ಅಮೆರಿಕಕ್ಕೆ ತೆರಳಿದ್ದ ಮೋನಂಕ್ 2016ರಲ್ಲಿ ಚೈನೀಸ್ ರೆಸ್ಟೋರೆಂಟ್ ತೆರೆದಿದ್ದರು. ಅಲ್ಲದೆ ರಾಷ್ಟ್ರೀಯ ತಂಡದಿಂದ ಹೊರಗಿರುವಾಗ ಸ್ಥಳೀಯ ಮಕ್ಕಳಿಗೆ ಕ್ರಿಕೆಟ್ ತರಬೇತಿ ನೀಡುತ್ತಿದ್ದರು. ವಾರಾಂತ್ಯದಲ್ಲಿ ಕ್ಲಬ್ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ಡಲ್ಲಾಸ್ (ಟೆಕ್ಸಾಸ್): ಈ ಬಾರಿ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವ ತಂಡಗಳಲ್ಲಿ ಮುಂಚೂಣಿಯಲ್ಲಿರುವ ಬಲಿಷ್ಠ ಪಾಕಿಸ್ತಾನಕ್ಕೆ ಗುರುವಾರ ಅಮೆರಿಕ ಸೋಲುಣಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಟೂರ್ನಿಯ ಮೊದಲೆರಡೂ ಪಂದ್ಯ ಗೆದ್ದು, ಸೂಪರ್ -8 ಪ್ರವೇಶಿಸುವ ಕಾತರದಲ್ಲಿರುವ ಯುಎಸ್‌ಎ ತಂಡದ ಯಶಸ್ಸಿನ ಹಿಂದೆ ಭಾರತೀಯ ಮೂಲದವರ ಪಾತ್ರ ದೊಡ್ಡದು. ಅದು ಕೇವಲ ಒಂದಿಬ್ಬರಲ್ಲ. ತಂಡದ ಐತಿಹಾಸಿಕ ಗೆಲುವಿನ ಹಿಂದೆ ಬರೋಬ್ಬರಿ 7 ಮಂದಿ ಭಾರತೀಯ ಮೂಲದವರಿದ್ದಾರೆ. ಅವರ ಪರಿಚಯ ಇಲ್ಲಿದೆ.
1. ಅಮೆರಿಕ ನಾಯಕ ಮೋನಂಕ್ ಪಟೇಲ್
1993ರಲ್ಲಿ ಅಹಮದಾಬಾದ್‌ನಲ್ಲಿ ಜನಿಸಿದ್ದ ಮೋನಂಕ್ ಗುಜರಾತ್ ಪರ ಅಂಡರ್-16, ಅಂಡರ್-18 ತಂಡಗಳನ್ನು ಪ್ರತಿನಿಧಿಸಿದ್ದಾರೆ. ಆದರೆ ಕ್ರಿಕೆಟ್‌ನಲ್ಲಿ ಇನ್ನಷ್ಟು ಸಾಧಿಸುವ ಛಲ ಹೊಂದಿದ್ದ ಮೋನಂಕ್, ಭಾರತ ತೊರೆದು ಅಮೆರಿಕಕ್ಕೆ ತೆರಳಿದ್ದರು. 2010ರಿಂದಲೂ ಅಮೆರಿಕದ ನ್ಯೂ ಜೆರ್ಸಿಯಲ್ಲಿ ವಾಸಿಸುತ್ತಿರುವ ಮೋನಂಕ್, 2019ರಲ್ಲಿ ಅಮೆರಿಕ ಹಿರಿಯರ ತಂಡದ ಪರ ಪಾದಾರ್ಪಣೆ ಮಾಡಿದ್ದರು. ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಅಮೆರಿಕದ ನಾಯಕನಾಗಿರುವ ಅವರು, ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ.
ರೆಸ್ಟೋರೆಂಟ್ ತೆರೆದಿದ್ದ ಮೋನಂಕ್: ಅಮೆರಿಕಕ್ಕೆ ತೆರಳಿದ್ದ ಮೋನಂಕ್ 2016ರಲ್ಲಿ ಚೈನೀಸ್ ರೆಸ್ಟೋರೆಂಟ್ ತೆರೆದಿದ್ದರು. ಅಲ್ಲದೆ ರಾಷ್ಟ್ರೀಯ ತಂಡದಿಂದ ಹೊರಗಿರುವಾಗ ಸ್ಥಳೀಯ ಮಕ್ಕಳಿಗೆ ಕ್ರಿಕೆಟ್ ತರಬೇತಿ ನೀಡುತ್ತಿದ್ದರು. ವಾರಾಂತ್ಯದಲ್ಲಿ ಕ್ಲಬ್ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
2. ಮೂಡಿಗೆರೆಯ ನೊಸ್ತುಷ್ ಕೆಂಜಿಗೆ
ಅಮೆರಿಕ ತಂಡದಲ್ಲಿರುವ ನೊಸ್ತುಷ್ ಕೆಂಜಿಗೆ ಪ್ರಮುಖ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸ್ನೇಹಿತ, ಪ್ರಸಿದ್ಧ ಲೇಖಕರೂ ಆಗಿರುವ ಪ್ರದೀಪ್ ಕೆಂಜಿಗೆ ಅವರ ಪುತ್ರ, ನೊಸ್ತುಷ್ ಅಮೆರಿಕದಲ್ಲೇ ಜನಿಸಿದ್ದರೂ, ಬೆಳೆದಿದ್ದೆಲ್ಲಾ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ, ಕೆಎಸ್‌ಸಿಎ ಮೊದಲ ಡಿವಿಷನ್‌ನಲ್ಲಿ ಆಡಿದ್ದ ನೊಸ್ತುಷ್ 2015ರಲ್ಲಿ ಅಮೆರಿಕಕ್ಕೆ ಹಿಂದಿರುಗಿದ್ದರು. ಬಯೋ ಮೆಡಿಕಲ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ನೋಸ್ತುಷ್ ಅದನ್ನು ತೊರೆದು 2018ರಿಂದ ಅಮೆರಿಕ ತಂಡ ಪ್ರತಿನಿಧಿಸುತ್ತಿದ್ದಾರೆ. ಪಾಕ್ ವಿರುದ್ಧ ಪ್ರಮುಖ 3 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
3. ಸೌರಭ್ ನೇತ್ರವಾಲ್ಕರ್
ಪಾಕ್ ವಿರುದ್ಧ ಪಂದ್ಯದ ಸೂಪರ್ ಓವರ್ ಹೀರೋ ಸೌರಭ್ ನೇತ್ರವಾಲ್ಕರ್ 2010ರ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಮುಂಬೈ ಪರ ದೇಸಿ ಕ್ರಿಕೆಟ್ ಆಡುತ್ತಿದ್ದ ಸೌರಭ್ಗೆ ಸೂಕ್ತ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಕ್ರಿಕೆಟ್ ಭವಿಷ್ಯಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಸೌರಭ್, 2019ರಲ್ಲಿ ಅಮೆರಿಕ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಅದೇ ವರ್ಷ ಯುಎಇ ವಿರುದ್ಧ ಟಿ20 ಸರಣಿಯಲ್ಲಿ ತಂಡಕ್ಕೆ ನಾಯಕತ್ವ ವಹಿಸಿದ್ದರು. ಪಾಕ್ ವಿರುದ್ಧ ಗೆಲುವಿನಲ್ಲಿ ಸೌರಭ್ ಪಾತ್ರವೂ ಪ್ರಮುಖವಾದದ್ದು.
4. ಸ್ಪಿನ್ನರ್ ಹರ್ಮೀತ್ ಸಿಂಗ್
ಸೌರಭ್ರಂತೆಯೇ ಹರ್ಮೀತ್ ಸಿಂಗ್ ಕೂಡಾ ಭಾರತ ಪರ ಅಂಡರ್ -19 ವಿಶ್ವಕಪ್‌ನಲ್ಲಿ ಪ್ರತಿನಿಧಿಸಿದ್ದರು. 2012ರ ಕಿರಿಯರ ವಿಶ್ವಕಪ್‌ನಲ್ಲಿ ನೀಡಿದ್ದ ಪ್ರದರ್ಶನ ಕಂಡು ಆಸ್ಟ್ರೇಲಿಯಾದ ಇಯಾನ್ ಚಾಪೆಲ್ ಅವರು ಹರ್ಮೀತ್ ಭಾರತ ಹಿರಿಯರ ತಂಡದಲ್ಲಿ ಆಡಬೇಕೆಂದು ಬಯಸಿದ್ದರು.
ಮುಂಬೈ ಹಾಗೂ ತ್ರಿಪುರಾ ಪರ ರಣಜಿ ಆಡಿದ್ದ ಹರ್ಮೀತ್, 2013ರಲ್ಲಿ ಐಪಿಎಲ್‌ನ ರಾಜಸ್ಥಾನ ತಂಡದಲ್ಲಿದ್ದರು. 2017ರಲ್ಲಿ ಮುಂಬೈನ ಅಂಧೇರಿ ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿ ಬಂಧನಕ್ಕೊಳಗಾಗಿದ್ದರು.
5. ಆಲ್ರೌಂಡರ್ ಜಸ್‌ದೀಪ್
ನ್ಯೂ ಜೆರ್ಸಿಯಲ್ಲಿ ಜನಿಸಿರುವ ಜಸ್‌ದೀಪ್ ಸಿಂಗ್ ಪಂಜಾಬ್‌ನಲ್ಲಿ ಬಾಲ್ಯ ಕಳೆದಿದ್ದಾರೆ. 13ನೇ ವಯಸ್ಸಲ್ಲಿ ಮತ್ತೆ ಅಮೆರಿಕಕ್ಕೆ ಹಿಂದಿರುಗಿದ್ದ ಅವರು 2015ರಲ್ಲಿ ಅಮೆರಿಕ ಪರ ಮೊದಲ ಪಂದ್ಯ ಆಡಿದ್ದರು. ಮೇಜರ್ ಕ್ರಿಕೆಟ್ ಲೀಗ್ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಆಡಿರುವ ಅವರು
ಪಾಕ್ ವಿರುದ್ಧ ಪಂದ್ಯದಲ್ಲಿ ಆಜಂ ವಿಕೆಟ್ ಪಡೆದಿದ್ದಾರೆ.
6. ಮಿಲಿಂದ್ ಕುಮಾರ್
ಮಿಲಿಂದ್ ಕುಮಾರ್ ಮಾಜಿ ರಣಜಿ ಆಟಗಾರ. ಅವರು ರಣಜಿಯಲ್ಲಿ ಡೆಲ್ಲಿ ಹಾಗೂ ಸಿಕ್ಕಿಂ ತಂಡಗಳನ್ನು ಪ್ರತಿನಿಧಿಸಿದ್ದಾರೆ. 2014ರ ಐಪಿಎಲ್‌ನಲ್ಲಿ ಡೆಲ್ಲಿ ತಂಡ ಸೇರಿದ್ದ ಅವರು, 2019ರಲ್ಲಿ ಆರ್‌ಸಿಬಿಗೆ ಕ20 ಲಕ್ಷಕ್ಕೆ ಬಿಕರಿಯಾಗಿದ್ದರು. 2018-19ರ ರಣಜಿಯಲ್ಲಿ ಸಿಕ್ಕಿಂ ಪರ ಆಡಿದ್ದ ಮಿಲಿಂದ್ 1331 ರನ್‌ಗಳೊಂದಿಗೆ ಟೂರ್ನಿಯ ಗರಿಷ್ಠ ರನ್ ಸರದಾರ ಎನಿಸಿಕೊಂಡಿದ್ದರು. ಬಳಿಕ ಅವಕಾಶ ಕಡಿಮೆಯಾಗಿದ್ದರಿಂದ 2021ರಲ್ಲಿ ಅಮೆರಿಕಕ್ಕೆ ತೆರಳಿದ್ದರು. ಸದ್ಯ ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದಾರೆ.
7. ನಿತೀಶ್ ಕುಮಾರ್
2011ರ ವಿಶ್ವಕಪ್‌ನಲ್ಲಿ ಕೆನಡಾ ತಂಡವನ್ನು ಪ್ರತಿನಿಧಿಸಿದ್ದ ನಿತೀಶ್ ಕುಮಾರ್, ವಿಶ್ವಕಪ್ ಆಡಿದ 2ನೇ ಅತಿ ಕಿರಿಯ(16 ವರ್ಷ 283 ದಿನ) ಆಟಗಾರ ಎನಿಸಿಕೊಂಡಿದ್ದರು. ಬಳಿಕ ಕೆನಡಾ ತಂಡಕ್ಕೆ ನಾಯಕರಾಗಿದ್ದ ಅವರು 2019ರಲ್ಲಿ ಕೊನೆ ಬಾರಿ ತಂಡ ಪ್ರತಿನಿಧಿಸಿದ್ದಾರೆ. 2024ರಲ್ಲಿ ಅಮೆರಿಕದ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದಾರೆ.