T20 World Cup 2024: ಸೆಮೀಸ್‌ನಲ್ಲಿ ಭಾರತಕ್ಕಿಂದು ಇಂಗ್ಲೆಂಡ್ ಚಾಲೆಂಜ್; 3ನೇ ಫೈನಲ್‌ ಮೇಲೆ ಟೀಂ ಇಂಡಿಯಾ ಕಣ್ಣು

By Kannadaprabha News  |  First Published Jun 27, 2024, 8:14 AM IST

2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿಂದು ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಕಾದಾಡಲು ಸಜ್ಜಾಗಿದ್ದು, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮೂರನೇ ಬಾರಿಗೆ ಫೈನಲ್ ಪ್ರವೇಶಿಸುವ ವಿಶ್ವಾಸದಲ್ಲಿದೆ.


ಗಯಾನಾ: 2014ರ ಬಳಿಕ ಮತ್ತೊಮ್ಮೆ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಲು ಎದುರು ನೋಡುತ್ತಿರುವ ಭಾರತ ತಂಡ, ಟೂರ್ನಿಯ 2ನೇ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧ ಸೆಣಸಾಡಲಿದೆ. ಭಾರತ 3ನೇ ಬಾರಿ ಪ್ರಶಸ್ತಿ ಸುತ್ತಿಗೇರಲು ಕಾಯುತ್ತಿದ್ದರೆ, ಸತತ 2ನೇ ಸಲ ಫೈನಲ್‌ ಪ್ರವೇಶಿಸಲು ಇಂಗ್ಲೆಂಡ್‌ ಕಾಯುತ್ತಿದೆ.

ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ಗೇರಿದ್ದ ಭಾರತ ಈ ಸಲ ಚುಟುಕು ಕ್ರಿಕೆಟ್‌ ವಿಶ್ವಕಪ್‌ನಲ್ಲೂ ಅಮೋಘ ಪ್ರದರ್ಶನ ತೋರಿದೆ. ಗುಂಪು ಹಂತದಲ್ಲಿ ಐರ್ಲೆಂಡ್‌, ಪಾಕಿಸ್ತಾನ ಹಾಗೂ ಅಮೆರಿಕವನ್ನು ಸೋಲಿಸಿದ್ದ ತಂಡ, ಸೂಪರ್‌-8 ಹಂತದಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾವನ್ನು ಮಣಿಸಿ ಅಜೇಯವಾಗಿ ಉಳಿದಿದೆ.

Tap to resize

Latest Videos

undefined

ಟಿ20 ವಿಶ್ವಕಪ್ ಫೈನಲ್‌ಗೆ ಬಂದು ಕಪ್ ಗೆಲ್ಲದ ನತದೃಷ್ಟ ತಂಡ ಇದೊಂದೇ...!

ಆಸೀಸ್‌ ವಿರುದ್ಧ ಅಬ್ಬರಿಸಿದ್ದ ರೋಹಿತ್‌ ಶರ್ಮಾ, ಟೂರ್ನಿಯುದ್ದಕ್ಕೂ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿರುವ ವೇಗಿ ಬೂಮ್ರಾ, ರಿಷಭ್‌ ಪಂತ್‌, ಸೂರ್ಯಕುಮಾರ್‌, ಕುಲ್ದೀಪ್‌ ಯಾದವ್ ಮೇಲೆ ಭಾರತ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಆದರೆ ವಿರಾಟ್‌ ಕೊಹ್ಲಿಯ ವೈಫಲ್ಯ ತಂಡಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಈ ಪಂದ್ಯದಲ್ಲಾದರೂ ದೊಡ್ಡ ಇನ್ನಿಂಗ್ಸ್‌ ಮೂಡಿಬರಬಹುದೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಮತ್ತೊಂದೆಡೆ ಗುಂಪು ಹಂತದಲ್ಲೇ ಹೊರಬೀಳುವ ಆತಂಕಕ್ಕೆ ಗುರಿಯಾಗಿದ್ದರೂ ಸೆಮಿಫೈನಲ್ ಪ್ರವೇಶಿಸಿರುವ ಇಂಗ್ಲೆಂಡ್‌, ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಜೋಸ್‌ ಬಟ್ಲರ್‌, ಫಿಲ್‌ ಸಾಲ್ಟ್ ಅಬ್ಬರಿಸುತ್ತಿದ್ದು, ಹ್ಯಾರಿ ಬ್ರೂಕ್‌, ಬೇರ್‌ಸ್ಟೋವ್‌ ಕೂಡಾ ಉತ್ತಮ ಲಯದಲ್ಲಿದ್ದಾರೆ. ವೇಗಿ ಜೋಫ್ರಾ ಆರ್ಚರ್‌, ಸ್ಪಿನ್ನರ್‌ ಆದಿಲ್‌ ರಶೀದ್‌ ತಂಡದ ಟ್ರಂಪ್‌ಕಾರ್ಡ್ಸ್‌ ಎನಿಸಿಕೊಂಡಿದ್ದು, ಭಾರತೀಯ ಬೌಲರ್‌ಗಳಿಗೆ ಕಠಿಣ ಸವಾಲು ಎದುರಾಗುವುದು ಖಚಿತ.

T20 World Cup 2024: ಎರಡೂ ಸೆಮಿಫೈನಲ್ ರದ್ದಾದ್ರೆ ಫೈನಲ್‌ಗೆ ಹೋಗೋರು ಯಾರು..?

ಒಟ್ಟು ಮುಖಾಮುಖಿ: 23

ಭಾರತ: 12

ಇಂಗ್ಲೆಂಡ್‌: 11

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌(ನಾಯಕ), ಕೊಹ್ಲಿ, ರಿಷಭ್‌, ಸೂರ್ಯಕುಮಾರ್‌, ಶಿವಂ ದುಬೆ, ಹಾರ್ದಿಕ್‌, ಅಕ್ಷರ್‌, ಜಡೇಜಾ, ಕುಲ್ದೀಪ್‌, ಬೂಮ್ರಾ, ಅರ್ಶ್‌ದೀಪ್‌,

ಇಂಗ್ಲೆಂಡ್‌: ಬಟ್ಲರ್‌(ನಾಯಕ), ಸಾಲ್ಟ್‌, ಬೇರ್‌ಸ್ಟೋವ್‌, ಬ್ರೂಕ್‌, ಮೊಯೀನ್‌, ಲಿವಿಂಗ್‌ಸ್ಟೋನ್, ಕರ್ರನ್‌, ಜೊರ್ಡನ್‌, ಆರ್ಷರ್‌, ರಶೀದ್, ರೀಸ್‌ ಟಾಪ್ಲಿ.

ಪಂದ್ಯ ಆರಂಭ: ರಾತ್ರಿ 8 ಗಂಟೆಗೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌

ಪಿಚ್‌ ರಿಪೋರ್ಟ್‌

ಗಯಾನ ಕ್ರೀಡಾಂಗಣದ ಪಿಚ್‌ ಸ್ಪಿನ್ನರ್‌ಗಳ ಪಾಲಿನ ಸ್ವರ್ಗ. ಇಲ್ಲಿ ಹೆಚ್ಚಿನ ತಿರುವು ಇರಲಿದ್ದು, ರನ್‌ ಗಳಿಸುವುದು ಕಷ್ಟವಾಗಬಹುದು. ಆದರೆ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.

ಮೀಸಲು ದಿನವಿಲ್ಲ: ಮಳೆಗೆ ರದ್ದಾದ್ರೆ ಭಾರತ ಫೈನಲ್‌ಗೆ!

ಗಯಾನಾದಲ್ಲಿ ಬುಧವಾರ ಮಳೆ ಮುನ್ಸೂಚನೆ ಇದ್ದು, ಭಾರತ-ಇಂಗ್ಲೆಂಡ್‌ ಪಂದ್ಯಕ್ಕೂ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ. ಆದರೆ ಪಂದ್ಯಕ್ಕೆ ಮೀಸಲು ದಿನ ಇಲ್ಲ. ಇದು ಬೆಳಗ್ಗಿನ ಪಂದ್ಯವಾಗಿದ್ದು, ಹೀಗಾಗಿ ಪಂದ್ಯ ಮುಕ್ತಾಯಗೊಳಿಸಲು ಹೆಚ್ಚುವರಿ 250 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಅದರಲ್ಲೂ ಫಲಿತಾಂಶ ಸಾಧ್ಯವಾಗದೆ ಇದ್ದರೆ, ಸೂಪರ್‌-8 ಹಂತದ ಗುಂಪು-1ರಲ್ಲಿ ಅಗ್ರಸ್ಥಾನ ಪಡೆದ ಭಾರತ ಫೈನಲ್‌ಗೇರಲಿದೆ. ಗುಂಪು-2ರಲ್ಲಿದ್ದ ಇಂಗ್ಲೆಂಡ್‌ 2ನೇ ಸ್ಥಾನಿಯಾಗಿ ಸೆಮಿಫೈನಲ್‌ ಪ್ರವೇಶಿಸಿತ್ತು.

ಕಳೆದ ಬಾರಿ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಸೋತಿದ್ದ ಭಾರತ

ಭಾರತ ತಂಡ ಕಳೆದ ವರ್ಷ ಟೂರ್ನಿಯಲ್ಲೂ ಸೆಮಿಫೈನಲ್‌ ಪ್ರವೇಶಿಸಿತ್ತು. ಆದರೆ ಸೆಮೀಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ಗಳಿಂದ ಹೀನಾಯ ಸೋಲನುಭವಿಸಿತ್ತು. ಈ ಬಾರಿ ಭಾರತ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ.
 

click me!