರು. ಈ ಬೆನ್ನಲ್ಲೇ ಅವರು ನಿವೃತ್ತಿ ಹೊಂದಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಟೆಸ್ಟ್‌ಗೆ ವಿದಾಯ ಹೇಳುವ ಯಾವುದೇ ಉದ್ದೇಶವಿಲ್ಲ ರೋಹಿತ್ ಹೇಳಿದ್ದರು. ಸದ್ಯ, ತಾವಾಗಿಯೇ ಇಂಗ್ಲೆಂಡ್ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮತ್ತೆ ಬಿಸಿಸಿಐ ಗುತ್ತಿಗೆ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್‌ಗೆ ಅವಕಾಶ?
ನವದೆಹಲಿ: ಭಾರತದ ತಾರಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಮತ್ತೆ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಕಳೆದ ವರ್ಷ ಗುತ್ತಿಗೆ ಪಟ್ಟಿಯಿಂದ ಶ್ರೇಯಸ್ ಹೊರಬಿದ್ದಿದ್ದರು. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೇಯಸ್ ಭಾರತದ ಪರ ಗರಿಷ್ಠ ರನ್ ಬಾರಿಸಿದ್ದರು. ಹೀಗಾಗಿ ಅವರನ್ನು ಮತ್ತೆ ಗುತ್ತಿಗೆ ಪಟ್ಟಿಗೆ ಸೇರಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ.
ಇದೇ ವೇಳೆ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದ ಹೊರತಾಗಿಯೂ ರೋಹಿತ್, ಕೊಹ್ಲಿ, ಜಡೇಜಾರನ್ನು ಎ+ ದರ್ಜೆಯಲ್ಲೇ ಮುಂದುವರಿಸಲು ಸಾಧ್ಯತೆಯಿದೆ. ಅಕ್ಷರ್ ಪಟೇಲ್‌ಗೆ ಭಡ್ತಿ ಸಿಗಲಿದ್ದು, ನಿತೀಶ್ ರೆಡ್ಡಿ, ವರುಣ್ ಚಕ್ರವರ್ತಿ ಹಾಗೂ ಅಭಿಷೇಕ್ ಶರ್ಮಾ ಮೊದಲ ಬಾರಿ ಗುತ್ತಿಗೆ ಪಟ್ಟಿ ಸೇರಲಿದ್ದಾರೆ ಎನ್ನಲಾಗುತ್ತಿದೆ.
ಬಿಸಿಸಿಐ ಗುತ್ತಿಗೆ ಪಟ್ಟಿಯನ್ನು ಎ+, ಎ, ಬಿ, ಸಿ ಎಂದು ವಿಂಗಡಿಸಲಾಗುತ್ತದೆ. ಪಟ್ಟಿಯಲ್ಲಿದ್ದವರಿಗೆ ಕ್ರಮವಾಗಿ ₹7 ಕೋಟಿ, ₹5 ಕೋಟಿ, ₹3 ಕೋಟಿ ಹಾಗೂ ₹1 ಕೋಟಿ ವಾರ್ಷಿಕ ಸಂಭಾವನೆ ಲಭಿಸುತ್ತದೆ.
ಪ್ರಸಿದ್ಧ ಗಾಬಾ ಕ್ರೀಡಾಂಗಣ ಒಲಿಂಪಿಕ್ಸ್ ಬಳಿಕ ನೆಲಸಮ!
ಬ್ರಿಸ್ಟೇನ್: ಹಲವು ಐತಿಹಾಸಿಕ ಕ್ರಿಕೆಟ್ ಪಂದ್ಯಗಳಿಗೆ ಸಾಕ್ಷಿಯಾಗಿದ್ದ ಆಸ್ಟ್ರೇಲಿಯಾದ ಬ್ರಿಸ್ಟೇನ್‌ನಲ್ಲಿರುವ ಪ್ರಸಿದ್ಧ ದಿ ಗಾಬಾ ಕ್ರೀಡಾಂಗಣ 2032ರ ಒಲಿಂಪಿಕ್ಸ್ ಬಳಿಕ ನೆಲಸಮವಾಗಲಿದೆ.
ಬ್ರಿಸ್ಟೇನ್‌ಗೆ 2032ರ ಒಲಿಂಪಿಕ್ಸ್ ಆತಿಥ್ಯ ಲಭಿಸಿದೆ. ಹೀಗಾಗಿ ವಿಕ್ಟೋರಿಯಾ ಪಾರ್ಕ್ ಪ್ರದೇಶದಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣಗೊಳ್ಳಲಿದೆ. ಕ್ಲೀನ್ಸ್‌ಲೆಂಡ್ ರಾಜ್ಯದ ಅಧಿಕೃತರು ಈಗಾಗಲೇ ಕ್ರೀಡಾಂಗಣದ ನೀಲನಕ್ಷೆ ಬಿಡುಗಡೆಗೊಳಿಸಿದ್ದಾರೆ. ಈ ಕ್ರೀಡಾಂಗಣ 63,000 ಆಸನ ಸಾಮರ್ಥ್ಯ ಹೊಂದಿದ್ದು, ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್‌ಗೆ ಆತಿಥ್ಯ ವಹಿಸಲಿದೆ. ಕ್ರೀಡಾಕೂಟದ ಬಳಿಕ ಇದೇ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಆಯೋಜಕರು ನಿರ್ಧರಿಸಿದ್ದಾರೆ. ಇದರೊಂದಿಗೆ ಗಾಬಾ ಕ್ರೀಡಾಂಗಣವನ್ನು ನೆಲಸಮಗೊಳಿಸುವುದಾಗಿ ಅವರು ತಿಳಿಸಿದ್ದಾರೆ. ಬಳಿಕ ಆ ಸ್ಥಳದಲ್ಲಿ ವಸತಿ ನಿರ್ಮಾಣಕ್ಕೆ ಅಧಿಕೃತರು ನಿರ್ಧರಿಸಿದ್ದಾರೆ.
ಗಾಬಾ ಕ್ರೀಡಾಂಗಣದಲ್ಲಿ 1931ರಿಂದಲೂ ಕ್ರಿಕೆಟ್ ಪಂದ್ಯ ನಡೆಯುತ್ತಿದೆ. ಇತ್ತೀಚೆಗೆ ಇಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯ ಡ್ರಾಗೊಂಡಿತ್ತು.