
ಟೀಮ್ ಇಂಡಿಯಾದ ಹಿರಿಯ ಆಟಗಾರ ರೋಹಿತ್ ಶರ್ಮಾ ಬ್ಯಾಟಿಂಗ್ ಫಾರ್ಮ್ ಮತ್ತೆ ಚರ್ಚೆಯಲ್ಲಿದೆ. ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ವಿಫಲರಾದ ಬೆನ್ನಲ್ಲೇ, ಬಿಸಿಸಿಐ ಆಯ್ಕೆ ಸಮಿತಿಯು ರೋಹಿತ್‌ಗೆ 'ಅಲ್ಟಿಮೇಟಂ'(ultimatum) ನೀಡಿದೆ ಎಂಬ ಸುದ್ದಿ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ.
ವರದಿಗಳ ಪ್ರಕಾರ, ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ರೋಹಿತ್ ಶರ್ಮಾಗೆ ಮಹತ್ವದ ಸಂದೇಶ ರವಾನಿಸಿದೆ. 2027ರ ಏಕದಿನ ವಿಶ್ವಕಪ್‌ಗೆ ರೋಹಿತ್ ಶರ್ಮಾ ನಮ್ಮ ಯೋಜನೆಯಲ್ಲಿ ಇಲ್ಲ. ಹಾಗಾಗಿ ಈ ಸರಣಿಯ ನಂತರ ಅವರು ಮುಂದಿನ ದಾರಿ ನೋಡಿಕೊಳ್ಳುವುದು ಉತ್ತಮ ಎಂಬರ್ಥದಲ್ಲಿ ಸಮಿತಿ ತಿಳಿಸಿದೆ ಎನ್ನಲಾಗಿದೆ. ರೋಹಿತ್ ಸ್ಥಾನದಲ್ಲಿ ಯುವ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ಹೆಚ್ಚಿನ ಅವಕಾಶ ನೀಡಲು ಮ್ಯಾನೇಜ್‌ಮೆಂಟ್ ಒಲವು ತೋರುತ್ತಿದೆ ಎಂಬ ವರದಿಗಳಿವೆ.
ಎರಡನೇ ಏಕದಿನ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತದ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್, ರೋಹಿತ್ ಮೇಲಿನ ಒತ್ತಡದ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ರೋಹಿತ್ ಶರ್ಮಾ ಅವರಂತಹ ಅನುಭವಿ ಮತ್ತು ದೊಡ್ಡ ಆಟಗಾರನ ಮೇಲೆ ಯಾವುದೇ ರೀತಿಯ ಒತ್ತಡ ಹೇರಲು ಸಾಧ್ಯವಿಲ್ಲ. ಮೊದಲ ಎರಡು ಪಂದ್ಯಗಳಲ್ಲಿ ಅವರು ರನ್ ಗಳಿಸಿಲ್ಲ ನಿಜ, ಆದರೆ ಅದರಿಂದ ಅವರ ಸಾಮರ್ಥ್ಯವೇನು ಕಡಿಮೆಯಾಗುವುದಿಲ್ಲ. ಇಂದು ಅವರು ಉತ್ತಮವಾಗಿ ಆಡುವ ಮುನ್ಸೂಚನೆ ನೀಡಿದ್ದರು. ದುರಾದೃಷ್ಟವಶಾತ್ ಔಟಾದರು ಎಂದಿದ್ದಾರೆ.
ನಾನು ಸಾಕಷ್ಟು ಕ್ರಿಕೆಟ್ ನೋಡಿದ್ದೇನೆ. ಯಾವುದೇ ಬ್ಯಾಟರ್‌ಗೆ ಲಯ ಕಂಡುಕೊಳ್ಳಲು ಸಮಯ ಬೇಕಾಗುತ್ತದೆ. ಲಾರ್ಡ್ಸ್‌ನಲ್ಲಿ ನಡೆಯಲಿರುವ ಮುಂದಿನ ಪಂದ್ಯದಲ್ಲಿ ನೀವು ರೋಹಿತ್ ಅವರ ವಿಭಿನ್ನ ಆಟವನ್ನು ನೋಡಬಹುದು. ಅವರಿಗೆ ರನ್ ಗಳಿಸುವ ಹಸಿವಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೋಹಿತ್ ಕಷ್ಟಪಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೋಚ್, ಅವರು ಕಷ್ಟಪಡುತ್ತಿದ್ದಾರೆ ಎಂದು ನಾನು ಹೇಳುವುದಿಲ್ಲ. ಪಿಚ್‌ನಲ್ಲಿ ಸ್ವಲ್ಪ ಡಬಲ್ ಬೌನ್ಸ್ ಇತ್ತು, ಅದರಿಂದ ಅವರು ತಮ್ಮ ಸಹಜ ಶಾಟ್‌ಗಳನ್ನು ಆಡಲು ಸ್ವಲ್ಪ ಹಿಂಜರಿಯುತ್ತಿರಬಹುದು. ಶುಬ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭ ಪಡೆದರು. ಆದರೆ ರೋಹಿತ್‌ಗೆ ಅಂತಹ ಎಸೆತಗಳು ಸಿಗಲಿಲ್ಲ. ಲಾರ್ಡ್ಸ್‌ನಲ್ಲಿ ಪರಿಸ್ಥಿತಿ ಬದಲಾಗಲಿದೆ ಎಂದರು.
ಒಂದೆಡೆ ಬಿಸಿಸಿಐ ಭವಿಷ್ಯದ ದೃಷ್ಟಿಯಿಂದ ಕಠಿಣ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ ಎಂಬ ವದಂತಿಗಳಿದ್ದರೆ, ಇನ್ನೊಂದೆಡೆ ಮ್ಯಾನೇಜ್‌ಮೆಂಟ್ ರೋಹಿತ್ ಬೆನ್ನಿಗೆ ನಿಂತಿದೆ. ಲಾರ್ಡ್ಸ್ ಅಂಗಳದಲ್ಲಿ ರೋಹಿತ್ ತಮ್ಮ ಬ್ಯಾಟ್ ಮೂಲಕ ಟೀಕಾಕಾರರಿಗೆ ಉತ್ತರ ನೀಡುತ್ತಾರಾ? ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.