2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ನೆಟ್ಟಿಗರು ದರ್ಶನ್ ತೂಗುದೀಪ ಅವರಿಗೆ ಧನ್ಯವಾದಗಳನ್ನು ಹೇಳುತ್ತಿದ್ದಾರೆ. ಯಾಕೆ ಅನ್ನೋದನ್ನು ಈ ಸ್ಟೋರಿ ಓದಿ.
ಬೆಂಗಳೂರು: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಕೊನೆಗೂ ಟೀಂ ಇಂಡಿಯಾ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಇದರ ಜತೆಗೆ ಅಜೇಯವಾಗಿಯೇ ಐಸಿಸಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಮೊದಲ ತಂಡ ಎನ್ನುವ ಹಿರಿಮೆಗೂ ರೋಹಿತ್ ಪಡೆ ಪಾತ್ರವಾಗಿದೆ. ಇನ್ನು ಇದೆಲ್ಲದರ ಜತೆಗೆ ಕ್ರಿಕೆಟ್ ಅಭಿಮಾನಿಗಳು ಸ್ಯಾಂಡಲ್‌ವುಡ್ ನಟ ಹಾಗೂ ರೇಣುಕಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ದರ್ಶನ್ ತೂಗುದೀಪ ಅವರಿಗೆ ಧನ್ಯವಾದ ಹೇಳುತ್ತಿದ್ದಾರೆ. ಅರೇ ಟೀಂ ಇಂಡಿಯಾ ಟಿ20 ವಿಶ್ವಕಪ್ ಚಾಂಪಿಯನ್ ಆದರೆ ನೆಟ್ಟಿಗರು ದರ್ಶನ್‌ಗ್ಯಾಕೆ ಥ್ಯಾಂಕ್ಸ್ ಹೇಳುತ್ತಿದ್ದಾರೆ ಎನ್ನುತ್ತೀರಾ? ಈ ಸ್ಟೋರಿ ನೋಡಿದ್ರೆ ನಿಮಗೆ ಅರ್ಥವಾಗುತ್ತದೆ.
ಹೌದು, ಟೀಂ ಇಂಡಿಯಾ ಜತೆಗೆ ದರ್ಶನ್ ಅವರ ಹೆಸರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದಕ್ಕೆ ಒಂದು ಕಾಕತಾಳೀಯವಾದ ಕಾರಣವೂ ಇದೆ. ಭಾರತ ಕ್ರಿಕೆಟ್ ತಂಡವು 2011ರಲ್ಲಿ ಕೊನೆಯ ಬಾರಿಗೆ ಐಸಿಸಿ ವಿಶ್ವಕಪ್ ಟ್ರೋಫಿ ಜಯಿಸಿತ್ತು. ಅದೇ ವರ್ಷ ವೈಯುಕ್ತಿಕ ಕಾರಣಕ್ಕಾಗಿ ನಟ ದರ್ಶನ್ ತೂಗುದೀಪ್ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದರು. ಇದೀಗ ಬರೋಬ್ಬರಿ 13 ವರ್ಷಗಳ ಕಾಯುವಿಕೆಯ ಬಳಿಕ ಟೀಂ ಇಂಡಿಯಾ ಮತ್ತೊಮ್ಮೆ ವಿಶ್ವಕಪ್ ಜಯಿಸಿದೆ. ಇನ್ನು ಕಾಕತಾಳೀಯ ಎನ್ನುವಂತೆ ದರ್ಶನ್ ಕೂಡಾ ಇದೇ ವರ್ಷ ಜೈಲು ಸೇರಿದ್ದಾರೆ. ದರ್ಶನ ಜೈಲು ಸೇರಿದ್ದರಿಂದಲೇ ಭಾರತ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿದೆ ಎನ್ನುವುದು ನೆಟ್ಟಿಗರ ಅಂಬೋಣ.
ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾವನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ
ಭಾರತ ಕ್ರಿಕೆಟ್ ತಂಡವು 1983ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಜಯಿಸಿತ್ತು. ಇದಾಗಿ 28 ವರ್ಷಗಳ ಬಳಿಕ ಅಂದರೆ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಜಯಿಸಿತ್ತು. ಟೀಂ ಇಂಡಿಯಾ 2011ರ ಏಪ್ರಿಲ್ 02ರಂದು ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನೆರೆಯ ಶ್ರೀಲಂಕಾ ತಂಡವನ್ನು ಬಗ್ಗುಬಡಿದಿತ್ತು. ಇನ್ನು ಇದಾಗಿ ಕೆಲವು ತಿಂಗಳ ಬಳಿಕ ಅಂದರೆ ಅದೇ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದರು. ಇದಾಗಿ ಕೆಲ ದಿನಗಳ ಪರಪ್ಪನಹಾರ ಜೈಲಿನಲ್ಲಿ ಕಾಲ ಕಳೆದಿದ್ದ ದರ್ಶನ್ ಆ ಬಳಿಕ ರಿಲೀಸ್ ಆಗಿದ್ದರು. ಇನ್ನು ದರ್ಶನ್ ರಿಲೀಸ್ ಬೆನ್ನಲ್ಲೇ ಬಿಡುಗಡೆಯಾದ ಸಾರಥಿ ಮೂವಿ ಸೂಪರ್ ಹಿಟ್ ಆಗುವ ಮೂಲಕ ದರ್ಶನ್‌ಗೆ ಕೆರಿಯರ್‌ಗೆ ಹೊಸ ಮೈಲೇಜ್ ತಂದುಕೊಟ್ಟಿತ್ತು.
ಇನ್ನು ಇದೀಗ ರೇಣುಕಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್ ಸದ್ಯ ಪರಪ್ಪನ ಅಗ್ರಹಾರದ ಅತಿಥಿಯಾಗಿದ್ದಾರೆ. ಇನ್ನು ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಕೂಡಾ ಬಹುತೇಕ ನಿರ್ಮಾಣದ ಹಂತದಲ್ಲಿದೆ. ಭಾರತ ಟಿ20 ವಿಶ್ವಕಪ್ ಗೆದ್ದಿದೆ, ಅದೇ ರೀತಿ ಒಂದು ವೇಳೆ ದರ್ಶನ್ ಪರಪ್ಪನ ಅಗ್ರಹಾರದಿಂದ ರಿಲೀಸ್ ಆದರೆ, ಡೆವಿಲ್ ಸಿನಿಮಾ ಕೂಡಾ ಹಿಟ್ ಆಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
