WPL 2026: ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ಮತ್ತೊಮ್ಮೆ ಚಾಂಪಿಯನ್; ಡೆಲ್ಲಿ ಕ್ಯಾಪಿಟಲ್ಸ್‌ಗೆ ನಾಲ್ಕನೇ ಬಾರಿ ಹಾರ್ಟ್‌ ಬ್ರೇಕ್!

Published : Feb 05, 2026, 11:16 PM ISTUpdated : Feb 05, 2026, 11:39 PM IST
WPL 2026 RCB

ಸಾರಾಂಶ

ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಆಗಿದೆ. 204 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಆರ್‌ಸಿಬಿ ರೋಚಕ ಜಯ ಸಾಧಿಸಿದೆ.

ವಡೋದರಾ: ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಜೆಮಿಮಾ ರೋಡ್ರಿಗಸ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಲ್ಕನೇ ಬಾರಿಯೂ ಹೃದಯ ನುಚ್ಚುನೂರಾಗಿದ್ದು, ಮತ್ತೊಮ್ಮೆ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿದೆ. ಫೈನಲ್‌ನಲ್ಲಿ ಡೆಲ್ಲಿ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ಆರ್‌ಸಿಬಿ, ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇಲ್ಲಿನ ಬಿಸಿಎ ಸ್ಟೇಡಿಯಂನಲ್ಲಿ ಗೆಲ್ಲಲು ಬರೋಬ್ಬರಿ 204 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರಂಭದಲ್ಲೇ ಇನ್‌ಫಾರ್ಮ್ ಬ್ಯಾಟರ್ ಗ್ರೇಸ್ ಹ್ಯಾರಿಸ್ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಏಳು ಎಸೆತಗಳಲ್ಲಿ ಎರಡು ಬೌಂಡರಿ ಸಹಿತ 9 ರನ್‌ಗಳಿಸಿ ವಿಕೆಟ್ ಒಪ್ಪಿಸಿದಾಗ ಆರ್‌ಸಿಬಿ ಪಾಳಯ ಅಕ್ಷರಶಃ ಮೌನಕ್ಕೆ ಜಾರಿತು. ಆರ್‌ಸಿಬಿ 9 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು.

 

ಮಂಧನಾ-ವೋಲ್ಸ್ ದಾಖಲೆಯ ಜತೆಯಾಟ:

ಬೃಹತ್ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು ಆರಂಭದಲ್ಲೇ ಗ್ರೇಸ್ ವಿಕೆಟ್ ಕಳೆದುಕೊಂಡರೂ ಎರಡನೇ ವಿಕೆಟ್‌ಗೆ ನಾಯಕಿ ಸ್ಮೃತಿ ಮಂಧನಾ ಹಾಗೂ ಜಾರ್ಜಿಯಾ ವೋಲ್ ವಿಸ್ಪೋಟಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಇಬ್ಬರೂ ಆಟಗಾರ್ತಿಯರು ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಡೆಲ್ಲಿ ಬೌಲರ್‌ಗಳ ಮೇಲೆ ಒತ್ತಡ ಹೇರಿದರು. ಸ್ಮೃತಿ ಮಂಧನಾ ಸ್ಪೋಟಕ ಬ್ಯಾಟಿಂಗ್ ನಡೆಸಿದರೆ, ವೋಲ್ ನಾಯಕಿಗೆ ಉತ್ತಮ ಸಾಥ್ ನೀಡಿದರು. ಸ್ಮೃತಿ ಮಂಧನಾ ಕೇವಲ 23 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸಿದರು. ಇನ್ನು ಮತ್ತೊಂದು ತುದಿಯಲ್ಲಿ ವೋಲ್‌ ಕೂಡಾ ಅರ್ಧಶತಕ ಪೂರೈಸಿದರು. ಎರಡನೇ ವಿಕೆಟ್‌ಗೆ ಈ ಜೋಡಿ ಕೇವಲ 92 ಎಸೆತಗಳಲ್ಲಿ 165 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ಹೊಸ್ತಿಲಲ್ಲಿ ತಂದು ನಿಲ್ಲಿಸಿದರು. ವೋಲ್ 79 ರನ್ ಸಿಡಿಸಿದರೆ, ನಾಯಕಿ ಸ್ಮೃತಿ ಮಂಧನಾ ಕೇವಲ 41 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 87 ರನ್ ಬಾರಿಸಿದರು.

ಮೂರು ವರ್ಷದಲ್ಲಿ ಆರ್‌ಸಿಬಿಗೆ ಮೂರು ಟ್ರೋಫಿ:

ಆರ್‌ಸಿಬಿ ಮಹಿಳಾ ತಂಡವು 2024ರಲ್ಲಿ ಚೊಚ್ಚಲ ಬಾರಿಗೆ ಟ್ರೋಫಿ ಗೆದ್ದು ಬೀಗಿತ್ತು. ಇದಾದ ಬಳಿಕ ಮರು ವರ್ಷ 2025ರಲ್ಲಿ ರಜತ್‌ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಐಪಿಎಲ್‌ನಲ್ಲಿ ಆರ್‌ಸಿಬಿಗೆ ಟ್ರೋಫಿ ಬರ ನೀಗಿಸಿತ್ತು. ಇದೀಗ ಮತ್ತೆ ಸ್ಮೃತಿ ಮಂಧನಾ ನೇತೃತ್ವದ ಮಹಿಳಾ ತಂಡವು ಆರ್‌ಸಿಬಿಗೆ ಮತ್ತೊಂದು ಟ್ರೋಫಿ ಗೆದ್ದುಕೊಟ್ಟಿದೆ.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಲಿಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ 49 ರನ್‌ಗಳ ಜತೆಯಾಟವಾಡಿತು. ಶಫಾಲಿ 20 ರನ್ ಸಿಡಿಸಿದರೆ, ಲಿಜೆಲ್ಲೆ ಲೀ 37, ಲೋರಾ ವೋಲ್ವರ್ಟ್‌ ಕೇವಲ 25 ಎಸೆತಗಳಲ್ಲಿ 44 ರನ್ ಸಿಡಿಸಿದರು. ಇನ್ನು ನಾಯಕಿ ಜೆಮಿಯಾ ರೋಡ್ರಿಗಸ್‌ ಕೇವಲ 37 ಎಸೆತಗಳಲ್ಲಿ 8 ಬೌಂಡರಿ ಸಹಿತ 57 ರನ್ ಸಿಡಿಸಿದರೆ, ಹೆನ್ರಿ ಕೇವಲ 15 ಎಸೆತಗಳಲ್ಲಿ ಅಜೇಯ 35 ರನ್ ಸಿಡಿಸಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 203 ರನ್ ಕಲೆಹಾಕಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

U19 World Cup: ಟಾಪ್ 07 ರನ್ ಸರದಾರರಲ್ಲಿ ಭಾರತದ ಏಕೈಕ ಆಟಗಾರ! ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ?
U19 World Cup: ಪಾಕಿಸ್ತಾನದ 19 ವರ್ಷಗಳ ಹಳೆಯ ದಾಖಲೆ ಧೂಳೀಪಟ ಮಾಡಿದ ಭಾರತ!