ಭಾರತ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಕರ್ನಾಟಕ ಕ್ರಿಕೆಟ್ ತಂಡ ಸತತ 15 ಗೆಲುವು ಸಾಧಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಇದರ ಜತೆ ಮುಷ್ತಾಕ್ ಅಲಿ ಟೂರ್ನಿಯಲ್ಲಿ ರಾಜ್ಯ ತಂಡ ಶುಭಾರಂಭ ಮಾಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ವಿಶಾಖಪಟ್ಟಣಂ(ನ.09): ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ಶುಭಾರಂಭ ಮಾಡಿದೆ. ಶುಕ್ರವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ, ಉತ್ತರಾಖಂಡ ವಿರುದ್ಧ 9 ವಿಕೆಟ್‌ಗಳ ಗೆಲುವು ಸಾಧಿಸಿತು. ರಾಜ್ಯ ತಂಡಕ್ಕಿದು ಟಿ20 ಮಾದರಿಯಲ್ಲಿ ಸತತ 15ನೇ ಗೆಲುವು. ಸತತವಾಗಿ ಅತಿಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ಭಾರತದ ತಂಡ ಎನ್ನುವ ಹಿರಿಮೆಗೆ ಪಾತ್ರವಾಗಿದ್ದಲ್ಲದೆ ಜಾಗತಿಕ ಮಟ್ಟದಲ್ಲಿ ಜಂಟಿ 2ನೇ ಸ್ಥಾನಕ್ಕೇರಿದೆ. ನ್ಯೂಜಿಲೆಂಡ್ನ ಒಟಾಗೋ ತಂಡ ಸಹ ಸತತ 15 ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನದ ಸಿಯಾಲ್‌ಕೋಟ್ ಸ್ಟಾಲಿಯನ್ಸ್ ತಂಡ 2006ರಿಂದ 2010ರ ಅವಧಿಯಲ್ಲಿ ಸತತವಾಗಿ 25 ಪಂದ್ಯಗಳನ್ನು ಗೆದ್ದು ವಿಶ್ವ ದಾಖಲೆ ಬರೆದಿತ್ತು.
2017-18ರ ಮುಷ್ತಾಕ್ ಅಲಿ ಟಿ20ಯ ಸೂಪರ್ ಲೀಗ್ ಹಂತದ ಕೊನೆ 2 ಪಂದ್ಯಗಳನ್ನು ಗೆದ್ದಿದ್ದ ಕರ್ನಾಟಕ, 2018-19ರ ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೆ ಚಾಂಪಿಯನ್ ಆಗಿತ್ತು. ಗುಂಪು ಹಂತದಲ್ಲಿ 7, ಸೂಪರ್ ಲೀಗ್ ಹಂತದಲ್ಲಿ 4, ಫೈನಲ್‌ನಲ್ಲಿ ಗೆಲುವು ಸಾಧಿಸಿತ್ತು.
undefined
ಸುಲಭ ಗುರಿ: ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ಉತ್ತರಾಖಂಡ 20 ಓವರಲ್ಲಿ 6 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು. ನಾಯಕ ತನ್ಮಯ ಶ್ರೀವಾಸ್ತವ 39 ರನ್ ಗಳಿಸಿದರು. ಸುಲಭ ಗುರಿ ಬೆನ್ನತ್ತಿದ ಹಾಲಿ ಚಾಂಪಿಯನ್ ಕರ್ನಾಟಕ, ಆರಂಭದಲ್ಲೇ ಆರ್.ಸಮರ್ಥ್(07) ವಿಕೆಟ್ ಕಳೆದುಕೊಂಡರೂ, ಕೇವಲ 15.4 ಓವರ್ಗಳಲ್ಲಿ ಗುರಿ ತಲುಪಿತು. ರೋಹನ್ ಕದಂ 55 ಎಸೆತಗಳಲ್ಲಿ 67 ರನ್ ಸಿಡಿಸಿದರೆ, ದೇವದತ್ ಪಡಿಕ್ಕಲ್ 33 ಎಸೆತಗಳಲ್ಲಿ 53 ರನ್ ಚಚ್ಚಿದರು.
ಶನಿವಾರ ನಡೆಯಲಿರುವ 2ನೇ ಪಂದ್ಯದಲ್ಲಿ ಕರ್ನಾಟಕ ತಂಡ, ಬರೋಡಾ ವಿರುದ್ಧ ಸೆಣಸಲಿದ್ದು ಗೆಲುವಿನ ಓಟ ಮುಂದುವರಿಸಲು ಎದುರು ನೋಡುತ್ತಿದೆ.
ಸ್ಕೋರ್:
ಉತ್ತರಾಖಂಡ 20 ಓವರಲ್ಲಿ 132/6 (ತನ್ಮಯ್ 39, ಮಿಥುನ್ 2-20, ಶ್ರೇಯಸ್ 2-20)
ಕರ್ನಾಟಕ 15.4 ಓವರಲ್ಲಿ 133/1 (ರೋಹನ್ 67, ದೇವದತ್ 53)