
ದುಬೈ: 2025ರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡದ ಉಪನಾಯಕನಾಗಿರುವ ಶುಭ್‌ಮನ್ ಗಿಲ್, ಮೊದಲ ಪಂದ್ಯದಲ್ಲೇ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಸುಲಭವಾಗಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುಎಇ ಎದುರಿನ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಅಜೇಯ 20 ರನ್ ಸಿಡಿಸಿ ಮಿಂಚಿದರು. ಭಾರತ ತಂಡವು ಯುಎಇ ನೀಡಿದ್ದ 58 ರನ್‌ಗಳ ಗುರಿಯನ್ನು ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಇದೀಗ ಭಾರತ ತಂಡವು ಸೆಪ್ಟೆಂಬರ್ 14ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ್ಯ ಆರಂಭಕ್ಕೂ ಮುನ್ನ ಶುಭ್‌ಮನ್ ಗಿಲ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಏಷ್ಯಾಕಪ್ 2025ರ ಟೂರ್ನಿಗೆ ಇನ್ನೂ ಭಾರತ ತಂಡ ಘೋಷಿಸಿರಲಿಲ್ಲ. ಹೀಗಿರುವಾಗಲೇ ಗಿಲ್ ಭಾರತ ಟಿ20 ತಂಡಕ್ಕೆ ಕೂಡಿಕೊಳ್ಳುತ್ತಾರೆಯೇ ಇಲ್ಲವೇ ಎನ್ನುವ ಚರ್ಚೆ ಜೋರಾಗಿತ್ತು. ಯಾಕೆಂದರೆ 2024ರ ಟಿ20 ವಿಶ್ವಕಪ್ ಟೂರ್ನಿ ಬಳಿಕ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಭಾರತ ಪರ ಟಿ20 ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದರು. ಇನ್ನು ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಗಿಲ್ ಅಮೋಘ ಪ್ರದರ್ಶನ ತೋರುವ ಮೂಲಕ ಆಯ್ಕೆಗಾರರ ಮನ ಗೆದ್ದಿದ್ದರು. ಹೀಗಾಗಿ ಏಷ್ಯಾಕಪ್ ಟೂರ್ನಿಗೆ ಗಿಲ್ ಅವರನ್ನು ಆಯ್ಕೆ ಮಾಡುವುದರ ಜತೆಗೆ ಉಪನಾಯಕ ಪಟ್ಟವನ್ನು ಕಟ್ಟಲಾಯಿತು. ಇದೀಗ ಯುಎಇ ಎದುರು ಗಿಲ್ ಕೇವಲ 9 ಎಸೆತಗಳನ್ನು ಎದುರಿಸಿ ಎರಡು ಬೌಂಡರಿ ಹಾಗೂ ಒಂದು ಆಕರ್ಷಕ ಸಿಕ್ಸರ್ ನೆರವಿನಿಂದ 222.22 ಸ್ಟ್ರೈಕ್‌ರೇಟ್‌ನಲ್ಲಿ ಅಜೇಯ 20 ರನ್ ಸಿಡಿಸಿ ಮಿಂಚಿದ್ದಾರೆ.
ಯುಎಇ ಎದುರು ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ ಶುಭ್‌ಮನ್ ಗಿಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಗೆಲುವಿನ ಸಂಭ್ರಮಾಚರಣೆಯ ಫೋಟೋಗಳ ಜತೆಗೆ ಎರಡು ಪದಗಳ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಹೌದು, ಗಿಲ್ ಸ್ಟೆಪ್ ಒನ್(ಒಂದು ಹೆಜ್ಜೆಯಿಟ್ಟಾಗಿದೆ) ಎಂದು ಪೋಸ್ಟ್ ಮಾಡುವ ಮೂಲಕ ಎರಡನೇ ಹೆಜ್ಜೆ ಪಾಕ್ ಎದುರು ಎನ್ನುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಅಂದರೆ ಪಾಕಿಸ್ತಾನ ಎದುರು ತಮ್ಮ ಸ್ಪೋಟಕ ಬ್ಯಾಟಿಂಗ್ ಮುಂದುವರೆಯಲಿದೆ ಎನ್ನುವ ವಾರ್ನಿಂಗ್ ಗಿಲ್ ರವಾನಿಸಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಯುಎಇ ತಂಡವು ಕೇವಲ 57 ರನ್‌ಗಳಿಗೆ ಸರ್ವಪತನ ಕಂಡಿತು. ಕುಲ್ದೀಪ್ ಯಾದವ್ 4 ವಿಕೆಟ್ ಪಡೆದರೆ, ಶಿವಂ ದುಬೆ 3, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಹಾಗೂ ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು. ಇನ್ನು ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ, 4.3 ಓವರ್‌ಗಳಲ್ಲಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.