Ind vs Pak ಪಾಕ್ ಸದೆಬಡಿದ ಭಾರತ; ಪುಟ್ಟ ಮಗುವಿನಂತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ಸುನಿಲ್ ಗವಾಸ್ಕರ್..!

By Naveen Kodase  |  First Published Oct 24, 2022, 10:55 AM IST

ಪಾಕಿಸ್ತಾನ ವಿರುದ್ದ ರೋಚಕ ಜಯ ಸಾಧಿಸಿದ ಟೀಂ ಇಂಡಿಯಾ
ಟೀಂ ಇಂಡಿಯಾ ಗೆಲುವನ್ನು ಭರ್ಜರಿಯಾಗಿ ಸಂಭ್ರಮಿಸಿದ ಕ್ರಿಕೆಟ್ ಅಭಿಮಾನಿಗಳು
ಪಂದ್ಯ ಗೆಲುವಿನ ಬೆನ್ನಲ್ಲೇ ಕುಣಿದು ಕುಪ್ಪಳಿಸಿದ ಸುನಿಲ್ ಗವಾಸ್ಕರ್


ಮೆಲ್ಬರ್ನ್(ಅ.24): ಕೆಲ ವಾರಗಳ ಹಿಂದೆ ಅನೇಕರು ವಿರಾಟ್‌ ಕೊಹ್ಲಿ ಇನ್ನೂ ಭಾರತ ಟಿ20 ತಂಡದಲ್ಲಿ ಇರಬೇಕಾ? ಎಂದು ಪ್ರಶ್ನೆ ಮಾಡುತ್ತಿದ್ದರು. ಮುಂದಿನ ಒಂದೆರಡು ವರ್ಷ ಈ ಪ್ರಶ್ನೆಯನ್ನು ಮತ್ತಿನ್ಯಾರೂ ಕೇಳುವುದಿಲ್ಲ. ಕೊಹ್ಲಿಯ ಈ ಇನ್ನಿಂಗ್‌್ಸ ಅನ್ನು ಯಾರೂ ಮರೆಯಲೂ ಸಾಧ್ಯವಿಲ್ಲ. 2021ರ ಟಿ20 ವಿಶ್ವಕಪ್‌ನಲ್ಲಿ ಹೀನಾಯವಾಗಿ ಸೋತಿದ್ದ ಭಾರತ, 2022ರ ವಿಶ್ವಕಪ್‌ನಲ್ಲಿ ಕೊನೆ ಬಾಲ್‌ ಥ್ರಿಲ್ಲರ್‌ ಗೆಲ್ಲುವ ಮೂಲಕ ಪಾಕಿಸ್ತಾನ ವಿರುದ್ಧ ಸೇಡು ತೀರಿಸಿಕೊಂಡಿದೆ. 4 ವಿಕೆಟ್‌ಗಳ ರೋಚಕ ಗೆಲುವಿನೊಂದಿಗೆ ಟೀಂ ಇಂಡಿಯಾ ತನ್ನ ಅಭಿಯಾನ ಆರಂಭಿಸಿದೆ. ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಟೀಂ ಇಂಡಿಯಾ ಕೊನೆಯ ಎಸೆತದಲ್ಲಿ ಗೆಲುವಿನ ನಗೆ ಬೀರಿತು. ಈ ಪಂದ್ಯದ ಗೆಲುವನ್ನು ಭಾರತದ ಹಿರಿಕಿರಿಯರೆನ್ನದೇ ಸಂಭ್ರಮಿಸಿದ್ದಾರೆ. ಇನ್ನು ಕ್ರಿಕೆಟ್‌ ದಂತಕಥೆ ಸುನಿಲ್ ಗವಾಸ್ಕರ್ ಕೂಡಾ ಟೀಂ ಇಂಡಿಯಾ ಗೆಲುವನ್ನು ಪುಟ್ಟ ಮಗುವಿನಂತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.

ಭಾರತ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಒಂದು ದಿನ ಮುಂಚಿತವಾಗಿಯೇ ದೀಪಾವಳಿ ಗಿಫ್ಟ್ ನೀಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಭಾನುವಾರ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯ ಹಲವಾರು ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಸ್ಮೃತಿ ಪಟಲದಲ್ಲಿ ಅಚ್ಚಳಿಯದೇ ಉಳಿಯಲಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅಜೇಯ 82 ರನ್ ಬಾರಿಸುವ ಮೂಲಕ ಟೀಂ ಇಂಡಿಯಾ ಸ್ಮರಣೀಯ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಭಾರತ ತಂಡವು ಬದ್ದ ಎದುರಾಳಿ ಪಾಕಿಸ್ತಾನ ಎದುರು 4 ವಿಕೆಟ್‌ ರೋಚಕ ಜಯ ಸಾಧಿಸುತ್ತಿದ್ದಂತೆಯೇ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹುಚ್ಚೆದ್ದು ಕುಣಿದು ಸಂಭ್ರಮಿಸಿದರು. ಒಂದು ದಿನ ಮುಂಚಿತವಾಗಿಯೇ ಭಾರತದಲ್ಲಿ ದೀಪಾವಳಿ ಪಟಾಕಿ ಸಿಡಿಸಿ  ಸಂಭ್ರಮಿಸಿದರು.

Latest Videos

undefined

ಇದೇ ಮೊದಲ ಬಾರಿಗೆ ಮೈದಾನದಲ್ಲಿ ಕಣ್ಣೀರಿಟ್ಟ ಕೊಹ್ಲಿ, ಚಾಂಪಿಯನ್ಸ್ ಕಿಂಗ್‌ಗೆ ದಿಗ್ಗಜರ ಸಲಾಂ!

ಅಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟ್ ವಿಶ್ಲೇಷಕರಾಗಿ ಪಾಲ್ಗೊಂಡಿರುವ ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಕೂಡಾ ಭಾರತ ಪಂದ್ಯ ಗೆಲ್ಲುತ್ತಿದ್ದಂತೆಯೇ ಅಕ್ಷರಶಃ ಪುಟ್ಟ ಮಗುವಿನಂತೆ ನಿಂತಲ್ಲಿಯೇ ಕುಣಿದು ಕುಪ್ಪಳಿಸಿ ಈ ಗೆಲುವನ್ನು ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೇಗಿತ್ತು ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ..?:

ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ತಂಡವು ಶಾನ್ ಮಸೂದ್ ಹಾಗೂ ಇಫ್ತಿಕಾರ್ ಅಹಮ್ಮದ್ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 159 ರನ್ ಬಾರಿಸಿತ್ತು. ಭಾರತ ಪರ ಆರ್ಶದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ತಲಾ ಒಂದೊಂದು ವಿಕೆಟ್ ಉರುಳಿಸಿದರು. 

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಹ್ಯಾರಿಸ್ ರೌಫ್ ಮಾರಕ ದಾಳಿಗೆ ತತ್ತರಿಸಿ 31 ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಆದರೆ 5ನೇ ವಿಕೆಟ್‌ಗೆ ಜತೆಯಾದ ಹಾರ್ದಿಕ್ ಪಾಂಡ್ಯ ಹಾಗೂ ವಿರಾಟ್ ಕೊಹ್ಲಿ ಸಮಯೋಚಿತ 113 ರನ್‌ಗಳ ಜತೆಯಾಟ ನಿಭಾಯಿಸಿದರು. ಹಾರ್ದಿಕ್ ಪಾಂಡ್ಯ 40 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ಅಜೇಯ 82 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದಲ್ಲೇ ತಾವೊಬ್ಬ ಚಾಂಪಿಯನ್ ಆಟಗಾರ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

click me!