T20 World Cup: "ಕೊಹ್ಲಿ ಕಳ್ಳಾಟ": 5 ಪೆನಾಲ್ಟಿ ರನ್‌ ನೀಡದ್ದಕ್ಕೆ ಬಾಂಗ್ಲಾ ಆಟಗಾರರು ಕೆಂಡಾಮಂಡಲ

By Sharath Sharma Kalagaru  |  First Published Nov 3, 2022, 2:56 PM IST

T20 World Cup Virat Kohli fake fielding: ವಿರಾಟ್‌ ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕಳ್ಳಾಟವಾಡಿದ್ದಾರೆ ಎಂದು ಬಾಂಗ್ಲಾ ತಂಡ ಆರೋಪಿಸಿದೆ. ಐದು ಪೆನಾಲ್ಟಿ ರನ್‌ಗಳನ್ನು ನೀಡಬೇಕಿತ್ತು, ಆಗ ನಾವು ಗೆಲ್ಲುತ್ತಿದ್ದೆವು ಎಂದು ಕೀಪರ್‌ ನೂರುಲ್‌ ಹಸನ್‌ ಹೇಳಿದ್ದಾರೆ.


ಅಡಿಲೇಡ್‌: ವಿರಾಟ್‌ ಕೊಹ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕಳ್ಳಾಟವಾಡಿದ್ದಾರೆ ಎಂದು ಬಾಂಗ್ಲಾದೇಶ ತಂಡ ಆರೋಪಿಸಿದೆ. ನ್ಯಾಯವಾಗಿ ಕೊಹ್ಲಿ ಮಾಡಿದ ತಪ್ಪಿಗೆ ಬಾಂಗ್ಲಾ ತಂಡಕ್ಕೆ ಐದು ರನ್‌ ನೀಡಬೇಕಿತ್ತು ಎಂದು ವಿಕೆಟ್‌ ಕೀಪರ್‌ ನೂರುಲ್‌ ಹಸನ್‌ ಆರೋಪಿಸಿದ್ದಾರೆ. ಫೀಲ್ಡಿಂಗ್‌ ವೇಳೆ ಬಾಲ್‌ ಅವರ ಕೈಯಲ್ಲಿಲ್ಲದಿದ್ದರೂ ಎಸೆಯುವ ನಾಟಕವನ್ನು ವಿರಾಟ್‌ ಕೊಹ್ಲಿ ಮಾಡಿದ್ದರು. ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ಮಾಡಿದರೆ, ಅಡ್ಡ ಬಂದರೆ ಅಥವಾ ರನ್‌ ತೆಗೆದುಕೊಳ್ಳಲು ಸಮಸ್ಯೆ ಮಾಡಿದರೆ ಅದಕ್ಕೆ ಪೆನಾಲ್ಟಿಯಾಗಿ ಐದು ರನ್‌ ನೀಡಲಾಗುತ್ತದೆ. ಐಸಿಸಿ ನಿಯಮಾವಳಿಯ 41.5 ಪ್ರಕಾರ ಇದು ಅನ್ವಯವಾಗುತ್ತದೆ. ಆದರೆ ವಿರಾಟ್‌ ಫೀಲ್ಡಿಂಗ್‌ ಮಾಡುವಾಗ ಆಡಿದ ನಾಟಕವನ್ನು ಸ್ಟ್ರೈಕ್‌ ಮತ್ತು ನಾನ್‌ ಸ್ಟ್ರೈಕ್‌ನಲ್ಲಿದ್ದ ಇಬ್ಬರೂ ಬ್ಯಾಟರ್‌ಗಳು ವಿರಾಟ್‌ರನ್ನು ನೋಡಿಯೇ ಇಲ್ಲ. ಅವರು ನೋಡದಿದ್ದ ಮೇಲೆ ಅವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದೇ ಅರ್ಥ. ಇದೇ ಕಾರಣಕ್ಕೆ ವಿರಾಟ್‌ ಮಾಡಿದ ಕೆಲಸಕ್ಕೆ ಪೆನಾಲ್ಟಿ ರನ್‌ ನೀಡಿಲ್ಲ. 

"ಮಳೆ ಬಂದ ನಂತರ ಔಟ್‌ಫೀಲ್ಡ್‌ ತುಂಬಾ ಒದ್ದೆಯಾಗಿತ್ತು. ಇದು ನಮಗೆ ಸಾಕಷ್ಟು ತೊಂದರೆ ಕೊಟ್ಟಿತು. ವಿರಾಟ್‌ ಕೊಹ್ಲಿ ಫೇಕ್‌ ಫೀಲ್ಡಿಂಗ್‌ನಿಂದ ನಮಗೆ ಐದು ರನ್‌ ಪೆನಾಲ್ಟಿ ಸಿಗಬೇಕಿತ್ತು. ಆದರೆ ಅದು ಕೂಡ ನಮಗೆ ಸಿಗಲಿಲ್ಲ," ಎಂದು ಪಂದ್ಯದ ಬಳಿಕ ನೂರುಲ್‌ ಹಸನ್‌ ಅಂಪೈರ್‌ಗಳಾದ ಕ್ರಿಸ್‌ ಬ್ರೌನ್‌ ಮತ್ತು ಮರಾಯ್ಸ್‌ ಎರಾಸ್ಮಸ್‌ ವಿರುದ್ಧ ಕಿಡಿಕಾರಿದರು. 

Latest Videos

ಪಂದ್ಯದ ಏಳನೇ ಓವರ್‌ನಲ್ಲಿ ಲಿಟನ್‌ ದಾಸ್‌ ಸ್ಕ್ವೇರ್‌ ಲೆಗ್‌ ಕಡೆಗೆ ಹೊಡೆದು ಎರಡು ರನ್‌ ಕದಿಯುತ್ತಾರೆ. ಈ ವೇಳೆ ಅರ್ಶದೀಪ್‌ ಸಿಂಗ್‌ ಬಾಲ್‌ ಹಿಡಿದು ವಿಕೆಟ್‌ ಕೀಪರ್‌ ಕಡೆಗೆ ಎಸೆಯುತ್ತಾರೆ. ಆದರೆ ಅದಕ್ಕೂ ಮುನ್ನ ತಾವೇ ಹಿಡಿದು ಎಸೆಯುತ್ತಿರುವಂತೆ ಆಟಗಾರರನ್ನು ಕನ್ಫ್ಯೂಸ್‌ ಮಾಡಲು ವಿರಾಟ್‌ ಕೊಹ್ಲಿ ಬಾಲ್‌ ಎಸೆದಂತೆ ಮಾಡುತ್ತಾರೆ. ಇದು ಐಸಿಸಿ ನಿಯಮಾವಳಿಯ ಪ್ರಕಾರ ತಪ್ಪೇ. ಆದರೆ ಅದನ್ನು ಬ್ಯಾಟರ್‌ಗಳು ನೋಡದಿದ್ದಾಗ ಅವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದೇ ಅರ್ಥ. ಈ ಕಾರಣಕ್ಕಾಗಿಯೇ ಪೆನಾಲ್ಟಿ ರನ್‌ ನೀಡಿಲ್ಲ. 

 

or not ??? pic.twitter.com/1Z25J8WVDV

— Muhammad Shehroz 🇵🇰 (@Iam_Shehroz)

undefined

ಈಗ ನೂರುಲ್‌ ಹಸನ್‌ ಆಡಿದ ಮಾತುಗಳು ಅವರ ವಿರುದ್ಧವೇ ಹೋಗುವ ಸಾಧ್ಯತೆಯಿದೆ. ಅಂಪೈರ್‌ಗಳನ್ನು ಪ್ರಶ್ನಿಸಿರುವುದಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಅವರಿಗೆ ಫೈನ್‌ ಕೂಡ ಹಾಕುವ ಸಾಧ್ಯತೆಯಿದೆ ಎನ್ನಲಾಗಿದೆ.

ಕುತೂಹಲ ಹಂತ ತಲುಪಿದ್ದ ಪಂದ್ಯ:

ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಟೀಂ ಇಂಡಿಯಾ 5 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಸೂಪರ್ 12 ಹಂತದ ಗ್ರೂಪ್ 2 ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಿದ್ದು ಸೆಮೀಸ್‌ಗೆ ಮತ್ತಷ್ಟು ಹತ್ತಿರವಾಗಿದೆ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 184 ರನ್ ಕಲೆಹಾಕುವ ಮೂಲಕ ಬಾಂಗ್ಲಾದೇಶಕ್ಕೆ ಸವಾಲಿನ ಗುರಿ ನೀಡಿತು. ಮಳೆಯಿಂದಾಗಿ 151 ರನ್‌ಗಳ ಸವಾಲಿನ ಗುರಿ ಪಡೆದ ಬಾಂಗ್ಲಾದೇಶ ತಂಡವು ದಿಟ್ಟ ಹೋರಾಟ ನಡೆಸಿತಾದರೂ 6 ವಿಕೆಟ್ ಕಳೆದುಕೊಂಡು 145 ರನ್ ಬಾರಿಸುವ ಮೂಲಕ ರೋಚಕ ಸೋಲು ಅನುಭವಿಸಿತು. 

ಭಾರತ ನೀಡಿದ್ದ ಕಠಿಣ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಪವರ್‌ ಪ್ಲೇನಲ್ಲೇ ಮೊದಲ ವಿಕೆಟ್‌ಗೆ 60 ರನ್‌ಗಳ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭ ಒದಗಿಸಿಕೊಟ್ಟರು. ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ಲಿಟನ್ ದಾಸ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಭಾರತೀಯ ಬೌಲರ್‌ಗಳು ಕಂಗಾಲಾಗುವಂತೆ ಮಾಡಿದರು. 7 ಓವರ್ ಅಂತ್ಯದ ವೇಳೆಗೆ ಬಾಂಗ್ಲಾದೇಶ ತಂಡವು ವಿಕೆಟ್‌ ನಷ್ಟವಿಲ್ಲದೇ 66 ರನ್‌ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. 

ಪರಿಷ್ಕೃತ ಗುರಿ ಪಡೆದ ಬಾಂಗ್ಲಾಗೆ ಟೀಂ ಇಂಡಿಯಾ ಶಾಕ್: 20 ನಿಮಿಷಗಳ ಕಾಲ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಬಾಂಗ್ಲಾದೇಶ ತಂಡಕ್ಕೆ ಗೆಲ್ಲಲು 16 ಓವರ್‌ಗಳಲ್ಲಿ 151 ರನ್‌ಗಳ ಗುರಿ ನೀಡಲಾಯಿತು. ಇದರ ಲಾಭ ಪಡೆದ ಟೀಂ ಇಂಡಿಯಾ, ಆಕ್ರಮಣಕಾರಿಯಾಟದ ಮೂಲಕ ಬಾಂಗ್ಲಾದೇಶದ ಮೇಲೆ ಒತ್ತಡ ಹೇರಲಾರಂಭಿಸಿತು. 

ಪರಿಷ್ಕೃತ ಗುರಿ ಪಡೆದು ಕ್ರೀಸ್‌ಗಿಳಿದ ಬಾಂಗ್ಲಾದೇಶ ತಂಡವು ಎರಡನೇ ಎಸೆತದಲ್ಲೇ ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಲಿಟನ್ ದಾಸ್ ವಿಕೆಟ್ ಕಳೆದುಕೊಂಡಿತು. ಲಿಟನ್ ದಾಸ್ ಎರಡನೇ ರನ್ ಓಡುವ ಪ್ರಯತ್ನದಲ್ಲಿ ರಾಹುಲ್ ಎಸೆದ ಡೈರೆಕ್ಟ್‌ ಹಿಟ್‌ನಿಂದಾಗಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ಲಿಟನ್ ದಾಸ್ ಕೇವಲ 27 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 60 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಲಿಟನ್ ದಾಸ್ ರನೌಟ್ ಪಂದ್ಯದ ದಿಕ್ಕನ್ನೇ ಬದಲಿಸಿಬಿಟ್ಟಿತು. ಲಿಟನ್ ದಾಸ್ ವಿಕೆಟ್ ಪತನದ ಬಳಿಕ ಬಾಂಗ್ಲಾದೇಶ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು.

ಇದನ್ನೂ ಓದಿ: T20 World Cup ಬಾಂಗ್ಲಾದೇಶಕ್ಕೆ ಪರಿಷ್ಕೃತ ಗುರಿ..! ಪಂದ್ಯ ಕೆಲವೇ ಕ್ಷಣಗಣಗಳಲ್ಲಿ ಆರಂಭ

ಇನ್ನು 10ನೇ ಓವರ್‌ನ ಮೊದಲ ಎಸೆತದಲ್ಲಿ ಶಾಂಟೋ ಅವರನ್ನು ಬಲಿಪಡೆಯುವಲ್ಲಿ ವೇಗಿ ಮೊಹಮ್ಮದ್ ಶಮಿ ಯಶಸ್ವಿಯಾದರು. ಇನ್ನು 12ನೇ ಓವರ್‌ನಲ್ಲಿ ಆರ್ಶದೀಪ್ ಸಿಂಗ್, ಆಫಿಫ್ ಹೊಸೈನ್ ಹಾಗೂ ಶಕೀಬ್ ಅಲ್ ಹಸನ್ ಅವರನ್ನು ಬಲಿಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಇದರ ಬೆನ್ನಲ್ಲೇ 13ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ, ಯಾಸಿರ್ ಅಲಿ ಹಾಗೂ ಮೊಸದೆಕ್ ಹೊಸೈನ್ ಅವರನ್ನು ಬಲಿಪಡೆಯುವ ಮೂಲಕ ಭಾರತಕ್ಕೆ ಮೇಲುಗೈ ತಂದುಕೊಟ್ಟರು

ಕೊನೆಯ ಎರಡು ಓವರ್‌ಗಳಲ್ಲಿ ಬಾಂಗ್ಲಾದೇಶ ಗೆಲ್ಲಲು 31 ರನ್‌ಗಳ ಅಗತ್ಯವಿತ್ತು. 15ನೇ ಓವರ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ 11 ರನ್ ಬಿಟ್ಟುಕೊಟ್ಟರು. ಹೀಗಾಗಿ ಕೊನೆಯ ಓವರ್‌ನಲ್ಲಿ ಬಾಂಗ್ಲಾಗೆ ಗೆಲ್ಲಲು 20 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತುಕೊಂಡ ಆರ್ಶದೀಪ್ ಸಿಂಗ್ ಮೊದಲ ಎಸೆತದಲ್ಲಿ ಒಂದು ರನ್ ನೀಡಿದರು. ಆದರೆ ಎರಡನೇ ಎಸೆತದಲ್ಲಿ ನೂರುಲ್ ಹಸನ್ ಡೀಪ್ ಸ್ಕ್ವೇರ್‌ನತ್ತ ಸಿಕ್ಸರ್ ಚಚ್ಚಿದರು. ಇನ್ನು ಮೂರನೇ ಎಸೆತದಲ್ಲಿ ಆರ್ಶದೀಪ್ ಸಿಂಗ್ ಯಾವುದೇ ರನ್ ನೀಡಲಿಲ್ಲ. ಹೀಗಾಗಿ ಕೊನೆಯ 3 ಎಸೆತಗಳಲ್ಲಿ 13 ರನ್‌ಗಳ ಅಗತ್ಯವಿತ್ತು. ನಾಲ್ಕನೇ ಎಸೆತದಲ್ಲಿ ನೂರುಲ್ ಹಸನ್ 2 ರನ್ ಗಳಿಸಿದರು. ಕೊನೆತ ಎರಡು ಎಸೆತದಲ್ಲಿ ಬಾಂಗ್ಲಾಗೆ ಗೆಲ್ಲಲು 11 ರನ್‌ಗಳ ಅಗತ್ಯವಿತ್ತು. ಆದರೆ 5ನೇ ಎಸೆತದಲ್ಲಿ ಹಸನ್ ಬೌಂಡರಿ ಬಾರಿಸಿದರು. ಹೀಗಾಗಿ ಗೆಲ್ಲಲು ಬಾಂಗ್ಲಾಗೆ 7 ರನ್‌ಗಳ ಅಗತ್ಯವಿತ್ತು. ಆದರೆ ಕೊನೆಯ ಎಸೆತದಲ್ಲಿ ಕೇವಲ ಒಂದು ರನ್ ನೀಡುವ ಮೂಲಕ ಭಾರತಕ್ಕೆ ರೋಚಕ ಜಯ ತಂದುಕೊಟ್ಟರು.

ಇದನ್ನೂ ಓದಿ: T20 WORLD CUP: ಥ್ರೋಡೌನ್‌ ಸ್ಪೆಷಲಿಸ್ಟ್‌ ಕರ್ನಾಟಕದ ರಘು ಭಾರತದ ಗೆಲುವಿನ 'ಆಫ್‌ಫೀಲ್ಡ್‌ ಹೀರೋ'!

ಭಾರತ ತಂಡದ ಪರ ಹಾರ್ದಿಕ್ ಪಾಂಡ್ಯ ಹಾಗೂ ಆರ್ಶದೀಪ್ ಸಿಂಗ್ ತಲಾ 2 ವಿಕೆಟ್ ಪಡೆದರೆ, ಅನುಭವಿ ವೇಗಿ ಮೊಹಮ್ಮದ್ ಶಮಿ ಒಂದು ವಿಕೆಟ್ ಕಬಳಿಸಿ ಮಿಂಚಿದರು.

click me!