ವಿರಾಟ್ ಕೊಹ್ಲಿ ಫಾರ್ಮ್‌ ಬಗ್ಗೆ ರೋಹಿತ್ ಶರ್ಮಾ ಯಾಕೆ ದೀರ್ಘ ಚರ್ಚೆ ನಡೆಸುತ್ತಿಲ್ಲ..?

By Naveen Kodase  |  First Published Jul 15, 2022, 1:02 PM IST

* ವಿರಾಟ್ ಕೊಹ್ಲಿ ಪರ ಮತ್ತೊಮ್ಮೆ ಬ್ಯಾಟ್ ಬೀಸಿದ ರೋಹಿತ್ ಶರ್ಮಾ
* ವಿರಾಟ್ ಕೊಹ್ಲಿ ಬಗ್ಗೆ ಯಾಕೆ ಹೀಗೆಲ್ಲಾ ಮಾತನಾಡುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ
* ವಿರಾಟ್ ಫಾರ್ಮ್‌ಗೆ ಮರಳಲು ಒಂದೆರಡು ಪಂದ್ಯ ಸಾಕೆಂದ ಹಿಟ್‌ಮ್ಯಾನ್


ಬೆಂಗಳೂರು(ಜು.15): ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ದೀರ್ಘಕಾಲದಿಂದ ವಿರಾಟ್ ಕೊಹ್ಲಿ ಫಾರ್ಮ್‌ ಕುರಿತಾಗಿ ನಡೆಯುತ್ತಿರುವ ಚರ್ಚೆಯಿಂದಾಗಿ ದಣಿದಿದ್ದಾರೆ. ವಿರಾಟ್ ಕೊಹ್ಲಿ ಅವರನ್ನು ವಿಶ್ವದರ್ಜೆಯ ಆಟಗಾರರಾಗಿದ್ದು, ಅವರ ಸಾಮರ್ಥ್ಯದ ಬಗ್ಗೆ ತಮಗೆ ವಿಶ್ವಾಸವಿದೆ.ಎಲ್ಲಾ ಆಟಗಾರರು ಒಂದಲ್ಲಾ ಒಂದು ಕಾಲದಲ್ಲಿ ಇಂತಹ ಸಂಕಷ್ಟದ ಕಾಲವನ್ನು ಎದುರಿಸುತ್ತಾರೆ ಎಂದು ರೋಹಿತ್ ಶರ್ಮಾ ಹೇಳುತ್ತಲೇ ಬಂದಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಫಾರ್ಮ್‌ ಕುರಿತಂತೆ ಮತ್ತೊಮ್ಮೆ ಮಾತನಾಡಿದ್ದಾರೆ

ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಗಾಯಗೊಂಡಿದ್ದರಿಂದಾಗಿ ವಿರಾಟ್ ಕೊಹ್ಲಿ ತಂಡದಿಂದ ಹೊರಗುಳಿದಿದ್ದರು. ಆದರೆ ಗಾಯದಿಂದ ಚೇತರಿಸಿಕೊಂಡು ಎರಡನೇ ಪಂದ್ಯದ ವೇಳೆ ತಂಡಕೂಡಿಕೊಂಡ ವಿರಾಟ್ ಕೊಹ್ಲಿ 25 ಎಸೆತಗಳನ್ನು ಎದುರಿಸಿ ಕೇವಲ 16 ರನ್ ಬಾರಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಟೀಂ ಇಂಡಿಯಾ ಅಗ್ರಕ್ರಮಾಂಕದ ಬ್ಯಾಟರ್ ವಿರಾಟ್ ಕೊಹ್ಲಿ ಕಳೆದ ಮೂರು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಮೊತ್ತ ದಾಖಲಿಸದೇ ಹೋದದ್ದು, ಟೀಕಾಕಾರರ ಬಾಯಿಗೆ ಆಹಾರ ಎನಿಸಿದೆ. 

Tap to resize

Latest Videos

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 100 ರನ್‌ಗಳ ಅಂತರದ ಹೀನಾಯ ಸೋಲು ಅನುಭಿಸಿದ ಬೆನ್ನಲ್ಲೇ ಪತ್ರಕರ್ತರೊಬ್ಬರು ವಿರಾಟ್ ಕೊಹ್ಲಿ ಫಾರ್ಮ್‌ ಕುರಿತಂತೆ ರೋಹಿತ್ ಶರ್ಮಾ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ರೋಹಿತ್ ಶರ್ಮಾ, ಯಾಕಿಂತಾ ಚರ್ಚೆಗಳನ್ನು ಮಾಡುತ್ತೀರಾ? ನೀವು ಯಾಕೆ ಹೀಗೆ ಮಾತನಾಡುತ್ತಿದ್ದೀರಾ ಎಂದು ನನಗಂತೂ ಅರ್ಥವಾಗುತ್ತಿಲ್ಲ ಎಂದು ರೋಹಿತ್ ಶರ್ಮಾ, ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅವರು ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂದು ರೋಹಿತ್ ಶರ್ಮಾ ಪುನರುಚ್ಚರಿಸಿದ್ದಾರೆ. 

ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಲು ತಮ್ಮ ದಾರಿ ಹುಡುಕಿಕೊಳ್ಳಬೇಕು ಎಂದ ಗಂಗೂಲಿ..!

ವಿರಾಟ್ ಕೊಹ್ಲಿ ಹಲವು ವರ್ಷಗಳಿಂದ ಸಾಕಷ್ಟು ಪಂದ್ಯಗಳನ್ನಾಡಿದ್ದಾರೆ. ಅವರೊಬ್ಬ ದಿಗ್ಗಜ ಬ್ಯಾಟರ್ ಆಗಿದ್ದು, ಅವರಿಗೆ ಅಭದ್ರತೆ ಕಾಡುತ್ತಿಲ್ಲ. ನಾನು ಈ ಹಿಂದಿನ ಪತ್ರಿಕಾಗೋಷ್ಠಿಯಲ್ಲಿಯೂ ಇದೇ ಮಾತನ್ನು ಪುನರುಚ್ಚರಿಸಿದ್ದೇನೆ. ಫಾರ್ಮ್‌ ಎನ್ನುವುದು ಯಾವಾಗಲೂ ಒಂದೇ ರೀತಿ ಇರಲು ಸಾಧ್ಯವಿಲ್ಲ ಹಾಗೂ ಪ್ರತಿ ಆಟಗಾರನ ಪಾಲಿಗೂ ಏಳು-ಬೀಳು ಸಹಜ. ವಿರಾಟ್ ಕೊಹ್ಲಿಯಂತಹ ಆಟಗಾರರು ಹಲವು ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದು, ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ವಿರಾಟ್ ಕೊಹ್ಲಿಯಂತಹ ಆಟಗಾರರು ಫಾರ್ಮ್‌ಗೆ ಮರಳಲು ಕೇವಲ ಒಂದೆರಡು ಪಂದ್ಯಗಳು ಸಾಕು. ನಾನು ಕೊಹ್ಲಿ ಬಗ್ಗೆ ಈ ರೀತಿ ಯೋಚಿಸುತ್ತಿದ್ದೇನೆ. ಕ್ರಿಕೆಟ್‌ನ್ನು ಯಾರೆಲ್ಲಾ ಫಾಲೋ ಮಾಡುತ್ತಿದ್ದಾರೋ ಅವರೆಲ್ಲರೂ ಸಹಾ ನನ್ನ ರೀತಿಯೇ ಯೋಚಿಸುತ್ತಿದ್ದಾರೆ ಎಂದುಕೊಂಡಿದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ನಾವು ಈ ವಿಚಾರದ ಕುರಿತಂತೆ ಮಾತನಾಡುತ್ತಲೇ ಇರುತ್ತೇವೆ. ನಾವೆಲ್ಲರೂ ಈ ವಿಚಾರ ಮಾತನಾಡುವಾಗ ಸಾಕಷ್ಟು ಆಲೋಚನೆ ಮಾಡಿಯೇ ಮಾತನಾಡಬೇಕು. ಎಲ್ಲಾ ಕ್ರಿಕೆಟಿಗರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಏರಿಳಿತಗಳನ್ನು ಕಂಡಿದ್ದಾರೆ. ಈ ಆಟಗಾರ ಸಾಕಷ್ಟು ಪಂದ್ಯಗಳನ್ನಾಡಿ ರನ್‌ಗಳ ರಾಶಿಯನ್ನೇ ಗುಡ್ಡೆ ಹಾಕಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ ಗಮನಿಸಿ, ಎಷ್ಟೊಂದು ಶತಕ ಸಿಡಿಸಿದ್ದಾರೆ. ಅಪಾರ ಅನುಭವದಿಂದಲೇ ಇದೆಲ್ಲವನ್ನು ಅವರು ಸಾಧಿಸಿದ್ದಾರೆ. ಎಲ್ಲಾ ಪಂದ್ಯಗಳಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ ಆಟಗಾರ ಯಾರೂ ಇಲ್ಲ. ಎಲ್ಲಾ ಆಟಗಾರರು ಏಳು-ಬೀಳು ಕಂಡಿದ್ದಾರೆ. ವೃತ್ತಿಪರ ಜೀವನದಲ್ಲೂ ಏಳು-ಬೀಳು ಸಹಜ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

click me!