ಟಿ20 ವಿಶ್ವಕಪ್‌ನಲ್ಲಿ ನಮೀಬಿಯಾ ‘ಸೂಪರ್‌’ ಶುಭಾರಂಭ

Published : Jun 04, 2024, 09:01 AM IST
ಟಿ20 ವಿಶ್ವಕಪ್‌ನಲ್ಲಿ ನಮೀಬಿಯಾ ‘ಸೂಪರ್‌’ ಶುಭಾರಂಭ

ಸಾರಾಂಶ

ಸೋಮವಾರ ಡೇವಿಡ್ ವೀಸಾರ ಅಮೋಘ ಪ್ರದರ್ಶನದ ನೆರವಿನಿಂದ ಒಮಾನ್‌ ವಿರುದ್ಧ ನಮೀಬಿಯಾ ಸೂಪರ್‌ ಓವರ್‌ನಲ್ಲಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ರೋಚಕ ಶುಭಾರಂಭ ಮಾಡಿತು.

ಬ್ರಿಡ್ಜ್‌ಟೌನ್‌: ಈ ಬಾರಿ ಟಿ20 ವಿಶ್ವಕಪ್‌ ಆರಂಭದಲ್ಲೇ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ ಹೈ ಸ್ಕೋರ್‌ ಪಂದ್ಯದ ರುಚಿ ಅನುಭವಿಸಿದ್ದ ಪ್ರೇಕ್ಷಕರು ನಂತರದ 2 ಪಂದ್ಯಗಳಲ್ಲಿ ಲೋ ಸ್ಕೋರ್‌ ಥ್ರಿಲ್ಲರ್‌ನ ಎಂಜಾಯ್‌ ಮಾಡಿದರು.

ಸೋಮವಾರ ಡೇವಿಡ್ ವೀಸಾರ ಅಮೋಘ ಪ್ರದರ್ಶನದ ನೆರವಿನಿಂದ ಒಮಾನ್‌ ವಿರುದ್ಧ ನಮೀಬಿಯಾ ಸೂಪರ್‌ ಓವರ್‌ನಲ್ಲಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ರೋಚಕ ಶುಭಾರಂಭ ಮಾಡಿತು.

ಮೊದಲು ಬ್ಯಾಟ್‌ ಮಾಡಿದ ಒಮಾನ್‌ ಕಲೆಹಾಕಿದ್ದು 19.4 ಓವರ್‌ನಲ್ಲಿ 109 ರನ್‌. 10 ರನ್‌ಗೆ 3 ವಿಕೆಟ್‌ ಕಳೆದುಕೊಂಡ ಬಳಿಕ ಖಾಲಿದ್‌ ಕೈಲ್ 34, ಝೀಶಾನ್‌ ಮಕ್ಸೂದ್‌ 22, ಅಯಾನ್‌ ಖಾನ್‌ 15 ರನ್‌ ಗಳಿಸಿ ತಂಡವನ್ನು 100ರ ಗಡಿ ದಾಟಿಸಿದರು. ರುಬೆನ್‌ ಟ್ರಂಪಲ್‌ಮ್ಯಾನ್‌ 4 ಓವರಲ್ಲಿ 21 ರನ್‌ಗೆ 4 ವಿಕೆಟ್‌ ಕಿತ್ತರೆ, ಡೇವಿಡ್‌ ವೀಸಾ 28ಕ್ಕೆ 3, ನಾಯಕ ಎರಾಸ್ಮಸ್‌ 2 ವಿಕೆಟ್‌ ಕಿತ್ತರು.

ಕಡಿಮೆ ಮೊತ್ತವಾದರೂ ಮಾರಕ ಬೌಲಿಂಗ್‌ ದಾಳಿ ನಡೆಸಿದ ಒಮಾನ್‌ ತಂಡ ನಮೀಬಿಯಾವನ್ನು 109 ರನ್‌ಗೆ ನಿಯಂತ್ರಿಸಿತು. ರನ್‌ ಖಾತೆ ತೆರೆಯುವ ಮೊದಲೇ ವಿಕೆಟ್‌ ಕಳೆದುಕೊಂಡ ತಂಡಕ್ಕೆ ಜಾನ್‌ ಫ್ರೈಲಿಂಕ್‌(45) ಹಾಗೂ ನಿಕೋಲಸ್‌ ಡೇವಿನ್‌(24) ಆಸರೆಯಾದರು.

ಸುಲಭವಾಗಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ತಂಡ ಕೊನೆಯಲ್ಲಿ ಮುಗ್ಗರಿಸಿತು. ಕೊನೆ 18 ಎಸೆತಗಳಲ್ಲಿ 18, ಕೊನೆ ಓವರಲ್ಲಿ 5 ರನ್‌ ಬೇಕಿದ್ದಾಗ ನಮೀಬಿಯಾ ರನ್‌ ಗಳಿಸಲು ತಿಣುಕಾಡಿ ಪಂದ್ಯ ಟೈ ಮಾಡಿಕೊಂಡಿತು. ಮೆಹ್ರಾನ್‌ ಖಾನ್‌ 7 ರನ್‌ಗೆ 3 ವಿಕೆಟ್‌ ಕಿತ್ತರು. ಬಳಿಕ ಸೂಪರ್‌ ಓವರ್‌ನಲ್ಲಿ ನಮೀಬಿಯಾ ಗೆಲುವನ್ನು ತನ್ನತ್ತ ಒಲಿಸಿಕೊಂಡಿತು.

ಸ್ಕೋರ್‌: ಒಮಾನ್‌ 19.4 ಓವರಲ್ಲಿ 109/10 (ಖಾಲಿದ್‌ 34, ಟ್ರಂಪಲ್‌ಮ್ಯಾನ್‌ 4-21, ವೀಸಾ 3-28), 
ನಮೀಬಿಯಾ 20 ಓವರಲ್ಲಿ 109/6 (ಫ್ರೈಲಿಂಗ್‌ 45, ಡೇವಿನ್‌ 24, ಮೆಹ್ರಾನ್‌ 3-7) 
ಪಂದ್ಯಶ್ರೇಷ್ಠ: ಡೇವಿಡ್‌ ವೀಸಾ.

ಹೇಗಿತ್ತು ಸೂಪರ್ ಓವರ್‌?

ಸೂಪರ್‌ ಓವರ್‌ನಲ್ಲಿ ನಮೀಬಿಯಾ ಮೊದಲು ಬ್ಯಾಟ್‌ ಮಾಡಿತು. ಮೊದಲೆರಡು ಎಸೆತಗಳಲ್ಲಿ ವೀಸಾ ಬೌಂಡರಿ, ಸಿಕ್ಸರ್ ಸಿಡಿಸಿ, ನಂತರದ 2 ಎಸೆತಗಳಲ್ಲಿ 3 ರನ್‌ ದೋಚಿದರು. ಕೊನೆ 2 ಎಸೆತಗಳಲ್ಲಿ ಎರಾಸ್ಮಸ್‌ 2 ಬೌಂಡರಿ ಬಾರಿಸಿದ್ದರಿಂದ ತಂಡದ ಮೊತ್ತ 21 ಆಯಿತು. 22ರ ಗುರಿ ಪಡೆದ ಒಮಾನ್‌ಗೆ ಮತ್ತೆ ಡೇವಿಡ್‌ ವೀಸಾ ಕಂಟಕವಾದರು. ವೀಸಾ ಎಸೆದ ಮೊದಲ 2 ಎಸೆತಗಳಲ್ಲಿ 2 ರನ್‌ ಗಳಿಸಿದ ನಸೀಂ 3ನೇ ಎಸೆತದಲ್ಲಿ ಔಟಾದರು. ನಂತರದ 2 ಎಸೆತಗಳಲ್ಲಿ 2 ರನ್‌ ಬಂತು. ಕೊನೆ ಎಸೆತದಲ್ಲಿ ಆಖಿಬ್ ಸಿಕ್ಸರ್‌ ಸಿಡಿಸದರೂ ಗೆಲುವಿಗೆ ಸಾಕಾಗಲಿಲ್ಲ.

ವಿಶ್ವಕಪ್‌ನಲ್ಲಿ 12 ವರ್ಷ ಬಳಿಕ ಸೂಪರ್‌ ಓವರ್‌

ಟಿ20 ವಿಶ್ವಕಪ್‌ನಲ್ಲಿ 12 ವರ್ಷಗಳ ಸೂಪರ್‌ ಓವರ್‌ ಆಡಿಸಲಾಯಿತು. 2012ರಲ್ಲಿ ಶ್ರೀಲಂಕಾ-ನ್ಯೂಜಿಲೆಂಡ್‌ ಹಾಗೂ ದ.ಆಫ್ರಿಕಾ-ನ್ಯೂಜಿಲೆಂಡ್‌ ಪಂದ್ಯಗಳು ಟೈ ಆಗಿದ್ದಾಗ ಸೂಪರ್‌ ಓವರ್‌ ಆಡಿಸಲಾಗಿತ್ತು. 2 ಪಂದ್ಯಗಳಲ್ಲೂ ನ್ಯೂಜಿಲೆಂಡ್‌ ಸೋತಿತ್ತು.

04ನೇ ಬಾರಿ: ಟಿ20 ವಿಶ್ವಕಪ್‌ನಲ್ಲಿ ಪಂದ್ಯ ಟೈ ಆಗಿದ್ದು 4ನೇ ಬಾರಿ. 2007ರಲ್ಲಿ ಭಾರತ-ಪಾಕ್‌ ಪಂದ್ಯ ಟೈ ಆಗಿದ್ದಾಗ ಬೌಲ್‌ ಔಟ್‌ ಮೂಲಕ ಫಲಿತಾಂಶ ನಿರ್ಧರಿಸಲಾಗಿತ್ತು. ಬಳಿಕ 3 ಬಾರಿ ಸೂಪರ್ ಓವರ್‌ ಆಡಿಸಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!
14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!