9ನೇ ಆವೃತ್ತಿ ಟಿ20 ವಿಶ್ವ ಸಮರಕ್ಕೆ ಅದ್ಧೂರಿ ತೆರೆ..! ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

By Kannadaprabha NewsFirst Published Jun 30, 2024, 10:34 AM IST
Highlights

9ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಚಾಂಪಿಯನ್ ಆಗಿ ಹೊರಹೊಮ್ಮುವುದರೊಂದಿಗೆ ಟೂರ್ನಿಗೆ ಅಧಿಕೃತ ತೆರೆ ಬಿದ್ದಿದೆ. ಈ ಟೂರ್ನಿಯ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ಬಾರ್ಬಡೊಸ್‌: ಐಪಿಎಲ್‌ ಮುಗಿದು ವಾರ ಕಳೆಯುವ ಮೊದಲೇ ಬೇಸ್‌ಬಾಲ್‌ ನಾಡು, ವಿಶ್ವದ ದೊಡ್ಡಣ ಖ್ಯಾತಿಯ ಅಮೆರಿಕದ ಮಣ್ಣಲ್ಲಿ ಶುರುವಾಗಿದ್ದ ಐಸಿಸಿ ಟಿ20 ವಿಶ್ವಕಪ್‌ ಕೆರಿಬಿಯನ್‌ ದ್ವೀಪದಲ್ಲಿ ಶನಿವಾರ ಮುಕ್ತಾಯಗೊಂಡಿದೆ. ಕ್ರಿಕೆಟ್‌ ಅಭಿಮಾನಿಗಳಿಗೆ ಭರಪೂರ ರೋಚಕತೆಯನ್ನು ಉಣಬಡಿಸುವ ಮೂಲಕ ಚಾಲನೆ ಪಡೆದಿದ್ದ ಪಂದ್ಯಾವಳಿ, ಕ್ಲೈಮ್ಯಾಕ್ಸ್‌ನಲ್ಲೂ ಕ್ರಿಕೆಟ್‌ ಅಭಿಮಾನಿಗಳನ್ನು ರಂಜಿಸಿ ತೆರೆ ಕಂಡಿದೆ. ಭಾರತ ತಂಡವು ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು 7 ರನ್ ಅಂತರದ ರೋಚಕ ಗೆಲುವು ಸಾಧಿಸುವ ಮೂಲಕ 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ಪಾಕಿಸ್ತಾನ ಸೇರಿದಂತೆ ವಿಶ್ವದ 20 ತಂಡಗಳ ನಡುವಿನ ಟೂರ್ನಿ ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನ ಒಟ್ಟು 9 ಕ್ರೀಡಾಂಗಣಗಳಲ್ಲಿ ಆಯೋಜನೆಗೊಂಡಿತು. ಟ್ರೋಫಿ ಗೆಲ್ಲುವ ನಿರೀಕ್ಷೆಯೊಂದಿಗೆ ಟೂರ್ನಿಗೆ ಕಾಲಿರಿಸಿದ್ದ ಕೆಲ ಬಲಿಷ್ಠ ತಂಡಗಳು ಗುಂಪು ಹಂತದಲ್ಲೇ ನಿರ್ಗಮಿಸಿದರೆ, ಮೊದಲ ಸುತ್ತಲ್ಲೇ ಹೊರಬೀಳಬಹುದೆಂದು ಊಹಿಸಲಾಗಿದ್ದ ಕೆಲ ತಂಡಗಳು ಸೂಪರ್‌-8, ಸೆಮಿಫೈನಲ್‌ ಪ್ರವೇಶಿಸಿ ಅಚ್ಚರಿ ಮೂಡಿಸಿದವು. ಅಮೆರಿಕ, ಕೆನಡಾ, ಉಗಾಂಡ ತಂಡಗಳು ಮೊದಲ ಬಾರಿ ಟಿ20 ವಿಶ್ವಕಪ್‌ ಆಡಿದವು.

ಗುಡ್ ಬೈ ಹೇಳಲು ಇದಕ್ಕಿಂತ ಒಳ್ಳೆ ಸಮಯ ಮತ್ತೊಂದಿಲ್ಲ: ವಿಶ್ವಕಪ್ ಗೆದ್ದ ಬೆನ್ನಲ್ಲೇ ಅಂತಾರಾಷ್ಟ್ರೀಯ ಟಿ20ಗೆ ರೋಹಿತ್ ವಿದಾಯ.!

ಟೂರ್ನಿಯುದ್ದಕ್ಕೂ ಕಡಿಮೆ ಮೊತ್ತದ ಪಂದ್ಯಗಳೇ ಹೆಚ್ಚಾದರೂ ರೋಚಕತೆಗೆ ಎಳ್ಳಷ್ಟೂ ಕೊರತೆಯಾಗಲಿಲ್ಲ. ಥ್ರಿಲ್ಲರ್‌ ಪಂದ್ಯಗಳ ನಡುವೆ ಸೂಪರ್‌ ಓವರ್‌ ಸೆಣಸಾಟಗಳೂ ಟೂರ್ನಿಯ ಕಲೆ ಹೆಚ್ಚಿಸಿತು. ಐಪಿಎಲ್‌ನಲ್ಲಿ ಬ್ಯಾಟರ್‌ಗಳ ಆರ್ಭಟವನ್ನು ಕಣ್ತುಂಬಿಕೊಂಡಿದ್ದ ಕ್ರಿಕೆಟ್‌ ಅಭಿಮಾನಿಗಳು ಈ ಬಾರಿ ಬೌಲರ್‌ಗಳ ಪರಾಕ್ರಮಕ್ಕೆ ಸಾಕ್ಷಿಯಾದರು.

𝘾𝙃𝘼𝙈𝙋𝙄𝙊𝙉𝙎 🏆🇮🇳 | pic.twitter.com/uu7zbpsW1p

— ICC (@ICC)

ಮಳೆರಾಯನದ್ದೇ ಕಾರುಬಾರು!

ಈ ಬಾರಿ ಟೂರ್ನಿಯಲ್ಲಿ ಹೆಚ್ಚು ಸದ್ದು ಮಾಡಿದ್ದೇ ಮಳೆ. ಪಂದ್ಯಾವಳಿಯ ಆರಂಭದಲ್ಲಿ ಮಳೆ ಅಷ್ಟೇನೂ ಕಾಟ ಕೊಡದಿದ್ದರೂ, ಬಳಿಕ ಹೆಚ್ಚಿನ ಪಂದ್ಯಗಳಿಗೆ ಅಡ್ಡಿಪಡಿಸಿತು. ಅದರಲ್ಲೂ ಫ್ಲೋರಿಡಾದಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಟೂರ್ನಿಯ ಪ್ರಮುಖ ಸವಾಲು ಎನಿಸಿಕೊಂಡಿತು. ಇಲ್ಲಿನ 4 ಪಂದ್ಯಗಳ ಪೈಕಿ 3 ಪಂದ್ಯಗಳು ಟಾಸ್‌ ಕೂಡಾ ಕಾಣದೆ ರದ್ದುಗೊಂಡವು. ಮಾಜಿ ಚಾಂಪಿಯನ್‌ ಪಾಕಿಸ್ತಾನ ಟೂರ್ನಿಯ ಗುಂಪು ಹಂತದಲ್ಲೇ ನಿರ್ಗಮಿಸಲು ಇದೂ ಒಂದು ನೆಪವಾಯಿತು. ನೇಪಾಳ ವಿರುದ್ಧ ಆಡಲು ಫ್ಲೋರಿಡಾಗೆ ತೆರಳಿದ್ದ ಶ್ರೀಲಂಕಾ ಆಟಗಾರರು ವಿಮಾನ ಹಾರಾಟ ಸ್ಥಗಿತಗೊಂಡಿದ್ದರಿಂದ ಅಲ್ಲೇ ಬಾಕಿಯಾಗುವಂತಾಯಿತು. ಭಾರತದ್ದು ಸೇರಿ ಟೂರ್ನಿಯಲ್ಲಿ ಒಟ್ಟು 4 ಪಂದ್ಯಗಳು ಮಳೆಯಿಂದಾಗಿ ರದ್ದುಗೊಂಡಿತು.

ಭಾರತ ಟಿ20 ವಿಶ್ವಕಪ್ ಸಾಮ್ರಾಟ; ದಶಕದ ಬಳಿಕ ಒಲಿದ ಐಸಿಸಿ ಟ್ರೋಫಿ

ದೈತ್ಯ ತಂಡಗಳ ಸಂಹಾರ

ಪ್ರತಿ ಬಾರಿಯಂತೆ ಈ ಬಾರಿಯ ಟೂರ್ನಿಯಲ್ಲೂ ಕೆಲ ದೈತ್ಯ ತಂಡಗಳ ಸಂಹಾರ ನಡೆಯಿತು. ಆತಿಥ್ಯ ರಾಷ್ಟ್ರ ಕಾರಣಕ್ಕೆ ಟೂರ್ನಿಗೆ ಕಾಲಿರಿಸಿದ್ದ ಅಮೆರಿಕ, ಗುಂಪು ಹಂತದಲ್ಲಿ ಮಾಜಿ ಚಾಂಪಿಯನ್‌ ಪಾಕಿಸ್ತಾನಕ್ಕೆ ಆಘಾತಕಾರಿ ಸೋಲುಣಿಸಿತು. 2021ರ ರನ್ನರ್‌-ಅಪ್‌ ನ್ಯೂಜಿಲೆಂಡ್‌ ತಂಡವನ್ನು ಅಫ್ಘಾನಿಸ್ತಾನ ಮಕಾಡೆ ಮಲಗಿಸಿ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿತು. 2014ರ ಚಾಂಪಿಯನ್‌ ಶ್ರೀಲಂಕಾ ತಂಡ ಬಾಂಗ್ಲಾದೇಶ ವಿರುದ್ಧ ಸೋಲುವ ಮೂಲಕ ಅಚ್ಚರಿ ಮೂಡಿಸಿತು.

ಗುಂಪು ಹಂತದಲ್ಲೇ ಫಿನಿಶ್‌ ಆದ ಬಲಾಢ್ಯ ತಂಡಗಳು!

ಟ್ರೋಫಿ ಗೆಲ್ಲುವ ಫೇವರಿಟ್ಸ್‌ ಎನಿಸಿದ್ದ ಕೆಲ ತಂಡಗಳು ಸೆಮಿಫೈನಲ್‌ಗೂ ಪ್ರವೇಶಿಸಲಿಲ್ಲ. 2009ರ ಚಾಂಪಿಯನ್‌ ಪಾಕಿಸ್ತಾನ ಗುಂಪು ಹಂತದಲ್ಲಿ 2 ಪಂದ್ಯಗಳಲ್ಲಿ ಸೋತು ಹೊರಬಿತ್ತು. ನ್ಯೂಜಿಲೆಂಡ್‌ ತಂಡ ಅಫ್ಘಾನಿಸ್ತಾನ ಹಾಗೂ ವೆಸ್ಟ್‌ಇಂಡೀಸ್‌ ವಿರುದ್ಧ ಸೋಲುವ ಮೂಲಕ ಗುಂಪು ಹಂತದಲ್ಲೇ ಅಭಿಯಾನ ಕೊನೆಗೊಳಿಸಿತು. 2014ರ ಚಾಂಪಿಯನ್‌ ಶ್ರೀಲಂಕಾ ಕೂಡಾ ಸೂಪರ್‌-8 ಪ್ರವೇಶಿಸಲಿಲ್ಲ. ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ, 2 ಬಾರಿ ಚಾಂಪಿಯನ್ ವಿಂಡೀಸ್‌ ಸೂಪರ್‌-8 ಹಂತದಲ್ಲೇ ಪಯಣ ಮುಗಿಸಿದವು. ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ತಂಡ ಗುಂಪು ಹಂತದಲ್ಲೇ ಅಭಿಯಾನ ಕೊನೆಗೊಳಿಸುವ ಭೀತಿಗೆ ಸಿಲುಕಿದ್ದರೂ, ಸೆಮಿಫೈನಲ್‌ವರೆಗೂ ತಲುಪಿತು.

ಪಿಚ್‌ಗಳ ಬಗ್ಗೆ ಟೀಕೆ

ಟೂರ್ನಿಯ ಬಹುತೇಕ ಪಂದ್ಯಗಳಿಗೆ ಆತಿಥ್ಯ ವಹಿಸಿದ್ದ ಪಿಚ್‌ಗಳ ಬಗ್ಗೆ ಕ್ರೀಡಾ ತಜ್ಞರು, ಮಾಜಿ ಕ್ರಿಕೆಟಿಗರಿಂದ ಟೀಕೆ, ಅಸಮಾಧಾನ ವ್ಯಕ್ತವಾಯಿತು. ಕೆಲ ಪಿಚ್‌ಗಳಲ್ಲಿ ಬ್ಯಾಟಿಂಗ್‌ ಅಸಾಧ್ಯ ಎನ್ನುವಂಥ ಪರಿಸ್ಥಿತಿ ಇತ್ತು. ಭಾರತ ಹಾಗೂ ಪಾಕಿಸ್ತಾನ ಪಂದ್ಯ ಸೇರಿ 8 ಪಂದ್ಯಗಳಿಗೆ ಆತಿಥ್ಯ ವಹಿಸಿದ್ದ ನ್ಯೂಯಾರ್ಕ್‌ ಕ್ರೀಡಾಂಗಣದಲ್ಲಿ ಒಟ್ಟು 16 ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ 140+ ರನ್‌ ದಾಖಲಾಗಲಿಲ್ಲ. ಟ್ರಿನಿಡಾಡ್‌ ಕ್ರೀಡಾಂಗಣದ ಪಿಚ್‌ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಸೂಕ್ತವಲ್ಲ ಎಂದೇ ಕ್ರೀಡಾ ತಜ್ಞರು ವಿಶ್ಲೇಷಿಸಿದರು. ಇಲ್ಲಿ ನಡೆದ ಕೊನೆ 4 ಪಂದ್ಯಗಳ ಮೊದಲ ಇನ್ನಿಂಗ್ಸ್‌ನಲ್ಲಿ ಒಮ್ಮೆಯೂ 100ರ ಗಡಿ ದಾಟಲಿಲ್ಲ.

ಬೌಲರ್‌ಗಳೇ ಬಾಸ್‌ ಗುರು!

ಈ ಸಲದ ವಿಶ್ವಕಪ್‌ನಲ್ಲಿ ಬೌಲರ್‌ಗಳೇ ಹೆಚ್ಚು ಸದ್ದು ಮಾಡಿದರು. ಐಪಿಎಲ್‌ನಲ್ಲಿ ಸ್ಫೋಟಕ ಆಟ, ಭರ್ಜರಿ ಸಿಕ್ಸರ್‌ಗಳನ್ನು ನೋಡಿದ್ದ ಅಭಿಮಾನಿಗಳಿಗೆ ಈ ವಿಶ್ವಕಪ್‌ ಕೊಂಚ ಬೋರ್‌ ಹೊಡೆಸಿದರೂ, ರೋಚಕತೆಗೇನೂ ಕಮ್ಮಿ ಇರಲಿಲ್ಲ. ಬಹುತೇಕ ಪಂದ್ಯಗಳಲ್ಲಿ ತಂಡದ ರನ್ 140ಕ್ಕಿಂತ ಕಡಿಮೆ ಇತ್ತು. 10 ಬಾರಿ ತಂಡಗಳು ಮೊದಲ ಇನ್ನಿಂಗ್ಸ್‌ನಲ್ಲಿ 100ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟಾದವು. ಯಾವುದೇ ಬ್ಯಾಟರ್‌ಗೂ ಶತಕ ಸಿಡಿಸಲು ಈ ಟೂರ್ನಿಯಲ್ಲಿ ಸಾಧ್ಯವಾಗಲಿಲ್ಲ. ಮೂವರು ಬ್ಯಾಟರ್‌ಗಳು ಸೆಂಚುರಿಯ ಅಂಚಿಗೆ ತಲುಪಿದರೂ, 100 ಭರ್ತಿ ಮಾಡಲಾಗಲಿಲ್ಲ. 18 ಬೌಲರ್‌ಗಳು 10ಕ್ಕಿಂತ ಹೆಚ್ಚು ವಿಕೆಟ್‌ ಕಬಳಿಸಿದ್ದು ಗಮನಾರ್ಹ.
 

click me!