'ಬರೆದಿಟ್ಟುಕೊಳ್ಳಿ, ಪಾಕಿಸ್ತಾನ ಯೂ-ಟರ್ನ್ ಹೊಡೆಯುತ್ತೆ'; ಭಾರತ-ಪಾಕ್ ಪಂದ್ಯ ನಡೆಯೋದು ಪಕ್ಕಾ ಎಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!

Published : Feb 06, 2026, 04:15 PM IST
India vs Pakistan

ಸಾರಾಂಶ

ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿದೆ. ಆದರೆ, ಇದು ಬಾಂಗ್ಲಾದೇಶದ ಚುನಾವಣೆಗೆ ಸಂಬಂಧಿಸಿದ ರಾಜಕೀಯ ತಂತ್ರವಾಗಿದ್ದು, ಪಾಕಿಸ್ತಾನ ಶೀಘ್ರದಲ್ಲೇ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿದೆ ಎಂದು ಚೇತನ್ ಶರ್ಮಾ ಭವಿಷ್ಯ ನುಡಿದಿದ್ದಾರೆ.

ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ಫೆಬ್ರವರಿ 15ರಂದು ನಡೆಯಬೇಕಿರುವ ಭಾರತ-ಪಾಕಿಸ್ತಾನ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿದೆ. ಆದರೆ, ಇದು ಕೇವಲ ರಾಜಕೀಯ ತಂತ್ರ, ಪಾಕಿಸ್ತಾನ ಖಂಡಿತವಾಗಿಯೂ ಈ ನಿರ್ಧಾರದಿಂದ ಹಿಂದೆ ಸರಿಯಲಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಚೀಫ್ ಸೆಲೆಕ್ಟರ್ ಚೇತನ್ ಶರ್ಮಾ ಭವಿಷ್ಯ ನುಡಿದಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಪಾಕ್ ಸರ್ಕಾರ ನೀಡಿರುವ ಈ ಬಹಿಷ್ಕಾರದ ನಿರ್ದೇಶನ ಕೇವಲ ರಾಜಕೀಯ ಗಿಮಿಕ್. ಫೆಬ್ರವರಿ 12ರ ನಂತರ ಪಾಕಿಸ್ತಾನ ಯೂ-ಟರ್ನ್ ಹೊಡೆಯಲಿದೆ ಎಂದು ಅವರು ಹೇಳಿದ್ದಾರೆ.

ಇದೊಂದು ರಾಜಕೀಯ ಆಟವೆಂದ ಮಾಜಿ ಕ್ರಿಕೆಟರ್!

"ಇದೆಲ್ಲಾ ಒಂದು ರಾಜಕೀಯ ಆಟ. ಬಾಂಗ್ಲಾದೇಶದಲ್ಲಿ ಫೆಬ್ರವರಿ 12ಕ್ಕೆ ಚುನಾವಣೆ ಇದೆ. ಅದು ಮುಗಿದ ನಂತರ ಪಾಕಿಸ್ತಾನ ತನ್ನ ನಿಲುವು ಬದಲಿಸುವುದನ್ನು ನೀವೇ ನೋಡುತ್ತೀರಿ. 'ಸಾರ್ವಜನಿಕರ ಭಾವನೆಗಳನ್ನು ಗೌರವಿಸಿ, ನಾವು ಕ್ರಿಕೆಟ್‌ ಅನ್ನು ಹಾಳು ಮಾಡಲು ಸಾಧ್ಯವಿಲ್ಲ, ಹಾಗಾಗಿ ಭಾರತದ ವಿರುದ್ಧ ಆಡಲು ನಿರ್ಧರಿಸಿದ್ದೇವೆ' ಎಂದು ಅವರು ಶೀಘ್ರದಲ್ಲೇ ಹೇಳಿಕೆ ನೀಡಲಿದ್ದಾರೆ," ಎಂದು ಚೇತನ್ ಶರ್ಮಾ 'ಇಂಡಿಯಾ ಟುಡೇ'ಗೆ ತಿಳಿಸಿದ್ದಾರೆ.

ತಾನೂ ಒಬ್ಬ ರಾಜಕಾರಣಿಯಾಗಿದ್ದೆ, ಹಾಗಾಗಿ ಚುನಾವಣಾ ತಂತ್ರಗಳು ತನಗೆ ಚೆನ್ನಾಗಿ ಗೊತ್ತು ಎಂದು ಚೇತನ್ ಶರ್ಮಾ ಹೇಳಿದ್ದಾರೆ. "ಚುನಾವಣೆ ಮುಗಿದ ನಂತರ, ಬಹುಶಃ ಪಾಕಿಸ್ತಾನದ ಸೇನಾ ಮುಖ್ಯಸ್ಥರೇ ನೇರವಾಗಿ ಮಧ್ಯಪ್ರವೇಶಿಸಿ, ಕ್ರೀಡೆಯಲ್ಲಿ ರಾಜಕೀಯ ಬೆರೆಸಬಾರದು ಎಂದು ಹೇಳಬಹುದು," ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ತಾನ ಇನ್ನೂ ಅಧಿಕೃತವಾಗಿ ಐಸಿಸಿಗೆ ತನ್ನ ಬಹಿಷ್ಕಾರದ ನಿರ್ಧಾರವನ್ನು ತಿಳಿಸಿಲ್ಲ ಎಂಬುದನ್ನು ಚೇತನ್ ಶರ್ಮಾ ಒತ್ತಿ ಹೇಳಿದ್ದಾರೆ.

"ಅಧಿಕೃತ ದೃಢೀಕರಣವಿಲ್ಲದೆ ಪಾಕಿಸ್ತಾನ ನೀಡುವ ಹೇಳಿಕೆಗಳಿಗೆ ಯಾವುದೇ ಬೆಲೆ ಇಲ್ಲ. ಬಹಿಷ್ಕಾರ ಅಂತ ಯಾರು ಬೇಕಾದರೂ ಘೋಷಿಸಬಹುದು, ಆದರೆ ಅದನ್ನು ಅಧಿಕೃತವಾಗಿ ತಿಳಿಸುವವರೆಗೂ ಏನೂ ಬದಲಾಗುವುದಿಲ್ಲ. ಇಲ್ಲಿ ನಿಜವಾಗಿ ಶಿಕ್ಷೆ ಅನುಭವಿಸುತ್ತಿರುವುದು ಯಾರು? ಕ್ರಿಕೆಟ್ ಮತ್ತು ಕ್ರಿಕೆಟಿಗರು ಮಾತ್ರ" ಎಂದು ಚೇತನ್ ಶರ್ಮಾ ಪ್ರಶ್ನಿಸಿದ್ದಾರೆ.

ಪಾಕ್ ಜತೆ ಆಪ್ತ ಸಂಬಂಧ ಹೊಂದಿರುವ ಬಾಂಗ್ಲಾದೇಶ ಸರ್ಕಾರ

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಪತನವಾದ ನಂತರ ಅಧಿಕಾರಕ್ಕೆ ಬಂದಿರುವ ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ, ಪಾಕಿಸ್ತಾನದೊಂದಿಗೆ ಹೆಚ್ಚು ಆಪ್ತ ನೀತಿ ಅನುಸರಿಸುತ್ತಿದೆ. ಐಸಿಸಿ ಟೂರ್ನಿಯಿಂದ ಬಾಂಗ್ಲಾದೇಶವನ್ನು ಹೊರಗಿಟ್ಟ ಕ್ರಮ 'ಅನ್ಯಾಯ' ಎಂದು ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮುಹ್ಸಿನ್ ನಖ್ವಿ ಈ ಹಿಂದೆ ಹೇಳಿದ್ದರು. ಬಾಂಗ್ಲಾದೇಶಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಪಾಕಿಸ್ತಾನ, ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ತಿಳಿಸಿದೆ. ಆದರೆ, ಮೊಹಮ್ಮದ್ ಯೂನುಸ್ ಸರ್ಕಾರವು ಬಾಂಗ್ಲಾದೇಶದಲ್ಲಿ ತೀವ್ರ ಒತ್ತಡದಲ್ಲಿದ್ದು, ಮುಂಬರುವ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇನ್ನೊಂದೆಡೆ, ರಾಜಕೀಯ ಒತ್ತಡದಿಂದಾಗಿ ಭಾರತಕ್ಕೆ ಬರಲು ನಿರಾಕರಿಸಿದ ಸರ್ಕಾರದ ನಿಲುವಿನ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಕೆಲವು ಅಧಿಕಾರಿಗಳಲ್ಲೇ ಅಸಮಾಧಾನವಿದೆ ಎಂಬ ವರದಿಗಳೂ ಇವೆ. ಬಾಂಗ್ಲಾದೇಶದಲ್ಲಿ ಸರ್ಕಾರ ಬದಲಾದರೆ ತಮ್ಮ ದೇಶದ ಕ್ರಿಕೆಟ್ ಭವಿಷ್ಯ ಸುರಕ್ಷಿತವಾಗಲಿದೆ ಎಂದು ಅವರು ನಿರೀಕ್ಷಿಸುತ್ತಿದ್ದಾರೆ.

ಬಹುನಿರೀಕ್ಷಿಯ 10ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಇದೇ ಫೆಬ್ರವರಿ 07ರಿಂದ ಆರಂಭವಾಗಲಿದ್ದು, ಈ ಪ್ರತಿಷ್ಠಿತ ಟೂರ್ನಿಗೆ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯ ವಹಿಸಿವೆ. ಇನ್ನು ಪಾಕಿಸ್ತಾನ ತಂಡವು ತನ್ನ ಪಾಲಿನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಆದರೆ ಫೆಬ್ರವರಿ 15ರಂದು ಪಾಕಿಸ್ತಾನ ತಂಡವು ಭಾರತ ಎದುರು ಮೈದಾನಕ್ಕಿಳಿಯುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಘೋಷಿಸಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಡರ್-19 ವಿಶ್ವಕಪ್ ಫೈನಲ್‌: ಇಂಗ್ಲೆಂಡ್‌ ಬೌಲರ್‌ಗಳನ್ನು ಚೆಂಡಾಡಿ ಚೊಚ್ಚಲ ಶತಕ ಚಚ್ಚಿದ ವೈಭವ್ ಸೂರ್ಯವಂಶಿ! ಸಿಕ್ಸರ್‌ನಲ್ಲೂ ಹೊಸ ದಾಖಲೆ
ಮೈ ಸುಡುವ ಜ್ವರದ ನಡುವೆಯೂ ಆರ್‌ಸಿಬಿಗೆ ಕಪ್ ಗೆಲ್ಲಿಸಿಕೊಟ್ಟ ಕ್ಯಾಪ್ಟನ್ ಸ್ಮೃತಿ ಮಂಧನಾ! ಬ್ರೇಕ್‌ಅಪ್ ನೋವು ಮರೆಸಿದ ಫೈನಲ್ ಗೆಲುವು