
ಬೆಂಗಳೂರು: ಭಾರತ ವಿಶ್ವಕಪ್ ಗೆದ್ದಿದೆ. ಆಟಗಾರರು ಎಲ್ಲರ ಕಣ್ಣಿಗೂ ಹೀರೋಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಟೀಂ ಇಂಡಿಯಾದ ಈ ಬಾರಿಯ ವಿಶ್ವಕಪ್ ಗೆಲುವಿನ ಹಿಂದಿನ ಸೂತ್ರಧಾರ ಮಹಾಗುರು ರಾಹುಲ್ ದ್ರಾವಿಡ್. ಒಂದು ಸಿನಿಮಾ ಹಿಟ್ ಆಗಲು ಹೀರೋ, ಹೀರೋಯಿನ್ ಹೇಗೆ ಮುಖ್ಯವೋ, ಡೈರೆಕ್ಟರ್ ಕೂಡ ಅಷ್ಟೇ ಮುಖ್ಯ. ಟೀಂ ಇಂಡಿಯಾದ ಈ ಗೆಲುವಿನ ‘ಸಿನಿಮಾ’ದ ಡೈರೆಕ್ಟರ್ ಕೋಚ್ ದ್ರಾವಿಡ್. ಭಾರತಕ್ಕೆ ಟಿ20 ವಿಶ್ವಕಪ್ ಕಿರೀಟ ಗೆಲ್ಲಿಸಿಕೊಡುವ ಮೂಲಕ ದ್ರಾವಿಡ್ ಕೋಚ್ ಹುದ್ದೆಯ ಕ್ಲೈಮ್ಯಾಕ್ಸ್‌ನ್ನು ಕಲರ್‌ಫುಲ್ ಮಾಡಿದರು.
ಕನ್ನಡಿಗ ದ್ರಾವಿಡ್ ಜಾಗತಿಕ ಮಟ್ಟದ ಟೂರ್ನಿಗೆ ಯಾವ ರೀತಿ ತಂಡವನ್ನು ಸಿದ್ಧಗೊಳಿಸಿದರು? ಏನೆಲ್ಲಾ ರಣತಂತ್ರ ಅನುಸರಿಸಿದರು? ತಂಡದ ಗೆಲುವಿನ ಹಿಂದಿನ ಸೀಕ್ರೆಟ್ ಏನು? ಎಂಬುದರ ಬಗ್ಗೆ ವಿವರಣೆ, ವಿಶ್ಲೇಷಣೆ ಇಲ್ಲಿದೆ.
ಪ್ರತಿಭೆಗೆ ತಕ್ಕ ಹೊಣೆಗಾರಿಕೆ
ಈ ಬಾರಿ ವಿಶ್ವಕಪ್ ಗೆಲುವಿನ ಹಿಂದೆ ದ್ರಾವಿಡ್ ಪಾತ್ರ ಪ್ರಮುಖವಾದದ್ದು. ಅದರಲ್ಲೂ ತಮ್ಮ ಗರಡಿಯಲ್ಲೇ ಪಳಗಿದ್ದ ಹಲವು ಯುವ ಆಟಗಾರರು ತಂಡದಲ್ಲಿದ್ದ ಕಾರಣ ಅವರ ಪ್ಲಸ್-ಮೈನಸ್ ಎಲ್ಲವೂ ದ್ರಾವಿಡ್‌ಗೆ ಗೊತ್ತಿತ್ತು. ತಮ್ಮ ಜೊತೆಗೇ ಆಡಿದ ಕೆಲ ಆಟಗಾರರೂ ಈಗ ಟೀಂನಲ್ಲಿದ್ದಿದ್ದೂ ದ್ರಾವಿಡ್‌ರ ಕೆಲಸವನ್ನು ತಕ್ಕಮಟ್ಟಿಗೆ ಸುಲಭವಾಗಿಸಿತು. ಕೋಚ್ ಮಾಡಿದ ಮೊದಲ ಕೆಲಸ ಪ್ರತಿಭೆಗೆ ತಕ್ಕ ಹೊಣೆಗಾರಿಕೆ. ಯಾರಿಗೆ ಯಾವ ಜವಾಬ್ದಾರಿ ನೀಡಬೇಕಿತ್ತೋ ಅದನ್ನು ನೀಡಿ ವಿಶ್ವಕಪ್‌ಗೆ ಸಜ್ಜಗೊಳಿಸಿದ್ದರು.
ದಶಕದ ಬಳಿಕ ವಿಶ್ವಕಪ್ ಗೆದ್ದ ಭಾರತ, ದರ್ಶನ್ ಜೈಲಿಗೆ ಹೋಗಿದ್ದಕ್ಕೆ ಲಿಂಕ್ ಮಾಡಿದ ಫ್ಯಾನ್ಸ್!
ಮತ್ತೊಂದು ಬಹು ಮುಖ್ಯ ಅಂಶವೆಂದರೆ ಆಟಗಾರರಿಗೆ ಸ್ವತಂತ್ರವಾಗಿ ಆಡಲು ಬಿಟ್ಟರು. ಅವರ ಮೇಲೆ ಅನಗತ್ಯ ಒತ್ತಡ ಹೇರಲಿಲ್ಲ. ಯಾವ ಆಟಗಾರರನ್ನೂ ಕುಗ್ಗಲು ಬಿಡಲಿಲ್ಲ. ಎಲ್ಲರನ್ನೂ ಒಟ್ಟಾಗಿ ಕರೆದೊಯ್ದ ದ್ರಾವಿಡ್ ತಾವು ತೆರೆ ಮರೆಯಲ್ಲೇ ಉಳಿಯಲು ಯತ್ನಿಸಿದರು.
ವಿಶ್ವಕಪ್ ಸಿದ್ಧತೆ ಎಂದ ಪ್ರಯೋಗಶಾಲೆ!
ಕಳೆದ ವರ್ಷ ಏಕದಿನ ವಿಶ್ವಕಪ್ ಮುಂದಿಟ್ಟುಕೊಂಡು ಬ್ಯಾಟಿಂಗ್ ಕ್ರಮಾಂಕದಲ್ಲಿ ಹಲವು ಬಾರಿ ಬದಲಾವಣೆ ಮಾಡಿದ್ದ ದ್ರಾವಿಡ್, ಭಾರೀ ಟೀಕೆಗೂ ಗುರಿಯಾಗಿದ್ದರು. ಆದರೆ ಈ ಬಾರಿ ಟಿ20 ವಿಶ್ವಕಪ್‌ಗೂ ಮುನ್ನ ಐಪಿಎಲ್‌ನಲ್ಲಿ ಆಟಗಾರರ ಪ್ರದರ್ಶನ ನೋಡಿದ್ದ ದ್ರಾವಿಡ್, ನೇರವಾಗಿ ವಿಶ್ವಕಪ್‌ನಲ್ಲಿ ಅದರ ಪ್ರಯೋಗ ಮಾಡಿದರು. ವಿರಾಟ್ ಕೊಹ್ಲಿಯನ್ನು ಆರಂಭಿಕನಾಗಿ ಆಡಿಸುವ ಪ್ರಯೋಗ ಕೈಕೊಟ್ಟರೂ, ರಿಷಭ್ ಪಂತ್‌ರನ್ನು 3ನೇ ಕ್ರಮಾಂಕದಲ್ಲಿ ಆಡಿಸಿ ಯಶಸ್ವಿಯಾದರು. ಹೆಚ್ಚುವರಿ ಸ್ಪಿನ್ನರ್‌ಗಳನ್ನು ವಿಶ್ವಕಪ್ ತಂಡಕ್ಕೆ ಸೇರ್ಪಡೆಗೊಳಿಸುವ ನಿರ್ಧಾರ ಆರಂಭದಲ್ಲಿ ಟೀಕೆಗೆ ಎಡೆ ಮಾಡಿಕೊಟ್ಟರೂ, ಸ್ಪಿನ್ನರ್‌ಗಳೇ ಟ್ರೋಫಿ ಗೆಲುವಿನ ರೂವಾರಿಗಳು ಎಂಬುದನ್ನು ತೋರಿಸಿಕೊಟ್ಟರು. ಇನ್ನು ಶಿವಂ ದುಬೆ ಅವರ ಆಯ್ಕೆ ಬಗ್ಗೆ ಟೀಕೆ ವ್ಯಕ್ತವಾದರೂ, ನಿರ್ಣಾಯಕ ಹಂತಗಳಲ್ಲಿ ದುಬೆ ಕ್ರೀಸ್‌ನಲ್ಲಿ ನೆಲೆಯೂರಿ ನೀಡಿದ ರನ್ ಕೊಡುಗೆ ತಂಡಕ್ಕೆ ಬಹುಮುಖ್ಯ ಎನಿಸಿತು.
ಟೀಕೆಗಳಿಗೆ ಜಗ್ಗದೆ, ಕುಗ್ಗದೆ ಕೆಲಸ!
ಬ್ಯಾಟಿಂಗ್ ಕ್ರಮಾಂಕದ ಬದಲಾವಣೆ, ಅನಗತ್ಯ ಪ್ರಯೋಗ, ಕೆಲ ಪ್ರಮುಖ ಆಟಗಾರರಿಗೆ ಕೊಕ್ ಹೀಗೆ ಪ್ರತಿ ವಿಚಾರದಲ್ಲೂ ದ್ರಾವಿಡ್ ಎದುರಿಸಬೇಕಾಗಿ ಬಂದಿದ್ದು ಬೆಟ್ಟದಷ್ಟು ಟೀಕೆ. ಆದರೆ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವ ಜಾಯಮಾನ ದ್ರಾವಿಡ್‌ರದ್ದಲ್ಲ. ತಾವು ಆಟಗಾರನಾಗಿದ್ದಾಗ ಮಾನಸಿಕವಾಗಿ ಎಷ್ಟು ಸದೃಢರಾಗಿದ್ದರೋ, ಕೋಚ್ ಆಗಿಯೂ ಅವರು ಎಷ್ಟೇ ಗಟ್ಟಿ.
ದ್ರಾವಿಡ್ ಮೊದಲೇ ‘ಗೋಡೆ’. ಗೋಡೆಗೆ ಚೆಂಡೆಸೆದರೆ ಎಸೆದವರತ್ತ ವಾಪಸ್ ಬರುತ್ತದೆ. ಕಳೆದೆರಡು ವರ್ಷಗಳಲ್ಲಿ ಅವರು ಕೋಚ್ ಆಗಿ ಟೀಕೆಗಳನ್ನು ನುಂಗಿದರು, ಟ್ರೋಲ್‌ಗಳನ್ನು ಕಡೆಗಣಿಸಿದರು, ಸವಾಲುಗಳನ್ನು ಸ್ವೀಕರಿಸಿದರು. ಹಿನ್ನಡೆಗಳನ್ನು ಮರೆತರು, ಕ್ಲಿಷ್ಟ ಸನ್ನಿವೇಶಗಳನ್ನು ತಲೆ ಎತ್ತಿ ಎದುರಿಸಿದರು, ಸ್ಪಷ್ಟ ಯೋಜನೆಗಳೊಂದಿಗೆ ಮುನ್ನಡೆದರು, ತಂಡವನ್ನು ಯಶಸ್ಸಿನತ್ತ ಮುನ್ನಡೆಸಿದರು.
ತಾವಷ್ಟೇ ಅಲ್ಲ, ತಮ್ಮ ಆಟಗಾರರು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು, ಕ್ರಿಕೆಟ್ ತಜ್ಞರ ಆಕ್ರೋಶ, ಟೀಕೆ, ಟಿಪ್ಪಣಿಗಳಿಗೆ ಒಳಗಾಗದಂತೆ ನೋಡಿಕೊಂಡರು. ಬಿಸಿಸಿಐ ಪದಾಧಿಕಾರಿಗಳು, ಮಾಜಿ ಆಟಗಾರರು, ಅಭಿಮಾನಿಗಳ ಅಸಮಾಧಾನದ ಮುಂದೆ ಕುಗ್ಗದೆ, ಮಂಡಿಯೂರದೆ ತಮ್ಮ ಹುದ್ದೆಗೆ ಎಳ್ಳಷ್ಟೂ ಧಕ್ಕೆ ಬರದಂತೆ ಕಾರ್ಯ ನಿರ್ವಹಿಸಿ ವಿಶ್ವಕಪ್ ಗೆಲುವೆಂಬ ಬ್ಲಾಕ್‌ಬಸ್ಟರ್ ನೀಡಿದರು.
ಕೋಚಿಂಗ್ ಹಾದಿ ಸುಲಭವಿರಲಿಲ್ಲ!
2021ರ ಕೊನೆಯಲ್ಲಿ ಭಾರತಕ್ಕೆ ಮುಖ್ಯ ಕೋಚ್ ಆಗಿ ನೇಮಕಗೊಂಡ ದ್ರಾವಿಡ್‌ರ ಹಾದಿ ಸುಗಮವಾಗಿರಲಿಲ್ಲ. ಐಸಿಸಿ ಟ್ರೋಫಿ ಗೆಲ್ಲಿಸಬೇಕು ಎಂಬ ಷರತ್ತಿನೊಂದಿಗೇ ಕೋಚ್ ಮಾಡಲಾಯಿತು. 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಎದುರಾದ ಸೋಲು, ದ್ರಾವಿಡ್‌ಗೆ ಹಿನ್ನಡೆ ಉಂಟು ಮಾಡಿತು. ಕಳೆದ ವರ್ಷದ ಏಕದಿನ ವಿಶ್ವಕಪ್‌ನ ಸೋಲು ಅವರನ್ನು ಮತ್ತಷ್ಟು ಕುಗ್ಗಿಸಿತ್ತು. ಆದರೆ ಎಂದಿನಂತೆ ಹೊರಗಿನ ಗದ್ದಲಗಳಿಗೆ ದ್ರಾವಿಡ್ ಕಿವಿಗೊಡಲಿಲ್ಲ. ಕೋಚ್ ಆಗಿ ಕೊನೆ ಟೂರ್ನಿಯಾಗಿದ್ದ ಟಿ20 ವಿಶ್ವಕಪ್‌ನಲ್ಲಿ ತಂಡಕ್ಕೆ ಸಮರ್ಥ ರೀತಿಯಲ್ಲಿ ಮಾರ್ಗದರ್ಶನ ನೀಡಿ ಟ್ರೋಫಿ ಗೆಲ್ಲಿಸಿಕೊಟ್ಟರು.
ನಾಯಕನಾಗಿ ಸಾಧಿಸದ್ದನ್ನು ಕೋಚ್ ಆಗಿ ಸಾಧಿಸಿದರು!
ದ್ರಾವಿಡ್‌ರ ಬದುಕಿನ ಬಗ್ಗೆ ಬಾಲಿವುಡ್‌ನಲ್ಲಿ 2007ರಲ್ಲೇ ಸಿನಿಮಾ ಹೊರಬಂದಿತ್ತಾ ಅಂತ ಅನ್ನಿಸಿದರೆ ತಪ್ಪೇನಿಲ್ಲ. ಶಾರುಖ್ ಖಾನ್‌ರ ‘ಚಕ್ ದೇ ಇಂಡಿಯಾ’ ಸಿನಿಮಾ ನೋಡಿದವರಿಗೆ ಈಗ ದ್ರಾವಿಡ್ ಬದುಕಿನ ಪಯಣ ನೆನಪಾಗಲೂಬಹುದು. 2007ರಲ್ಲಿ ದ್ರಾವಿಡ್ ನಾಯಕತ್ವದಲ್ಲಿ ಭಾರತ ವಿಶ್ವಕಪ್‌ನ ಗುಂಪು ಹಂತದಲ್ಲೇ ಹೊರಬಿದ್ದಿತ್ತು. 17 ವರ್ಷ ಬಳಿಕ ದ್ರಾವಿಡ್ ಕೋಚ್ ಆಗಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟಿದ್ದಾರೆ. ನಾಯಕನಾಗಿ ಸಾಧಿಸಲಾಗದ್ದನ್ನು ಕೋಚ್ ಆಗಿ ಸಾಧಿಸಿದ ದ್ರಾವಿಡ್ ಈಗ ನಿರಾಳರಾಗಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.