ಏಷ್ಯಾಕಪ್ 2025: ಭಾರತ vs ಪಾಕ್ ಪಂದ್ಯದ ಬಗ್ಗೆ ಮಹತ್ವದ ಅಪ್‌ಡೇಟ್ ಕೊಟ್ಟ ಸುಪ್ರೀಂ ಕೋರ್ಟ್!

Published : Sep 12, 2025, 08:31 AM IST
Supreme Court  Of india

ಸಾರಾಂಶ

ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯ ರದ್ದುಗೊಳಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತುರ್ತು ವಿಚಾರಣೆಗೆ ನಿರಾಕರಿಸಿದೆ. ಪಹಲ್ಗಾಂ ಘಟನೆಯ ಹಿನ್ನೆಲೆಯಲ್ಲಿ ಪಂದ್ಯ ರದ್ದುಗೊಳಿಸಬೇಕೆಂದು ಕಾನೂನು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.  

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯ ರದ್ದುಗೊಳಿಸಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದ್ದು, ಪಂದ್ಯ ಅದರಷ್ಟಕ್ಕೆ ನಡೆಯಲಿ ಎಂದು ಅಭಿಪ್ರಾಯಪಟ್ಟಿದೆ.

ಪಹಲ್ಗಾಂ ಘಟನೆ ಬಳಿಕ ಉಭಯ ರಾಷ್ಟ್ರಗಳ ನಡುವೆ ಪಂದ್ಯ ನಡೆಯುವುದು ರಾಷ್ಟ್ರದ ಘನತೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ. ಹೀಗಾಗಿ ಪಂದ್ಯ ರದ್ದುಗೊಳಿಸಬೇಕು ಎಂದು ಊರ್ವಶಿ ಜೈನ್ ನೇತೃತ್ವದ ನಾಲ್ವರು ಕಾನೂನು ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಿದ್ದರು. ಭಾನುವಾರ ಪಂದ್ಯ ನಡೆಯಲಿದ್ದು, ಶುಕ್ರವಾರ ಅರ್ಜಿ ವಿಚಾರಣೆ ನಡೆಸಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಸಲ್ಲಿಸಿದ್ದರು. ಇದರ ತುರ್ತು ವಿಚಾರಣೆಗಾಗಿ ವಕೀಲರು, ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ವಿಜಯ್ ಬಿಡೋಮ್ ಅವರ ಪೀಠದ ಮುಂದೆ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 'ತುರ್ತು ವಿಚಾರಣೆಗೆ ಏನು ಆತುರ? ಭಾನುವಾರಕ್ಕೆ ಪಂದ್ಯ ನಿಗದಿಪಡಿಸಲಾಗಿದೆ. ಈಗ ನಾವೇನು ಮಾಡುವುದಕ್ಕೆ ಸಾಧ್ಯ? ಪಂದ್ಯ ನಡೆಯಲಿ ಬಿಡಿ' ಎಂದಿದೆ. ಸೆ.14ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ದುಬೈನಲ್ಲಿ ಪಂದ್ಯ ನಿಗದಿಯಾಗಿದೆ.

ಬಾರಿ ಚಾಂಪಿಯನ್ ಆಗಿರುವ ಟೀಂ ಇಂಡಿಯಾ, ಇದೀಗ 17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ಯುಎಇ ಎದುರು 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಇದೀಗ ಗ್ರೂಪ್ ಹಂತದ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಸೆಪ್ಟೆಂಬರ್ 14ರಂದು ನಡೆಯಲಿರುವ ಈ ಪಂದ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ಪೆಹಲ್ಗಾಂ ಉಗ್ರರ ದಾಳಿ ಇದಾದ ಬಳಿಕ ಆಪರೇಷನ್ ಸಿಂದೂರ್ ನಂತರ ಇದೇ ಮೊದಲ ಸಲ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ.

ಬಾಂಗ್ಲಾದೇಶ ಶುಭಾರಂಭ

ಅಬುಧಾಬಿ: ಏಷ್ಯಾಕಪ್‌ನಲ್ಲಿ 3 ಬಾರಿ ಫೈನಲ್‌ಗೇರಿರುವ ಬಾಂಗ್ಲಾದೇಶ, ಈ ಬಾರಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಗುರುವಾರ ಹಾಂಕಾಂಗ್ ವಿರುದ್ಧ ಪಂದ್ಯದಲ್ಲಿ ಬಾಂಗ್ಲಾ 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿತು. ಸತತ 2ನೇ ಸೋಲು ಕಂಡಿರುವ ಹಾಂಕಾಂಗ್‌ನ ಸೂಪರ್-4 ಪ್ರವೇಶಿಸುವ ಕನಸು ಬಹುತೇಕ ಭಗ್ನಗೊಂಡಿದೆ.

ಮೊದಲು ಬ್ಯಾಟ್ ಮಾಡಿದ ಹಾಂಕಾಂಗ್ 7 ವಿಕೆಟ್‌ಗೆ 143 ರನ್ ಕಲೆಹಾಕಿತು. ನಿಜಾಕತ್ ಖಾನ್ 42, ಝೀಶಾನ್ ಅಲಿ 30 ರನ್ ಗಳಿಸಿದರೆ, ನಾಯಕ ಯಾಸಿಮ್ ಮುರ್ತಜಾ 19 ಎಸೆತಗಳಲ್ಲಿ 28 ರನ್ ಸಿಡಿಸಿ ತಂಡದ ಮೊತ್ತವನ್ನು 140ರ ಗಡಿ ದಾಟಿಸಿದರು. ಬಾಂಗ್ಲಾ ಪರ ತಸ್ಕೀನ್ ಅಹ್ಮದ್, ತಂಜೀಮ್ ಹಸನ್ ಸಾಕಿಬ್, ರಿಶಾದ್ ಹೊಸೈನ್ ತಲಾ 2 ವಿಕೆಟ್ ಪಡೆದರು.

ಸುಲಭ ಗುರಿ ಪಡೆದ ಬಾಂಗ್ಲಾದೇಶ 17.4 ಓವರ್‌ಗಳಲ್ಲೇ ಗೆಲುವಿನ ದಡ ಸೇರಿತು. ಪವರ್ ಪ್ಲೇ ಓವರ್‌ಗಳ ಮುಕ್ತಾಯಕ್ಕೂ ಮುನ್ನವೇ 2 ವಿಕೆಟ್ ಕಳೆದುಕೊಂಡ ಬಾಂಗ್ಲಾದೇಶಕ್ಕೆ ಲಿಟನ್ ದಾಸ್ ಹಾಗೂ ತೌಹೀದ್ ಹೃದಯ್ (ಔಟಾಗದೆ 35) ಆಸರೆಯಾದರು. ನಾಯಕ ಲಿಟನ್ 39 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್‌ನೊಂದಿಗೆ 59 ರನ್ ಸಿಡಿಸಿ ತಂಡವನ್ನು ಗೆಲ್ಲಿಸಿದರು.

ಸ್ಕೋರ್: ಹಾಂಕಾಂಗ್ 143/7 (ನಿಜಾಕತ್ 42, ಜೀಶಾನ್ 30, ತಂಜೀಮ್ 2–21), ಬಾಂಗ್ಲಾ 17.4 ಓವರಲ್ಲಿ 144/3 (ಲಿಟನ್ 59, ತೌಹೀದ್ 35, ಅತೀಖ್ 2-14) ಪಂದ್ಯಶ್ರೇಷ್ಠ: ಲಿಟನ್ ದಾಸ್

ಇಂದು ಪಾಕ್ vs ಒಮಾನ್

ಟೂರ್ನಿಯಲ್ಲಿ ಶುಭಾರಂಭ ನಿರೀಕ್ಷೆಯಲ್ಲಿರುವ ಪಾಕಿಸ್ತಾನ, ಗುಂಪು ಹಂತದ ತನ್ನ ಮೊದಲ ಪಂದ್ಯದಲ್ಲಿ ಶುಕ್ರವಾರ ಒಮಾನ್ ವಿರುದ್ಧ ಸೆಣಸಾಡಲಿದೆ. ಸೆ.14ರಂದು ಭಾರತ ವಿರುದ್ಧ ಆಡಬೇಕಿರುವ ಪಾಕ್, ಅದಕ್ಕೂ ಮುನ್ನ ಸಿದ್ಧತಾ ಪಂದ್ಯ ಎಂಬಂತೆ ಒಮಾನ್ ವಿರುದ್ದ ಉತ್ತಮ ಪ್ರದರ್ಶನ ನೀಡಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ