ಲಖನೌ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಅವರ ತವರಿನಲ್ಲಿ ಸೋಲಿಸಿದೆ. ಲಖನೌ 5 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಪೂರನ್ ಮತ್ತು ಮಾರ್ಷ್ ಅವರ ಭರ್ಜರಿ ಆಟ ಲಖನೌ ಗೆಲುವಿಗೆ ಕಾರಣವಾಯಿತು.
ಹೈದರಾಬಾದ್: ತನ್ನ ಆಕ್ರಮಣಕಾರಿ ಆಟದ ಮೂಲಕ ಎದುರಾಳಿ ತಂಡಗಳಲ್ಲಿ ನಡುಕ ಹುಟ್ಟಿಸಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಅದರದೇ ತವರಿನಲ್ಲಿ ಕಟ್ಟಿಹಾಕಲು ಲಖನ್ ಸೂಪರ್ ಜೈಂಟ್ಸ್ ಯಶಸ್ವಿಯಾಗಿದೆ. ಗುರುವಾರ ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಲಖನೌ 5 ವಿಕೆಟ್ ಗೆಲುವು ಸಾಧಿಸಿತು. ಆರಂಭಿಕ ಪಂದ್ಯದಲ್ಲಿ ಸೋತಿದ್ದ ರಿಷಭ್ ಪಂತ್ ನಾಯಕತ್ವದ ಲಖನೌ, ಮೊದಲ ಗೆಲುವು ದಾಖಲಿಸಿತು. ಸನ್‌ರೈಸರ್ಸ್ 2 ಪಂದ್ಯಗಳಲ್ಲಿ ಮೊದಲ ಸೋಲು ಕಂಡಿತು.
ಸನ್‌ರೈಸರ್ಸ್ ಆರ್ಭಟಕ್ಕೆ ಕಡಿವಾಣ ಹಾಕಿಯೇ ತೀರುತ್ತೇವೆ ಎಂದು ಪಣತೊಟ್ಟಂತಿದ್ದ ಲಖನೌ, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ದೊಡ್ಡ ಸ್ಕೋರ್ ನಿರೀಕ್ಷಿಸಿದ್ದ ಹೈದ್ರಾಬಾದ್ ಎದ್ದು ಬಿದ್ದು 190 ರನ್ ಗಳಿಸಲು ಯಶಸ್ವಿಯಾಯಿತು. ಆದರೆ ತಂಡ 9 ವಿಕೆಟ್‌ಗಳನ್ನು ಕಳೆದುಕೊಂಡಿತು. 3ನೇ ಓವರ್‌ನ ಆರಂಭಿಕ2 ಎಸೆತಗಳಲ್ಲಿ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ವಿಕೆಟ್ ಕಿತ್ತ ಶಾರ್ದೂಲ್, ಲಖನೌ ಮೇಲುಗೈಗೆ ಕಾರಣರಾದರು. ಆದರೆ ಟ್ರಾವಿಸ್ ಹೆಡ್ 28 ಎಸೆತಗಳಲ್ಲಿ 47, ನಿತೀಶ್ ರೆಡ್ಡಿ 32, ಕ್ಲಾಸೆನ್ 26 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ಅಬ್ಬರಿಸಿದ ಅನಿಕೇತ್ ವರ್ಮಾ 13 ಎಸೆತಗಳಲ್ಲಿ 36, ನಾಯಕ ಪ್ಯಾಟ್ ಕಮಿನ್ಸ್ 4 ಎಸೆತಗಳಲ್ಲಿ 18 ರನ್ ಸಿಡಿಸಿ ತಂಡದ ಮೊತ್ತವನ್ನು 200ರ ಸನಿಹಕ್ಕೆ ತಂದರು.
ಇದನ್ನೂ ಓದಿ: ಶತಕ ಮಿಸ್ ಮಾಡಿಕೊಂಡ ಶ್ರೇಯಸ್ ಅಯ್ಯರ್‌ಗೆ ಬಿಸಿಸಿಐ ಗುಡ್ ನ್ಯೂಸ್, ಕೊಹ್ಲಿ-ರೋಹಿತ್‌ಗೆ ಶಾಕ್?
ದೊಡ್ಡ ಗುರಿ ಬೆನ್ನತ್ತಿದ ಲಖನೌ, 16.1 ಓವರ್‌ಗಳಲ್ಲೇ ಗೆಲುವನ್ನು ತನ್ನದಾಗಿಸಿಕೊಂಡಿತು. 2ನೇ ವಿಕೆಟ್‌ಗೆ ಜೊತೆಯಾದ ಪೂರನ್-ಮಿಚೆಲ್ ಮಾರ್ಷ್ 43 ಎಸೆತಗಳಲ್ಲಿ 116 ರನ್ ಸಿಡಿಸಿದರು. 18 ಎಸೆತಗಳಲ್ಲೇ ಅರ್ಧಶತಕ ಪೂರ್ಣಗೊಳಿಸಿದ ಪೂರನ್ 26 ಎಸೆತಗಳಲ್ಲಿ6 ಬೌಂಡರಿ, 6 ಸಿಕ್ಸರ್‌ಗಳೊಂದಿಗೆ 70 ರನ್ ಸಿಡಿಸಿದರು. ಮಾರ್ಷ್ 31ಕ್ಕೆ 52 ರನ್ ಬಾರಿಸಿ ತಂಡ ಗೆಲ್ಲಿಸಿದರು.
4 ಬಾರಿ 20ಕ್ಕಿಂತ ಕಡಿಮೆ ಎಸೆತಕ್ಕೆ ಫಿಫ್ಟಿ
ಐಪಿಎಲ್‌ನಲ್ಲಿ ನಿಕೋಲಸ್ ಪೂರನ್ 4 ಬಾರಿ 20ಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದ್ದಾರೆ. ಇದು ಯಾವುದೇ ಆಟಗಾರರ ಪೈಕಿ ಗರಿಷ್ಠ. ಹೆಡ್ ಹಾಗೂ ಟ್ರೇಸರ್ ತಲಾ 3 ಬಾರಿ ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ಖಿನ್ನತೆಯಿಂದ ಹೊರಬಂದ ಅಶುತೋಷ್ ಶರ್ಮಾ ಈಗ ಐಪಿಎಲ್ ಹೀರೋ!
ಸ್ಕೋರ್:
ಸನ್‌ರೈಸರ್ಸ್ 20 ಓವರಲ್ಲಿ 190/9 (ಹೆಡ್ 47, ಅನಿಕೇತ್ 36, ನಿತೀಶ್ 32, ಶಾರ್ದೂಲ್ 3-34)
ಲಖನೌ 16.1 ಓವರಲ್ಲಿ 193/5 (ಪೂರನ್ 70, ಮಾರ್ಷ್ 52, ಕಮಿನ್ಸ್ 2-29) ಪಂದ್ಯಶ್ರೇಷ್ಠ: ಶಾರ್ದೂಲ್