ಟಾಸ್ ಗೆದ್ದು ಮೊದಲು ಫೀಲ್ಡ್ ಮಾಡಿದ ಪಾಕಿಸ್ತಾನ, ಆರೋನ್ ಜಾನ್ಸನ್ (52)ರ ಅರ್ಧಶತಕದ ಹೊರತಾಗಿಯೂ ಕೆನಡಾವನ್ನು 20 ಓವರಲ್ಲಿ 7 ವಿಕೆಟ್‌ಗೆ 106 ರನ್‌ಗೆ ಕಟ್ಟಿಹಾಕಿತು. ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ ನಿರೀಕ್ಷಿತ ವೇಗದಲ್ಲಿ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ
ನ್ಯೂಯಾರ್ಕ್: 2024ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮೊದಲ ಜಯ ಸಾಧಿಸಿದೆ. ಮಂಗಳವಾರ ನಡೆದ 'ಎ' ಗುಂಪಿನ ಕೆನಡಾ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆದ್ದ ಪಾಕಿಸ್ತಾನ, ಸೂಪರ್ -8 ಹಂತಕ್ಕೆ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ತಂಡಕ್ಕೆ ಐರ್ಲೆಂಡ್ ವಿರುದ್ಧ ಜೂ.16ರಂದು ಪಂದ್ಯ ಬಾಕಿ ಇದ್ದು, ಆ ಪಂದ್ಯದಲ್ಲಿ ಗೆದ್ದು ಉಳಿದ ಫಲಿತಾಂಶಗಳು ತನ್ನ ಪರವಾಗಿ ಬಂದರೆ, ಪಾಕ್ ಮುಂದಿನ ಹಂತಕ್ಕೆ ಪ್ರವೇಶಿಸಬಹುದು.
ಟಾಸ್ ಗೆದ್ದು ಮೊದಲು ಫೀಲ್ಡ್ ಮಾಡಿದ ಪಾಕಿಸ್ತಾನ, ಆರೋನ್ ಜಾನ್ಸನ್ (52)ರ ಅರ್ಧಶತಕದ ಹೊರತಾಗಿಯೂ ಕೆನಡಾವನ್ನು 20 ಓವರಲ್ಲಿ 7 ವಿಕೆಟ್‌ಗೆ 106 ರನ್‌ಗೆ ಕಟ್ಟಿಹಾಕಿತು. ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ ನಿರೀಕ್ಷಿತ ವೇಗದಲ್ಲಿ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ.ಆರಂಭದಲ್ಲೇ ಸೈಮ್ ಅಯುಬ್ (06) ವಿಕೆಟ್ ಕಳೆದುಕೊಂಡರೂ, 2ನೇ ವಿಕೆಟ್‌ಗೆ ಮೊಹಮದ್ ರಿಜ್ವಾನ್ ಹಾಗೂ ನಾಯಕ ಬಾಬರ್ ಆಜಂ, 63 ರನ್ ಸೇರಿಸಿ ತಂಡವನ್ನು ಜಯದತ್ತ ಕೊಂಡೊಯ್ದರು. 33 ಎಸೆತದಲ್ಲಿ 33 ರನ್ ಗಳಿಸಿ ಬಾಬರ್ ಔಟಾದರೂ, ರಿಜ್ವಾನ್ ಔಟಾಗದೆ 53 ರನ್ ಗಳಿಸಿ ತಂಡವನ್ನು ಜಯದ ದಡ ಸೇರಿಸಿದರು.
ಭಾರತ ಎದುರು ಸೋಲಿನ ಬೆನ್ನಲ್ಲೇ ಪಾಕ್ ಆಟಗಾರರಿಗೆ ಖಡಕ್ ವಾರ್ನಿಂಗ್ ಕೊಟ್ಟ ಗ್ಯಾರಿ ಕರ್ಸ್ಟನ್..!
ಸ್ಕೋರ್:
ಕೆನಡಾ 20 ಓವರಲ್ಲಿ 106/7 (ಜಾನ್ಸನ್ 52, ಕಲೀಂ 13*, ಅಮೀರ್ 2-13)
ಪಾಕಿಸ್ತಾನ 17.3 ಓವರಲ್ಲಿ 107/3 (ರಿಜ್ವಾನ್ 53*, ಬಾಬರ್ 33, ಡಿಲೊನ್ 2-18)
ಪಂದ್ಯಶ್ರೇಷ್ಠ: ಅಮೀರ್
ಬಂಗಾಳ ಕ್ರಿಕೆಟ್ ಟೀಂಗೆ ವಾಪಸಾದ ಸಾಹ!
ಕೋಲ್ಕತಾ: ಬಂಗಾಳ ಕ್ರಿಕೆಟ್ ಮಂಡಳಿ ಅಧಿಕಾರಿಗಳ ಜೊತೆ ಕಿತ್ತಾಡಿಕೊಂಡು ತ್ರಿಪುರಾಕ್ಕೆ ವಲಸೆ ಹೋಗಿದ್ದ ಭಾರತದ ಮಾಜಿ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ, 2 ವರ್ಷ ಬಳಿಕ ತಮ್ಮ ತವರು ತಂಡಕ್ಕೆ ವಾಪಸಾಗಿದ್ದಾರೆ. ಮಂಗಳವಾರ ಅಧಿಕೃತವಾಗಿ ಈ ಕುರಿತು ಘೋಷಿಸಿದ ಸಾಹ, ಭಾರತದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಜೊತೆ ಸ್ನೇಹಾರ್ಥ ಸಭೆಯ ಬಳಿಕ ಬಂಗಾಳ ತಂಡಕ್ಕೆ ವಾಪಸಾಗಿದ್ದು, ಈ ಋತುವಿನ ದೇಸಿ ಕ್ರಿಕೆಟ್‌ನಲ್ಲಿ ತಮ್ಮ ರಾಜ್ಯ ತಂಡವನ್ನು ಪ್ರತಿನಿಧಿಸುವುದಾಗಿ ಹೇಳಿದ್ದಾರೆ. ಮಂಗಳವಾರದಿಂದ ಆರಂಭಗೊಂಡ ಬಂಗಾಳ ಪ್ರೊ ಟಿ20 ಲೀಗ್‌ನಲ್ಲೂ ಸಾಹ ಆಡುತ್ತಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಜಿಮ್‌ಗಾಗಿ ಟೀಂ ಇಂಡಿಯಾ ಹುಡುಕಾಟ!
ನ್ಯೂಯರ್ಕ್: ಟಿ20 ವಿಶ್ವಕಪ್‌ನಲ್ಲಿ ಆಡಲು ಅಮೆರಿಕಕ್ಕೆ ತೆರಳಿರುವ ಭಾರತ ಕ್ರಿಕೆಟ್ ತಂಡಕ್ಕೆ ಸಾಲು ಸಾಲು ಸಮಸ್ಯೆ ಎದುರಾಗಿದೆ. ಸ್ಥಳೀಯ ಪಾರ್ಕ್‌ವೊಂದರಲ್ಲಿ ನೆಟ್ಸ್ ಅಭ್ಯಾಸ ನಡೆಸುತ್ತಿದ್ದ ತಂಡ, ವರ್ಕೌಟ್ ಮಾಡಲು ಜಿಮ್‌ಗಾಗಿ ಹುಡುಕಾಟ ನಡೆಸಬೇಕಾಯಿತು ಎನ್ನುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.
ನ್ಯೂಯಾರ್ಕ್‌ನ ನಾಸೌ ಕ್ರೀಡಾಂಗಣದ ಸಮೀಪವೇ ಹೋಟೆಲ್‌ವೊಂದರಲ್ಲಿ ಭಾರತ ತಂಡ ವಾಸ್ತವ್ಯ ಹೂಡಿದ್ದು, ಆ ಹೋಟೆಲ್‌ನಲ್ಲಿರುವ ಜಿಮ್‌ನಲ್ಲಿ ಸೂಕ್ತ ವ್ಯವಸ್ಥೆ ಇಲ್ಲ ಎಂದು ತಿಳಿದುಬಂದಿದೆ. ಆಟಗಾರರಿಗೆ ಬೇಕಿರುವ ಉಪಕರಣಗಳು ಲಭ್ಯವಿಲ್ಲದ ಕಾರಣ, ನ್ಯೂಯಾರ್ಕ್ ನಗರದಲ್ಲಿರುವ ಪ್ರತಿಷ್ಠಿತ ಖಾಸಗಿ ಜಿಮ್‌ನ ಸದಸ್ಯತ್ವ ಪಡೆದು ಆಟಗಾರರು ವರ್ಕೌಟ್ ನಡೆಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಟಿ20 ವಿಶ್ವಕಪ್ ನಡೆಯುತ್ತಿದ್ದು, ಆಯೋಜಕರು ಬಹುತೇಕ ತಂಡಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಭಾರತ ತಂಡದಿಂದಲೂ ಅಸಮಾಧಾನ ವ್ಯಕ್ತವಾಗಿದೆಯಾದರೂ, ಐಸಿಸಿಗೆ ಅಧಿಕೃತವಾಗಿ ದೂರು ಸಲ್ಲಿಕೆಯಾಗಿಲ್ಲ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳ ವರದಿಯಲ್ಲಿ ಹೇಳಲಾಗಿದೆ.