ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್, ಮುಂಬರುವ ವಿಶ್ವಕಪ್‌ನಲ್ಲಿ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡವನ್ನು ಹೆಸರಿಸಿದ್ದಾರೆ. ಆದರೆ ಸನ್ನಿ ಹೆಸರಿಸಿದ ತಂಡ ಭಾರತ ಅಥವಾ ನೆರೆಯ ಪಾಕಿಸ್ತಾನವಲ್ಲ ಎನ್ನುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ನವದೆಹಲಿ(ಸೆ.30): ಜಾಗತಿಕ ಕ್ರಿಕೆಟ್ ಹಬ್ಬ, 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಅಕ್ಟೋಬರ್ 05ರಂದು ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದ್ದು, ಇದೇ ಮೊದಲ ಬಾರಿಗೆ ಸಂಪೂರ್ಣ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸುತ್ತಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ 2019ರ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ.
ಇನ್ನು ಅತಿಥೇಯ ಭಾರತ ಕ್ರಿಕೆಟ್ ತಂಡವು ಅಕ್ಟೋಬರ್ 08ರಂದು 5 ಬಾರಿಯ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ದ ಚೆನ್ನೈನಲ್ಲಿ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಇದೀಗ ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್, ಮುಂಬರುವ ವಿಶ್ವಕಪ್‌ನಲ್ಲಿ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡವನ್ನು ಹೆಸರಿಸಿದ್ದಾರೆ. ಆದರೆ ಸನ್ನಿ ಹೆಸರಿಸಿದ ತಂಡ ಭಾರತ ಅಥವಾ ನೆರೆಯ ಪಾಕಿಸ್ತಾನವಲ್ಲ ಎನ್ನುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಹೌದು, ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು ಈ ಬಾರಿ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡ ಎನಿಸಿಕೊಂಡಿದೆ. ಇಂಗ್ಲೆಂಡ್ ತಂಡದಲ್ಲಿ ಮಾರಕ ಬೌಲಿಂಗ್ ಪಡೆಯನ್ನು ಹೊಂದಿದೆ. ಇದಷ್ಟೇ ಅಲ್ಲದೇ ಈ ತಂಡದಲ್ಲಿ ಸಾಕಷ್ಟು ವಿಶ್ವದರ್ಜೆಯ ಆಲ್ರೌಂಡರ್‌ಗಳಿದ್ದಾರೆ. ಈ ಕಾರಣಕ್ಕಾಗಿಯೇ ಇಂಗ್ಲೆಂಡ್ ಈ ಬಾರಿಯ ಕಪ್ ಗೆಲ್ಲಬಲ್ಲ ಫೇವರೇಟ್ ತಂಡವೆಂದು ಸನ್ನಿ ಅಭಿಪ್ರಾಯಪಟ್ಟಿದ್ದಾರೆ.
"ಹಾಲಿ ಚಾಂಪಿಯನ್ ಇಂಗ್ಲೆಂಡ್ ಈ ಬಾರಿ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡ ಎನಿಸಿದೆ. ಯಾಕೆಂದರೆ ಇಂಗ್ಲೆಂಡ್ ತಂಡದಲ್ಲಿ ಸಾಕಷ್ಟು ಪ್ರತಿಭಾನ್ವಿತ ಆಟಗಾರರ ದಂಡೇ ಇದೆ. ಬ್ಯಾಟಿಂಗ್‌ನ ಅಗ್ರಕ್ರಮಾಂಕ ಸಾಕಷ್ಟು ಸದೃಢವಾಗಿದೆ. ಇದರ ಜತೆಗೆ ಎರಡರಿಂದ ಮೂರು ವಿಶ್ವದರ್ಜೆಯ ಆಲ್ರೌಂಡರ್‌ಗಳಿದ್ದಾರೆ. ಇವರೆಲ್ಲಾ ಏಕಾಂಗಿಯಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದಷ್ಟೇ ಅಲ್ಲದೇ ಬೌಲಿಂಗ್ ವಿಭಾಗ ಕೂಡಾ ಸಾಕಷ್ಟು ಬಲಾಢ್ಯವಾಗಿದೆ. ಸದ್ಯದ ಮಟ್ಟಿಗೆ ಇಂಗ್ಲೆಂಡ್ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿದೆ" ಎಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಅನುಷ್ಕಾ ಶರ್ಮಾ ಪ್ರಗ್ನೆಂಟ್, ಎರಡನೇ ಮಗುವಿನ ನಿರೀಕ್ಷೆಯಲ್ಲಿ ಕಿಂಗ್ ಕೊಹ್ಲಿ..?
ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಇದೀಗ ಸಾಕಷ್ಟು ಅಳೆದು ತೂಗಿ ಮುಂಬರುವ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಅಂತಿಮ 15 ಆಟಗಾರರನ್ನೊಳಗೊಂಡ ತಂಡ ಪ್ರಕಟಿಸಲಾಗಿದೆ. ಈ ಪೈಕಿ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಪಟ್ಟ ಅಲಂಕರಿಸಲು ಪ್ರಮುಖ ಪಾತ್ರವಹಿಸಿದ್ದ ಸ್ಪೋಟಕ ಆರಂಭಿ ಬ್ಯಾಟರ್ ಜೇಸನ್ ರಾಯ್ ಅವರನ್ನು ಕೈಬಿಟ್ಟು, ಇದೀಗ 24 ವರ್ಷದ ಯುವ ಬ್ಯಾಟರ್ ಹ್ಯಾರಿ ಬ್ರೂಕ್‌ಗೆ ಇಂಗ್ಲೆಂಡ್ 15 ಆಟಗಾರರನ್ನೊಳಗೊಂಡ ವಿಶ್ವಕಪ್ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.
2023ರ ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಹೀಗಿದೆ ನೋಡಿ:
ಜೋಸ್ ಬಟ್ಲರ್(ನಾಯಕ), ಮೋಯಿನ್ ಅಲಿ, ಗುಸ್ ಅಟ್ಕಿನ್‌ಸನ್, ಜಾನಿ ಬೇರ್‌ಸ್ಟೋವ್, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೋ ರೂಟ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲೆ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್.