Latest Videos

ಟಿ20 ವಿಶ್ವಕಪ್‌: ಮತ್ತೆ ಗುಡುಗಿದ ಸೂರ್ಯ, ಆಫ್ಘನ್ನರಿಗೆ ಕಠಿಣ ಗುರಿ ಕೊಟ್ಟ ಭಾರತ..!

By Naveen KodaseFirst Published Jun 20, 2024, 9:52 PM IST
Highlights

ಇಲ್ಲಿನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಭಾರತ ಉತ್ತಮ ಆರಂಭ ಪಡೆಯಲು ವಿಫಲವಾಯಿತು.

ಬ್ರಿಡ್ಜ್‌ಟೌನ್ (ಬಾರ್ಬಡೊಸ್): ಆರಂಭಿಕ ಆಘಾತದ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ, ಸೂಪರ್ 8 ಹಂತದಲ್ಲಿ ಆಫ್ಘಾನಿಸ್ತಾನ ಎದುರು ಸವಾಲಿನ ಮೊತ್ತ ಕಲೆಹಾಕಿದೆ. ಸೂರ್ಯ ಬಾರಿಸಿದ ಸತತ ಎರಡನೇ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 181 ರನ್ ಬಾರಿಸಿದ್ದು, ಆಫ್ಘಾನಿಸ್ತಾನ ತಂಡಕ್ಕೆ ಕಠಿಣ ಗುರಿ ನೀಡಿದೆ.

ಇಲ್ಲಿನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಭಾರತ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮೂರನೇ ಓವರ್‌ನಲ್ಲೇ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಸಾಕಷ್ಟು ರಕ್ಷಣಾತ್ಮಕ ಆಡುವ ಯತ್ನದಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ 13  ಎಸೆತಗಳನ್ನು ಎದುರಿಸಿ ಕೇವಲ 8 ರನ್‌ ಗಳಿಸಿ ಫಜಲ್‌ಹಕ್ ಫಾರೂಕಿಗೆ ವಿಕೆಟ್ ಒಪ್ಪಿಸಿದರು.

T20 World Cup 2024: ಟಾಸ್‌ ಗೆದ್ದ ಭಾರತ ತಂಡ ಬ್ಯಾಟಿಂಗ್‌ ಆಯ್ಕೆ

ಇನ್ನು ರೋಹಿತ್ ವಿಕೆಟ್ ಪತನದ ಬೆನ್ನಲ್ಲೇ ಕ್ರೀಸ್‌ಗಿಳಿದ ರಿಷಭ್ ಪಂತ್ ಕೇವಲ 11 ಎಸೆತಗಳಲ್ಲಿ 20 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಎರಡಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. 100ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಕೊಹ್ಲಿ 24 ಎಸೆತಗಳಲ್ಲಿ 24 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. ಶಿವಂ ದುಬೆ ಬ್ಯಾಟಿಂಗ್ ಕೇವಲ 10 ರನ್‌ಗಳಿಗೆ ಸೀಮಿತವಾಯಿತು.

Innings break!

A blazing counter-attacking fifty from powers to 181/8 👏👏

Over to our bowlers 💪

Scorecard ▶️ https://t.co/xtWkPFabs5 | pic.twitter.com/yvuQbiVbN2

— BCCI (@BCCI)

ಸೂರ್ಯ-ಪಾಂಡ್ಯ ಜುಗಲ್ಬಂದಿ: 90 ರನ್‌ಗಳಿಗೆ ಅಗ್ರಕ್ರಮಾಂಕದ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಭಾರತ ಕ್ರಿಕೆಟ್ ತಂಡಕ್ಕೆ 5ನೇ ವಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಕೇವಲ 37 ಎಸೆತಗಳಲ್ಲಿ 60 ರನ್‌ಗಳ ಅಮೂಲ್ಯ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಯುಎಸ್‌ಎ ಎದುರು ಆಕರ್ಷಕ ಅರ್ಧಶತಕ ಸಿಡಿಸಿದ್ದ ಸೂರ್ಯಕುಮಾರ್ ಯಾದವ್, ಮತ್ತೊಮ್ಮೆ ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದರು. ಕೇವಲ 28 ಎಸೆತಗಳನ್ನು ಎದುರಿಸಿದ ಸೂರ್ಯ 5 ಬೌಂಡರಿ ಹಾಗೂ 3 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ 53 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇನ್ನು ಸೂರ್ಯಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ 24 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 32 ರನ್ ಬಾರಿಸಿ ನವೀನ್ ಉಲ್ ಹಕ್‌ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಅಕ್ಷರ್ ಪಟೇಲ್ 12 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 180ರ ಗಡಿ ಮುಟ್ಟಿಸುವಲ್ಲಿ ಯಶಸ್ವಿಯಾದರು.

ಆಫ್ಘಾನಿಸ್ತಾನ ತಂಡದ ಪರ ನಾಯಕ ರಶೀದ್ ಖಾನ್ ಹಾಗೂ ಫಜಲ್‌ಹಕ್ ಫಾರೂಕಿ ತಲಾ 3 ವಿಕೆಟ್ ಪಡೆದರೆ, ನವೀನ್ ಉಲ್ ಹಕ್ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

click me!