Syed Mushtaq Ali Trophy: ಸೂಪರ್ ಓವರ್ ಗೆದ್ದು, ಸೆಮೀಸ್‌ಗೆ ಎಂಟ್ರಿ ಕೊಟ್ಟ ಕರ್ನಾಟಕ ಹುಡುಗರು

By Suvarna NewsFirst Published Nov 18, 2021, 5:01 PM IST
Highlights

* ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕಕ್ಕೆ ರೋಚಕ ಜಯ

* ಸೂಪರ್ ಓವರ್‌ನಲ್ಲಿ ಗೆದ್ದು ಸೆಮೀಸ್‌ಗೇರಿದ ಮನೀಶ್ ಪಾಂಡೆ ಬಳಗ

* ಲೀಗ್ ಹಂತದ ಸೋಲಿಗೆ ಸೇಡು ತೀರಿಸಿಕೊಂಡ ಕರ್ನಾಟಕದ ಹುಡುಗರು 

ದೆಹಲಿ(ನ.18): ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಬಲಿಷ್ಠ ಬೆಂಗಾಲ್ ತಂಡವನ್ನು ಸೂಪರ್ ಓವರ್‌ನಲ್ಲಿ ಮಣಿಸಿದ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡವು (Karnataka Cricket Team) ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ (Syed Mushtaq Ali Trophy) ಯಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. 

ಪಂದ್ಯ ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಗಿತ್ತು. ಸೂಪರ್‌ ಓವರ್‌ನಲ್ಲಿ ಕೇವಲ 6 ರನ್‌ಗಳ ಗುರಿ ಪಡೆದ ಕರ್ನಾಟಕ ಮೊದಲೆರಡು ಎಸೆತಗಳಲ್ಲೇ ಗೆಲುವು ದಾಖಲಿಸಿ, ಗ್ರೂಪ್‌ ಹಂತದಲ್ಲಿ ಬೆಂಗಾಲ್ ಎದುರು ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿತು.

SIX!!! Manish Pandey knocks the ball into stands and knocks out Bengal. Wow!! What a game!! ಏನ್ ಆಟ ಗುರು!! 🔥

— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka)

ಇದಕ್ಕೂ ಮೊದಲು ಕರ್ನಾಟಕ ನೀಡಿದ್ದ 161 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬೆಂಗಾಲ್ ತಂಡವು ಮೊದಲ ಓವರ್‌ನಲ್ಲೇ ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ಓವರ್‌ನಲ್ಲೇ ಶ್ರೀವಸ್ತ್‌ ಗೋಸ್ವಾಮಿ 20 ರನ್ ಬಾರಿಸಿದರು. ಆದರೆ ಎರಡನೇ ಓವರ್‌ನಲ್ಲಿ ಮತ್ತೋರ್ವ ಆರಂಭಿಕ ಬ್ಯಾಟರ್ ಅಭಿಷೇಕ್ ದಾಸ್ ತಾವೆದುರಿಸಿದ ಮೊದಲ ಎಸೆತದಲ್ಲೇ ಕರುಣ್ ನಾಯರ್‌ಗೆ (Karun Nair) ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಶ್ರೀವಸ್ತ್ ಗೋಸ್ವಾಮಿ 22 ರನ್ ಬಾರಿಸಿ ರನೌಟ್ ಆಗಿ ನಿರಾಸೆ ಅನುಭವಿಸಿದರು.

Syed Mushtaq Ali Trophy: ಬೆಂಗಾಲ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಕರ್ನಾಟಕ

ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿತ್ತಿಕ್ ಚೌಧರಿ ನೆಲಕಚ್ಚಿ ಆಡುವ ಪ್ರಯತ್ನ ಮಾಡಿದರು. ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗಲಿಲ್ಲ. ನಾಯಕ ಸುದಿಪ್ ಚೌಧರಿ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಕೈಫ್ ಅಹಮ್ಮದ್ 20 ರನ್‌ ಬಾರಿಸಿ ಸುಚಿತ್‌ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಮರು ಎಸೆತದಲ್ಲೇ ಶಹಬಾಜ್ ಅಹಮ್ಮದ್ ಕೂಡಾ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸಿದ ರಿತ್ತಿಕ್ ಚಟರ್ಜಿ 40 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 51 ರನ್‌ ಬಾರಿಸಿ ದರ್ಶನ್‌ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. 

ಕೊನೆಯಲ್ಲಿ ರಿತ್ವಿಕ್ ಚೌಧರಿ ಹಾಗೂ ಪ್ರದಿಪ್ತ ಪ್ರಮಾನಿಕ್ 7ನೇ ವಿಕೆಟ್‌ಗೆ 33 ರನ್‌ಗಳ ಉಪಯುಕ್ತ ಜತೆಯಾಟ ನಿಭಾಯಿಸಿದರು. ಕೊನೆಯ ಓವರ್‌ನಲ್ಲಿ ಬೆಂಗಾಲ್ ತಂಡವು ಗೆಲ್ಲಲು 20 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ವಿದ್ಯಾಧರ್ ಪಾಟಿಲ್ ವಹಿಸಿಕೊಂಡಿದ್ದರು. ರಿತ್ವಿಕ್ ಚೌಧರಿ ಮೊದಲೆರಡು ಎಸೆತಗಳಲ್ಲಿ 2 ಸಿಕ್ಸರ್ ಚಚ್ಚಿದರು. ಇದಾದ ಬಳಿಕ ಒಂದು ರನ್ ಪಡೆದರು. ಇನ್ನು ನಾಲ್ಕನೇ ಎಸೆತದಲ್ಲಿ ಆಕಾಶ್ ದೀಪ್ ಬೌಂಡರಿ ಬಾರಿಸಿದರು. ಹೀಗಾಗಿ ಕೊನೆಯ ಎರಡು ಎಸೆತಗಳಲ್ಲಿ ಬೆಂಗಾಲ್ ತಂಡ ಗೆಲ್ಲಲು ಕೇವಲ 3 ರನ್‌ಗಳ ಅಗತ್ಯವಿತ್ತು. ಇನ್ನು 5 ಎಸೆತದಲ್ಲಿ ಆಕಾಶ್ ಎರಡು ರನ್ ದೋಚಿದರು. ಕೊನೆಯ ಎಸೆತದಲ್ಲಿ ಮನೀಶ್ ಪಾಂಡೆ (Manish Pandey) ಚುರುಕಿನ ಕ್ಷೇತ್ರರಕ್ಷಣೆ ಮಾಡುವ ಮೂಲಕ ರನೌಟ್ ಮಾಡಿದರು. ಹೀಗಾಗಿ ಪಂದ್ಯ ಟೈ ಆಯಿತು.

ಸೂಪರ್‌ ಓವರ್ ಗೆದ್ದ ಕರ್ನಾಟಕ: ಸೂಪರ್ ಓವರ್‌ ಹೊಣೆಹೊತ್ತ ಕರ್ನಾಟಕದ ಮಿಸ್ಟ್ರಿ ಸ್ಪಿನ್ನರ್ ಕೆ.ಸಿ. ಕರಿಯಪ್ಪ ಮೊದಲಿಗೆ ಚುಕ್ಕೆ ಎಸೆತ ಹಾಕಿದರೆ. ಎರಡನೇ ಎಸೆತದಲ್ಲಿ ಕೈಫ್ ಅಹಮ್ಮದ್ ವಿಕೆಟ್ ಕಬಳಿಸಿದರು. ಇನ್ನು ಮೂರನೇ ಎಸೆತದಲ್ಲಿ ಗೋಸ್ವಾಮಿ ಬೌಂಡರಿ ಬಾರಿಸಿದರು. ನಾಲ್ಕನೇ ಎಸೆತದಲ್ಲಿ ಎರಡನೇ ರನ್ ಕದಿಯುವ ಯತ್ನದಲ್ಲಿ ರನೌಟ್ ಆದರು. ಹೀಗಾಗಿ ಕರ್ನಾಟಕ ಗೆಲ್ಲಲು ಕೇವಲ 6 ರನ್‌ಗಳ ಸಾಧಾರಣ ಗುರಿ ಪಡೆಯಿತು. ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಮೊದಲ ಎಸೆತದಲ್ಲಿ 2 ರನ್ ಬಾರಿಸಿದರೆ, ಎರಡನೇ ಎಸೆತದಲ್ಲಿ ಆಕರ್ಷಕ ಸಿಕ್ಸರ್ ಚಚ್ಚಿ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡಕ್ಕೆ ಕರುಣ್ ನಾಯರ್ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ಕೇವಲ 29 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 55 ರನ್ ಬಾರಿಸುವ ಮೂಲಕ ಕರ್ನಾಟಕ ತಂಡವು ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾಗಿದ್ದರು. 

click me!